Cinema News
ನಾಲ್ಕು ಪ್ರಮುಖ ಪಾತ್ರಗಳ ಸುತ್ತ ಸಾಗುವ ಕ್ರೈಮ್ ಥ್ರಿಲ್ಲರ್ ‘ಪತ್ತೇದಾರಿ’
ಎ.ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಹಾಗೂ ಶ್ರೀನಿವಾಸ್ ಜಯರಾಮ್ ರಚನೆ ಮತ್ತು ನಿರ್ದೇಶನದ ‘ಪತ್ತೇದಾರಿ’ ಚಿತ್ರದ ಪೋಸ್ಟರ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ಅದ್ಧೂರಿಯಾಗಿ ನಡೆಯಿತು. ಈ ಮೂಲಕ ಹೊಸ ಪ್ರತಿಭೆ ಕಿಝಾರ್ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಕಲಾವಿದರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಯೂರ್ ಪಟೇಲ್, ‘ಶಿಷ್ಯ’ ದೀಪಕ್, ಕಾಕ್ರೋಜ್ ಸುಧೀ, ಚೆಲುವರಾಜ್, ಅರವಿಂದ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರದ ಪೋಸ್ಟರ್ ಅನಾವರಣ ಮಾಡುವ ಮೂಲಕ ಸಿನಿಮಾಗೆ ಶುಭಾರಂಭ ನೀಡಿದರು.
‘ಗಜಪಡೆ’ ಬಳಿಕ ನಿರ್ದೇಶಕ ಶ್ರೀನಿವಾಸ್ ಜಯರಾಮ್ ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಶೀರ್ಷಿಕೆಯೇ ಸೂಚಿಸುವಂತೆ ಇದು ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ವಿಭಿನ್ನವಾದ ಚಿತ್ರಕಥೆಯೊಂದಿಗೆ ಸಿನಿಮಾ ಮೂಡಿಬರಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ನಾಲ್ಕು ಪ್ರಮುಖ ಪಾತ್ರಗಳ ಸುತ್ತ ಕಥೆ ಸಾಗಲಿದ್ದು, ಕಿಝಾರ್ ಜೊತೆಗೆ ಗಿರಿ, ರೂಪ ಹಾಗೂ ಸಿದ್ದೇಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನಾಯಕ ಕಿಝಾರ್ ಮಾತನಾಡಿ, ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಯಾವುದೇ ನಟನಾ ಶಾಲೆಯಲ್ಲಿ ಕಲಿಯದೇ ಕನ್ನಡದ ಹಿರಿಯ ನಟರ ಸಿನಿಮಾಗಳನ್ನು ನೋಡಿ ನಟನೆಯ ಪ್ರೇರಣೆ ಪಡೆದಿದ್ದೇನೆ ಎಂದರು. ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರಿನಲ್ಲಿ ಹೆಚ್ಚಿನ ಭಾಗದ ಚಿತ್ರೀಕರಣ ನಡೆಯಲಿದೆ.