Cinema News

ಹೊಸತಂಡದ ಪ್ರೇಮಕಥೆ “ಕೀರ್ತಿ ಐ ಲವ್ ಯು” ಜುಲೈ 31ಕ್ಕೆ ತೆರೆಗೆ

Published

on

ಕನ್ನಡದಲ್ಲಿ ಅನೇಕ ಪ್ರೇಮಕಥಾ ಚಿತ್ರಗಳು ಬಂದಿದ್ದರೂ, ವಿಭಿನ್ನ ನಿರೂಪಣೆಯೊಂದಿಗೆ ಹೊಸ ತಂಡವೊಂದು “ಕೀರ್ತಿ ಐ ಲವ್ ಯು” ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದೆ. ಪೂಜಿತಾ ಎಸ್ ರಾವ್ ನಿರ್ಮಾಣದ ಈ ಚಿತ್ರವನ್ನು ನಿರಂಜನ್ ಆರಾಧ್ಯ ನಿರ್ದೇಶಿಸುತ್ತಿದ್ದು, ಪ್ರಜ್ಯೋತ್ ಎಸ್ ರಾವ್ ನಾಯಕನಾಗಿ ಹಾಗೂ ನಿಧಿ ಗೌಡ ನಾಯಕಿಯಾಗಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಚಿತ್ರದ ಮೊದಲ ಹಾಡು “ಮುದ್ದಾದ ಮೂಗುತಿ” ಬಿಡುಗಡೆಗೊಂಡಿದ್ದು, ಸಿರಿ ಮ್ಯೂಸಿಕ್ ಮೂಲಕ ಹಾಡು ಜನರಿಗೆ ತಲುಪಿದೆ.

 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ನಿರಂಜನ್ ಆರಾಧ್ಯ, “ಇದು ನನ್ನ ಮೊದಲ ನಿರ್ದೇಶನದ ಸಿನಿಮಾ. ಪ್ರೀತಿಯ ಅರ್ಥವನ್ನು ಹೊಸ ದೃಷ್ಟಿಕೋನದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಇಂದಿನ ಯುವಜನತೆಯಲ್ಲಿ ಕಡಿಮೆ ವಯಸ್ಸಿನಲ್ಲೇ ಪ್ರೀತಿ ಮತ್ತು ಡೇಟಿಂಗ್‌ ಕುರಿತ ಅತಿಯಾದ ಆಕರ್ಷಣೆ ಕಾಣಿಸುತ್ತಿದೆ. ಆ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಅಂಶವೂ ಸಿನಿಮಾದಲ್ಲಿದೆ” ಎಂದರು. ಅಭಿರಾಮ್ ಸಂಗೀತ ನೀಡಿರುವ ಮೂರು ಹಾಡುಗಳಲ್ಲಿ ಮೊದಲ ಹಾಡಿಗೆ ಅರುಣ್ ಕುಮಾರ್ ಸಾಹಿತ್ಯ ಬರೆದಿದ್ದು, ಆರ್ಫಾಜ್ ಉಲ್ಲಾಳ್ ಧ್ವನಿ ನೀಡಿದ್ದಾರೆ. ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಜುಲೈ 31ರಂದು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.

 

 

 

 

 

ನಾಯಕ ಪ್ರಜ್ಯೋತ್ ಎಸ್ ರಾವ್ ಮಾತನಾಡಿ, “ನಟನೆಗೆ ಆದರ್ಶ ಫಿಲಂ ಇನ್ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆದಿದ್ದೇನೆ. ನಟನಾಗುವ ಪ್ರೇರಣೆಯನ್ನು ಕಿಚ್ಚ ಸುದೀಪ್ ಅವರಿಂದ ಪಡೆದಿದ್ದೇನೆ. ಅವರೇ ನನ್ನ ಸ್ಪೂರ್ತಿ. ನನ್ನ ಅಕ್ಕ ಪೂಜಿತಾ ಎಸ್ ರಾವ್ ನಿರ್ಮಾಪಕಿಯಾಗಿ ಬೆಂಬಲ ನೀಡಿರುವುದು ಖುಷಿಯ ವಿಚಾರ” ಎಂದು ಹೇಳಿದರು. ಚಿತ್ರತಂಡದ ಸಹಕಾರದಿಂದ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

 

 

 

 

 

 

ನಿರ್ಮಾಪಕಿ ಪೂಜಿತಾ ಎಸ್ ರಾವ್, “ತಮ್ಮನ ಕನಸನ್ನು ನನಸು ಮಾಡುವ ಉದ್ದೇಶದಿಂದ ಈ ಚಿತ್ರ ನಿರ್ಮಾಣಕ್ಕೆ ಮುಂದಾದೆ. ಯುವಜನತೆ ನೋಡಲೇಬೇಕಾದ ವಿಷಯವನ್ನು ಸಿನಿಮಾ ಒಳಗೊಂಡಿದೆ” ಎಂದರು. ಕಾರ್ಯಕ್ರಮದಲ್ಲಿ ನಾಯಕಿ ನಿಧಿ ಗೌಡ ತಮ್ಮ ಪಾತ್ರದ ಕುರಿತು ಮಾಹಿತಿ ಹಂಚಿಕೊಂಡರು. ಇದೇ ವೇಳೆ ಸಿರಿ ಮ್ಯೂಸಿಕ್ ಸುರೇಶ್ ಚಿಕ್ಕಣ್ಣ, ಸಂಗೀತ ನಿರ್ದೇಶಕ ಅಭಿರಾಮ್, ಛಾಯಾಗ್ರಾಹಕರಾದ ಅಭಿಷೇಕ್ ಹಾಗೂ ರೋಹಿತ್ ದನಿ, ಸಹ ನಿರ್ಮಾಪಕ ಯತೀಶ್ ಕುಮಾರ್, ಶಮಂತ್ ಶೆಟ್ಟಿ, ನಟ ಹರೀಶ್ ಕುಮಾರ್ ಮತ್ತು ಕಾರ್ಯಕಾರಿ ನಿರ್ಮಾಪಕ ಲಿಯಾನ್ ಗೌಡ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

Spread the love

Copyright © 2019 PopcornKannada.com