Cinema News

ಕನ್ನಡಿಗರಿಗಾಗಿ ಹೊಸ OTT ವೇದಿಕೆ ‘AVR CINE-MAX’ ಲಾಂಚ್; ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಚಾಲನೆ

Published

on

ಕನ್ನಡ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಅರವಿಂದ್ ವೆಂಕಟೇಶ್ ರೆಡ್ಡಿ (AVR) ನೇತೃತ್ವದ ‘AVR CINE-MAX’ OTT ವೇದಿಕೆಗೆ ಅದ್ದೂರಿ ಚಾಲನೆ ದೊರೆತಿದೆ. AVR ಪ್ರೊಡಕ್ಷನ್ಸ್ ಮೂಲಕ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ಅವರು ಇದೀಗ ಕನ್ನಡಿಗರಿಗಾಗಿ ಹೊಸ ಡಿಜಿಟಲ್ ಮನರಂಜನಾ ವೇದಿಕೆಯನ್ನು ಆರಂಭಿಸಿದ್ದಾರೆ. ಹಿರಿಯ ನಟ ನರಸಿಂಹರಾಜು ಅವರ ಮೊಮ್ಮಗ ಅವಿನಾಶ್ ದಿವಾಕರ್ ಶೃಂಗೇರಿ ಈ OTTಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲ, ನಿರ್ದೇಶಕರಾದ ಟಿ.ಎಸ್. ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ಟಿ.ಎನ್. ಸೀತಾರಾಮ್, ಪಿ. ಶೇಷಾದ್ರಿ, ಶಶಾಂಕ್, ನಾಗಣ್ಣ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ನಟರಾದ ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಸುಂದರರಾಜ್, ಮೋಹನ್, ಗುರುಕಿರಣ್, ಥ್ರಿಲ್ಲರ್ ಮಂಜು ಹಾಗೂ ಹಲವು ಕಲಾವಿದರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

‘AVR CINE-MAX’ ಕನ್ನಡಿಗರಿಂದ ಕನ್ನಡಿಗರಿಗಾಗಿ ರೂಪಿಸಿರುವ OTT ವೇದಿಕೆಯಾಗಿದ್ದು, ಕನ್ನಡ ಸಿನಿಮಾಗಳು ಹಾಗೂ ಸೃಜನಾತ್ಮಕ ಮನರಂಜನಾ ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ತಲುಪಿಸುವ ಉದ್ದೇಶ ಹೊಂದಿದೆ. ಈಗಾಗಲೇ ಈ ವೇದಿಕೆಯಲ್ಲಿ 750ಕ್ಕೂ ಹೆಚ್ಚು ಸಿನಿಮಾಗಳಿದ್ದು, ರಿಯಾಲಿಟಿ ಶೋ, ಸಂಗೀತ ಕಾರ್ಯಕ್ರಮ, ಕ್ರೀಡೆ ಹಾಗೂ ನೇರ ಪ್ರಸಾರದಂತಹ ಹಲವು ವಿಭಾಗಗಳನ್ನು ಒಳಗೊಂಡಿದೆ.

OTT ಸ್ಥಾಪಕ ಅರವಿಂದ್ ವೆಂಕಟೇಶ್ ರೆಡ್ಡಿ ಮಾತನಾಡಿ, ಕನ್ನಡ ಮನರಂಜನೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವುದು ತಮ್ಮ ಉದ್ದೇಶ ಎಂದರು. ‘ಗ್ಯಾಂಗ್ ಆಫ್ ಯುಕೆ’ ವೆಬ್ ಸಿರೀಸ್ ರೂಪದಲ್ಲಿ ಪ್ರಸಾರವಾಗಲಿದ್ದು, ಸೃಜನ್ ಲೋಕೇಶ್ ಅವರ ‘ಸೃಜಾ ಟಾಕೀಸ್’ ಕಾರ್ಯಕ್ರಮ ಸೇರಿದಂತೆ ಹಲವು ಹೊಸ ವಿಷಯಗಳು ಬರಲಿವೆ ಎಂದು ತಿಳಿಸಿದರು. ಅವಿನಾಶ್ ದಿವಾಕರ್ ಶೃಂಗೇರಿ ಮಾತನಾಡಿ, ವಿಶ್ವದ ಕನ್ನಡಿಗರಿಗೆ ಗುಣಮಟ್ಟದ ಹಾಗೂ ಪರಿಶುದ್ಧ ಮನರಂಜನೆ ನೀಡುವ ಪ್ರಯತ್ನ ಇದಾಗಿದೆ ಎಂದು ಹೇಳಿದರು.

Spread the love

Copyright © 2019 PopcornKannada.com