Cinema News

ಸುಮಧುರ ಹಾಡುಗಳೊಂದಿಗೆ ಗಮನ ಸೆಳೆದ ‘ನಮ್ಮ ರೇಂಜ್ ರೋವರ್’

Published

on

‘ನಮ್ಮ ರೇಂಜ್ ರೋವರ್’ ಚಿತ್ರದ ಹಾಡುಗಳು ಹಾಗೂ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಸಿ.ಎಂ.ಎಂ ಹಿಂದೂಸ್ತಾನ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಡಾ. ಮೌಲಾ ಶರೀಫ್ ಸಿ.ಕೆ ನಿರ್ಮಿಸಿರುವ ಈ ಚಿತ್ರಕ್ಕೆ ಓ.ಎಸ್.ಆರ್ ಕುಮಾರ್ ನಿರ್ದೇಶನವಿದೆ. ಕೂಡಲಸಂಗಮದ ಪೂಜ್ಯ ಶ್ರೀ ಸಂಗಮಾನಂದ ಸ್ವಾಮೀಜಿ ಹಾಡುಗಳು ಮತ್ತು ಟೀಸರ್ ಬಿಡುಗಡೆ ಮಾಡಿದರು. ಮಾಜಿ ಶಾಸಕ ರಾಜಣ್ಣ, ಉದ್ಯಮಿ ವೀರಭದ್ರಾಚಾರಿ, ನಟ ಸಂಪೂರ್ಣೇಶ್ ಬಾಬು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಕಿಶೋರ್ ಕುಮಾರ್, ನಿರ್ಮಾಪಕರ ಸಂಘದ ಕಾರ್ಯದರ್ಶಿ ರಮೇಶ್ ಯಾದವ್, ವಿತರಕ ರಮೇಶ್ ಬಾಬು ಹಾಗೂ ಉಮೇಶ್ ಬಣಕಾರ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

 

ನಿರ್ದೇಶಕ ಓ.ಎಸ್.ಆರ್ ಕುಮಾರ್ ಮಾತನಾಡಿ, ತಾವು ಮೂಲತಃ ಕಡಪದವರಾಗಿದ್ದು, ಕಿರುಚಿತ್ರಗಳ ಅನುಭವದ ನಂತರ ಇದೇ ಮೊದಲ ಬಾರಿಗೆ ಹಿರಿತೆರೆಯಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿರುವುದಾಗಿ ತಿಳಿಸಿದರು. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ ಸಲ್ಲಿಸಿದ ಅವರು, ಚಿತ್ರದಲ್ಲಿ ಸತ್ಯ ಸೋಮೇಶ್ ಸಂಗೀತ ಸಂಯೋಜಿಸಿರುವ ಮನಮೋಹಕ ಹಾಡುಗಳಿವೆ ಎಂದರು. ಸಿರಿ ಮ್ಯೂಸಿಕ್ ಮೂಲಕ ಹಾಡುಗಳು ಮತ್ತು ಟೀಸರ್ ಬಿಡುಗಡೆಯಾಗಿದ್ದು, ತೆಲುಗಿನ ಖ್ಯಾತ ನೃತ್ಯ ನಿರ್ದೇಶಕ ಆಟ ಸಂದೀಪ್ ಈ ಚಿತ್ರದ ಮೂಲಕ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ರಾಜಸ್ಥಾನದ ಮೇಘನಾ ರಜಪೂತ್ ನಾಯಕಿಯಾಗಿ ನಟಿಸಿದ್ದು, ಅರವಿಂದ್ ರಾವ್, ಬ್ಯಾಂಕ್ ಜನಾರ್ದನ್ ಹಾಗೂ ಯತಿರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದರು.

 

 

 

 

 

 

ರಾಜಾ ಶಿವಶಂಕರ್ ಅವರ ಛಾಯಾಗ್ರಹಣ ಮತ್ತು ಗುರುಪ್ರಸಾದ್ ಅವರ ಸಂಕಲನವಿರುವ ಈ ಚಿತ್ರದ ಶೀರ್ಷಿಕೆ ದುಬಾರಿ ಕಾರಿನ ಹೆಸರಿನಿಂದ ಪ್ರೇರಿತವಾಗಿದೆ. ಕಥೆಯೊಂದಿಗೆ ಈ ಶೀರ್ಷಿಕೆ ನೇರ ಸಂಬಂಧ ಹೊಂದಿದ್ದು, ಅದರ ಹಿಂದಿರುವ ಕಾರಣವನ್ನು ಚಿತ್ರ ನೋಡಿದಾಗಲೇ ತಿಳಿಯಲಿದೆ ಎಂದು ನಿರ್ದೇಶಕರು ಕುತೂಹಲ ಮೂಡಿಸಿದರು. ಚಿತ್ರದ ಬಿಡುಗಡೆಗಾಗಿ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಮುಂದಿನ ತಿಂಗಳು ಪ್ರೇಕ್ಷಕರ ಮುಂದೆ ತರಲು ತಂಡ ಯೋಜನೆ ರೂಪಿಸಿದೆ.

 

 

 

 

 

 

ನಿರ್ಮಾಪಕ ಮೌಲಾ ಶರೀಫ್ ಮಾತನಾಡಿ, ತಾವು ಬಾಗೇಪಲ್ಲಿಯವರಾಗಿದ್ದು ಸುಪ್ರೀಂ ಕೋರ್ಟ್ ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದರು. ಬಾಲ್ಯದಿಂದಲೇ ಡಾ. ರಾಜ್‌ಕುಮಾರ್ ಅವರ ಚಿತ್ರಗಳನ್ನು ನೋಡಿ ಬೆಳೆದಿರುವ ತಮಗೆ ಸಿನಿರಂಗದ ಮೇಲೆ ವಿಶೇಷ ಆಸಕ್ತಿ ಇದ್ದುದಾಗಿ ತಿಳಿಸಿದರು. ‘ನಮ್ಮ ರೇಂಜ್ ರೋವರ್’ ತಮ್ಮ ಸಂಸ್ಥೆಯ ಮೂರನೇ ನಿರ್ಮಾಣವಾಗಿದ್ದು, ನಿರ್ದೇಶಕರು ಹೇಳಿದ ಕಥೆ ಮೆಚ್ಚಿ ಚಿತ್ರ ನಿರ್ಮಾಣಕ್ಕೆ ಮುಂದಾದೆ ಎಂದರು. ಮುಂದೆ ಇನ್ನಷ್ಟು ಉತ್ತಮ ಚಿತ್ರಗಳನ್ನು ನಿರ್ಮಿಸುವ ಉದ್ದೇಶವಿದ್ದು, ಕಾರ್ಯಕ್ರಮಕ್ಕೆ ಆಗಮಿಸಿ ಬೆಂಬಲಿಸಿದ ಪೂಜ್ಯರು ಹಾಗೂ ಗಣ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ನಾಯಕಿ ಮೇಘನಾ ರಜಪೂತ್ ಹಾಗೂ ಅತಿಥಿ ಪಾತ್ರದಲ್ಲಿ ನಟಿಸಿರುವ ಸನತ್ ತಮ್ಮ ಪಾತ್ರಗಳ ಕುರಿತು ಮಾಹಿತಿ ಹಂಚಿಕೊಂಡರು.

Spread the love

Copyright © 2019 PopcornKannada.com