Cinema News
‘ಮಹಾನ್’ನಲ್ಲಿ ನಮ್ರತಾ ಗೌಡ, ಕಿರಣ್ ಶ್ರೀನಿವಾಸ್; ಇಬ್ಬರ ಫಸ್ಟ್ ಲುಕ್ ಅನಾವರಣ
ಪಿ.ಸಿ.ಶೇಖರ್ ನಿರ್ದೇಶನದಲ್ಲಿ, ಆಕಾಶ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪ್ರಕಾಶ್ ಬುದೂರು ನಿರ್ಮಿಸುತ್ತಿರುವ ‘ಮಹಾನ್’ ಚಿತ್ರ ಆರಂಭದಿಂದಲೂ ಕುತೂಹಲ ಮೂಡಿಸಿದೆ. ಶಿವರಾಜಕುಮಾರ್ ಹಾಗೂ ವಿಜಯ ರಾಘವೇಂದ್ರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಹಲವು ಹಿರಿಯ ಹಾಗೂ ಜನಪ್ರಿಯ ಕಲಾವಿದರು ಅಭಿನಯಿಸಿದ್ದಾರೆ. ಇದೀಗ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಬಿಗ್ ಬಾಸ್’ ಖ್ಯಾತಿಯ ನಮ್ರತಾ ಗೌಡ ಹಾಗೂ ಕಿರಣ್ ಶ್ರೀನಿವಾಸ್ ಅವರ ಫಸ್ಟ್ ಲುಕ್ ಅನಾವರಣಗೊಂಡಿದೆ.
ನಮ್ರತಾ ಗೌಡ, ಪಿ.ಸಿ.ಶೇಖರ್ ನಿರ್ದೇಶನದಲ್ಲಿ ನಟಿಸಬೇಕೆಂಬ ತಮ್ಮ ಬಹುದಿನಗಳ ಆಸೆ ‘ಮಹಾನ್’ ಮೂಲಕ ಈಡೇರಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅವರು ವಿದ್ಯಾವಂತ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಗರದಲ್ಲಿ ಶಿಕ್ಷಣ ಪಡೆದು ಬಳಿಕ ಹಳ್ಳಿಗೆ ಮರಳಿ ರೈತರ ಸಮಸ್ಯೆಗಳಿಗೆ ಧ್ವನಿಯಾಗುವ ಪಾತ್ರವನ್ನು ನಿರ್ವಹಿಸಿದ್ದಾರೆ. ಶಿವರಾಜಕುಮಾರ್, ವಿಜಯ ರಾಘವೇಂದ್ರ, ರಾಧಿಕಾ ನಾರಾಯಣ್, ಮಿತ್ರ ಸೇರಿದಂತೆ ಹಿರಿಯ ಕಲಾವಿದರೊಂದಿಗೆ ಅಭಿನಯಿಸಿರುವುದು ಸಂತೋಷ ತಂದಿದೆ ಎಂದು ಅವರು ಹೇಳಿದ್ದಾರೆ.
ಮತ್ತೊಂದೆಡೆ, ಕಿರಣ್ ಶ್ರೀನಿವಾಸ್ ಕೂಡ ತಮ್ಮ ಪಾತ್ರದ ಬಗ್ಗೆ ಕುತೂಹಲಕಾರಿ ಮಾಹಿತಿ ಹಂಚಿಕೊಂಡಿದ್ದಾರೆ. ಹಳ್ಳಿಯಿಂದ ನಗರಕ್ಕೆ ತೆರಳಿ ವಿದ್ಯಾಭ್ಯಾಸ ಪಡೆದ ಯುವಕನಾಗಿ ಅವರು ಕಾಣಿಸಿಕೊಳ್ಳಲಿದ್ದು, ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುವ ಕನಸು ಕಾಣುವ ಪಾತ್ರ ಇದಾಗಿದೆ. ಆದರೆ ಆತ ಮತ್ತೆ ಹಳ್ಳಿಗೆ ಬಂದು ಏನು ಮಾಡುತ್ತಾನೆ ಎಂಬುದೇ ಪಾತ್ರದ ಪ್ರಮುಖ ತಿರುವು ಎಂದು ಕಿರಣ್ ತಿಳಿಸಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಿನಿಮಾದಲ್ಲಿ ಅನುಭವಿ ಕಲಾವಿದರೊಂದಿಗೆ ನಟಿಸುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ.
ನಿರ್ದೇಶಕ ಪಿ.ಸಿ.ಶೇಖರ್ ಮಾತನಾಡಿ, ‘ಮಹಾನ್’ ಚಿತ್ರದಲ್ಲಿ ಕನ್ನಡದ ಪ್ರತಿಭಾವಂತ ಕಲಾವಿದರು ಒಂದಾಗಿರುವುದು ಸಂತೋಷದ ಸಂಗತಿ. ನಮ್ರತಾ ಗೌಡ ಹಾಗೂ ಕಿರಣ್ ಶ್ರೀನಿವಾಸ್ ಇಬ್ಬರೂ ಈವರೆಗೂ ಕಾಣಿಸಿಕೊಳ್ಳದಂತಹ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದು ತಿಳಿಸಿದ್ದಾರೆ. ನಿರ್ಮಾಪಕ ಪ್ರಕಾಶ್ ಬುದೂರು ಕೂಡ ತಮ್ಮ ಆಕಾಶ ಪಿಕ್ಚರ್ಸ್‌ನ ಮೊದಲ ನಿರ್ಮಾಣದ ಈ ಚಿತ್ರವು ರೈತರ ಬದುಕು ಹಾಗೂ ಸಾಮಾಜಿಕ ಸಂದೇಶವನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ. ವಿಜಯ ರಾಘವೇಂದ್ರ ನಾಯಕನಾಗಿ, ಶಿವರಾಜಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅದ್ದೂರಿ ತಾರಾಬಳಗದ ‘ಮಹಾನ್’ ಚಿತ್ರದ ಬಗ್ಗೆ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.