News
ವರಮಹಾಲಕ್ಷ್ಮೀ ಹಬ್ಬದಂದು ಚಿತ್ರದುರ್ಗದಲ್ಲಿ ‘ಪೈಲ್ವಾನ್’ ಹಾಡುಗಳ ಹಬ್ಬ
ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷೆಯ ಸಿನಿಮಾ ‘ಪೈಲ್ವಾನ್’ ಸಿನಿಮಾ ಸೆ.12ಕ್ಕೆ ಬಿಡುಗಡೆಯಾಗಲು ತಯಾರಿ ನಡೆಸಿದೆ. ಅದಕ್ಕೆ ಮುನ್ನ ವರಮಹಾಲಕ್ಷ್ಮೀ ಹಬ್ಬದಂದು ಸಿನಿಮಾದ ಆಡಿಯೋವನ್ನು ಚಿತ್ರದುರ್ಗದಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.
ಈ ಹಿಂದೆಯೇ ಪೈಲ್ವಾನ್ ಸಿನಿಮಾದ ಆಡಿಯೋವನ್ನು ಬಿಡುಗಡೆ ಮಾಡಲು ಪ್ಲಾನ್ ಆಗಿತ್ತು. ಆದರೆ ಸಿನಿಮಾ ರಿಲೀಸ್ ಮುಂದಕ್ಕೆ ಹೋದ ಕಾರಣ ಆಡಿಯೋ ಬಿಡುಗಡೆ ಸಮಾರಂಭ ಸಹ ಮುಂದಕ್ಕೆ ಹೋಯಿತು. ಈಗ ಎಲ್ಲವೂ ಫಿಕ್ಸ್ ಆಗಿದ್ದು, ವರಮಹಾಲಕ್ಷ್ಮೀ ಹಬ್ಬದಿಂದ ಪೈಲ್ವಾನ್‌ನ ಹಾಡುಗಳನ್ನು ಕೇಳಬಹುದು.
ಇನ್ನು ಈಗಾಗಲೇ ಮೂರು ಹಾಡುಗಳು ಆನ್‌ಲೈನ್‌ನಲ್ಲಿ ಬಿಡುಗಡೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಜತೆಗೆ ಸುದೀಪ್ ಅವರ ಸ್ಪೇಷಲ್ ಲುಕ್ ಕೂಡಾ ಅಭಿಮಾನಿಗಳನ್ನು ಹುಚ್ಚೆಬ್ಬಿಸುವಂತೆ ಮಾಡಿದೆ. ಹಾಗಾಗಿ ಸಿನಿಮಾ ಮತ್ತು ಹಾಡುಗಳ ಮೇಲೆ ನಿರೀಕ್ಷೆ ಹೆಚ್ಚಾಗುತ್ತಲೇ ಇದೆ.
ಸುದೀಪ್, ಸುನೀಲ್ ಶೆಟ್ಟಿ, ಆಕಾಂಕ್ಷ ಸಿಂಗ್, ಕಬೀರ್ ದುಹಾನ್ ಸಿಂಗ್ ಸೇರಿದಂತೆ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ. ಚಿತ್ರಕ್ಕೆ ಕೃಷ್ಣ ಅವರು ನಿರ್ದೇಶನ ಮಾಡಿದರೆ, ಅವರ ಪತ್ನಿ ಸ್ವಪ್ನ ಕೃಷ್ಣ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ.