Cinema News

ಆಗಸ್ಟ್‌ನಲ್ಲಿ ತೆರೆಗೆ ಬರಲಿರುವ ‘ಕಾಮನ್ ಮ್ಯಾನ್’ ಮೋಷನ್ ಪೋಸ್ಟರ್ ಅನಾವರಣ

Published

on

ಸುರಭಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಮಾಜಸೇವಕ ಎನ್. ನರಸಿಂಹಮೂರ್ತಿ ನಿರ್ಮಿಸಿರುವ ‘ಕಾಮನ್ ಮ್ಯಾನ್’ ಚಿತ್ರದ ಮೋಷನ್ ಪೋಸ್ಟರ್‌ನ್ನು ನಿರ್ಮಾಪಕರ ಹುಟ್ಟುಹಬ್ಬದ ಪ್ರಯುಕ್ತ ಅನಾವರಣಗೊಳಿಸಲಾಯಿತು. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಕಥೆಗೆ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಸಿನಿಮಾ, ಒಬ್ಬ ಸಾಮಾನ್ಯ ವಕೀಲ ರಾಜ್ಯದ ಮುಖ್ಯಮಂತ್ರಿಯಾಗುವ ಆಸಕ್ತಿಕರ ಕಥಾಹಂದರವನ್ನು ಒಳಗೊಂಡಿದೆ. ಆರಂಭದಲ್ಲಿ ‘ನಾನೇ ಸಿಎಂ’ ಎಂದು ಹೆಸರಿಡಲು ಯೋಚಿಸಲಾಗಿದ್ದ ಚಿತ್ರಕ್ಕೆ ಬಳಿಕ ‘ಕಾಮನ್ ಮ್ಯಾನ್’ ಎಂಬ ಶೀರ್ಷಿಕೆ ಅಂತಿಮಗೊಳಿಸಲಾಗಿದೆ.

 

ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕ ಎನ್. ನರಸಿಂಹಮೂರ್ತಿ, ಸಮಾಜಸೇವೆ ಮತ್ತು ರಂಗಭೂಮಿಯ ಅನುಭವದಿಂದಲೇ ಚಿತ್ರರಂಗಕ್ಕೆ ಬಂದಿರುವುದಾಗಿ ತಿಳಿಸಿದರು. ಇದು ತಮ್ಮ ನಿರ್ಮಾಣದ ಮೂರನೇ ಸಿನಿಮಾ ಎಂದು ಹೇಳಿದ ಅವರು, ಓಂ ಸಾಯಿಪ್ರಕಾಶ್ ಅವರ ಅನುಭವ ಮತ್ತು ದೃಷ್ಟಿಯ ಮೇಲೆ ಸಂಪೂರ್ಣ ನಂಬಿಕೆ ಇಟ್ಟು ಚಿತ್ರ ನಿರ್ಮಿಸಿರುವುದಾಗಿ ಹೇಳಿದರು. ಚುನಾವಣೆ ಇಲ್ಲದೇ ಒಬ್ಬ ವ್ಯಕ್ತಿ ಹೇಗೆ ಸರ್ಕಾರದ ಮೇಲೆ ಒತ್ತಡ ತಂದು ಮುಖ್ಯಮಂತ್ರಿ ಆಗುತ್ತಾನೆ ಎಂಬ ಕುತೂಹಲಕಾರಿ ಅಂಶ ಚಿತ್ರದ ಪ್ರಮುಖ ಆಕರ್ಷಣೆ ಎಂದರು.

 

 

 

 

 

 

ನಿರ್ದೇಶಕ ಓಂ ಸಾಯಿಪ್ರಕಾಶ್, ತಮ್ಮ 106ನೇ ನಿರ್ದೇಶನದ ಚಿತ್ರ ಇದಾಗಿದ್ದು, ಅಧಿಕಾರ ಸಿಕ್ಕಾಗ ಒಬ್ಬ ಸಾಮಾನ್ಯ ವ್ಯಕ್ತಿ ಸಮಾಜದ ಒಳಿತಿಗಾಗಿ ಏನು ಮಾಡಬಹುದು ಎಂಬುದನ್ನು ಮನರಂಜನಾತ್ಮಕವಾಗಿ ತೋರಿಸುವ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು. ನಾಯಕನಾಗಿ ವಕೀಲನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಗೌರೀಶಂಕರ್ ಅವರೊಂದಿಗೆ ಸೋನಾ ಲದ್ವಾ ಹಾಗೂ ಮುಂಬೈ ಮೂಲದ ಮತ್ತೊಬ್ಬ ನಟಿ ಅಭಿನಯಿಸಿದ್ದು, ಹಿರಿಯ ನಟ ಅಶೋಕ್ ರಾಜ್ಯಪಾಲರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಫ್ಯಾಮಿಲಿ ಎಂಟರ್‌ಟೈನರ್ ಶೈಲಿಯಲ್ಲಿ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

 

 

 

 

 

 

‘ಕೆರೆಬೇಟೆ’ ಚಿತ್ರದ ನಂತರ ಉತ್ತಮ ಕಥೆಯ ಹುಡುಕಾಟದಲ್ಲಿದ್ದ ನನಗೆ ಈ ಪಾತ್ರ ಸಿಕ್ಕಿದ್ದು ಸಂತಸ ತಂದಿದೆ ಎಂದು ನಾಯಕ ಗೌರೀಶಂಕರ್ ಹೇಳಿದರು. ನಿರ್ಮಾಪಕರು ಮತ್ತು ನಿರ್ದೇಶಕರು ಕಥೆಗೆ ಬೇಕಾದ ಎಲ್ಲ ಬೆಂಬಲ ನೀಡಿರುವುದಾಗಿ ಅವರು ತಿಳಿಸಿದರು. ವಿನಯ ಚಂದ್ರ ಸಂಗೀತ ನಿರ್ದೇಶನದ ನಾಲ್ಕು ಹಾಡುಗಳಿಗೆ ಚೈತ್ರಾ ಆಚಾರ್, ಕೈಲಾಶ್ ಖೇರ್ ಹಾಗೂ ಬಾಬಾ ಸೈಗಲ್ ಧ್ವನಿಯಾಗಿದ್ದಾರೆ. ಜೆ.ಜಿ. ಕೃಷ್ಣ ಮತ್ತು ದೀಪಕ್ ಕುಮಾರ್ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಚಿತ್ರಕ್ಕಿದ್ದು, ಗಣೇಶರಾವ್ ಕೇಸರಕರ್, ಎಸ್ಕಾರ್ಟ್ ಶ್ರೀನಿವಾಸ್ ಹಾಗೂ ಪ್ರಕಾಶ್ ತುಮ್ಮಿನಾಡು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಆಗಸ್ಟ್ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

Spread the love

Copyright © 2019 PopcornKannada.com