Cinema News
ಪ್ರಮೋದ್ ಶೆಟ್ಟಿ ಅವರ ವಿಭಿನ್ನ ಲುಕ್‌ನಲ್ಲಿ ‘NH 66’ ಕುತೂಹಲ ಹೆಚ್ಚಿಸಿದ ಚಿತ್ರತಂಡ
ರಾಯ ಫಿಲಂಸ್ ಲಾಂಛನದಲ್ಲಿ ಮಂಜುನಾಥ್ ಟಿ.ಆರ್ ನಿರ್ಮಿಸಿ, ನಿರ್ದೇಶಿಸಿರುವ ‘NH 66’ ಚಿತ್ರದ ಕೆಲಸಗಳು ಬಹುತೇಕ ಪೂರ್ಣಗೊಂಡಿವೆ. ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್ ಹಾಗೂ ರಾಜೇಶ್ ನಟರಂಗ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳೂ ಪೂರ್ಣಗೊಂಡಿವೆ. ಇದೀಗ ಚಿತ್ರದ ಪ್ರಮುಖ ಪಾತ್ರಧಾರಿಗಳಲ್ಲಿ ಒಬ್ಬರಾದ ಪ್ರಮೋದ್ ಶೆಟ್ಟಿ ಅವರ ಫಸ್ಟ್ ಲುಕ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಅವರ ವಿಭಿನ್ನ ಪಾತ್ರದ ಲುಕ್ ಸಾಕಷ್ಟು ಗಮನ ಸೆಳೆಯುತ್ತಿದೆ.
‘NH 66’ ಎಂಬ ಶೀರ್ಷಿಕೆಗೆ ತಕ್ಕಂತೆ ಈ ಸಿನಿಮಾ ಒಂದು ವಿಶಿಷ್ಟ ಪಯಣದ ಕಥೆಯನ್ನು ಹೇಳಲಿದೆ. ಮಂಗಳೂರಿನಿಂದ ಮುಂಬೈಗೆ ಸಾಗುವ ಪ್ರಯಾಣದ ನಡುವೆ ನಡೆಯುವ ಎರಡು ದಿನಗಳ ಘಟನೆಗಳನ್ನು ಕೇಂದ್ರವಾಗಿಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ. ಪ್ರಯಾಣದ ಹಾದಿಯಲ್ಲಿ ಎದುರಾಗುವ ಸನ್ನಿವೇಶಗಳು ಮತ್ತು ಪಾತ್ರಗಳ ಮೂಲಕ ಕಥೆ ಸಾಗಲಿದ್ದು, ವಿಭಿನ್ನ ಅನುಭವ ನೀಡುವ ನಿರೀಕ್ಷೆ ಮೂಡಿಸಿದೆ.
ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಅವರು ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕಾಗಿ ಅವರ ಲುಕ್ ಕೂಡ ವಿಭಿನ್ನವಾಗಿದ್ದು, ಬಿಡುಗಡೆಯಾಗಿರುವ ಫಸ್ಟ್ ಲುಕ್ ಚಿತ್ರದ ಕಥೆ ಹಾಗೂ ಪಾತ್ರದ ಬಗ್ಗೆ ಕುತೂಹಲ ಮೂಡಿಸಿದೆ. ಗುರುರಾಯರ ಪರಮಭಕ್ತರಾಗಿರುವ ನಿರ್ಮಾಪಕ-ನಿರ್ದೇಶಕ ಟಿ.ಆರ್. ಮಂಜುನಾಥ್ ಅವರು ರಾಯರ ಸನ್ನಿಧಿಯಲ್ಲೇ ‘NH 66’ ಸಿನಿಮಾಗೆ ಚಾಲನೆ ನೀಡಿದ್ದರು. ರಾಯರ ಅನುಗ್ರಹದಿಂದ ಚಿತ್ರ ತಾವು ಅಂದುಕೊಂಡ ರೀತಿಯಲ್ಲೇ ಮೂಡಿಬಂದಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಟಿ.ಆರ್. ಮಂಜುನಾಥ್ ಅವರೇ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ರಚಿಸಿದ್ದಾರೆ. ಸುನೀತ್ ಹಲಗೇರಿ ಛಾಯಾಗ್ರಹಣ ನಿರ್ವಹಿಸಿದ್ದು, ಸ್ವಾಮಿನಾಥನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ‘NH 66’ ಇದೀಗ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗುತ್ತಿದೆ.