News

ಮನಮುಟ್ಟುವ ಕಿರುಚಿತ್ರ “ಮಹರ್ಷಿ ವಾಲ್ಮಿಕಿ” ರಾಮನವಮಿಯ ಸುಸಂದರ್ಭದಲ್ಲಿ ರಾಮಭಕ್ತನ ಕುರಿತಾದ ಕಿರುಚಿತ್ರದ ಅನಾವರಣ

Published

on

ಮನಮುಟ್ಟುವ ಕಿರುಚಿತ್ರ “ಮಹರ್ಷಿ ವಾಲ್ಮೀಕಿ” ರಾಮನವಮಿಯ ಪವಿತ್ರ ಸಂದರ್ಭದಲ್ಲಿ ಅನಾವರಣಗೊಂಡಿದೆ. ರಾಮಭಕ್ತನ ಜೀವನಗಾಥೆಯನ್ನು ಆಧರಿಸಿದ ಈ ಕಿರುಚಿತ್ರವು ರತ್ನಕಾರನಿಂದ ಮಹರ್ಷಿ ವಾಲ್ಮೀಕಿಯಾಗುವ ಅದ್ಭುತ ಪರಿವರ್ತನೆಯನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ. ಕ್ರೌಂಚ ಪಕ್ಷಿಯ ಸಾವನ್ನು ಕಂಡು ರಾಮಾಯಣ ರಚನೆಗೆ ಪ್ರೇರಣೆಯಾದ ಘಟನೆಯನ್ನು ಕೂಡ ಮನಮುಟ್ಟುವ ರೀತಿಯಲ್ಲಿ ತೆರೆ ಮೇಲೆ ತಂದಿದ್ದಾರೆ.

ನಿರ್ದೇಶಕ ಪ್ರವೀಣ್ ಶಿವಣ್ಣ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ 21 ನಿಮಿಷಗಳ ಕಿರುಚಿತ್ರಕ್ಕೆ “ಮಹರ್ಷಿ ವಾಲ್ಮೀಕಿ” ಎಂಬ ಶೀರ್ಷಿಕೆ ನೀಡಲಾಗಿದೆ. ರತ್ನ ದಾಸ್ ನಿರ್ಮಿಸಿರುವ ಈ ಕಿರುಚಿತ್ರದ ಅನಾವರಣ ಮತ್ತು ಪತ್ರಿಕಾಗೋಷ್ಠಿ ಇತ್ತೀಚೆಗೆ ನೆರವೇರಿತು. ರಾಮನವಮಿ ಸಂದರ್ಭದಲ್ಲಿ ಬಿಡುಗಡೆಯಾಗಿರುವುದು ವಿಶೇಷವಾಗಿದ್ದು, ಶ್ರೀರಿಷಿ ಅವಿರ್ಭವ ಗುರು ಪೂರ್ಣದೈತಿ, ರಾಷ್ಟ್ರಪ್ರಶಸ್ತಿ ವಿಜೇತ ಸಂಕಲನಕಾರ ಸುರೇಶ್ ಅರಸ್, ನಟ ಗಣೇಶ್ ರಾವ್ ಕೇಸರ್ಕರ್, ಪದ್ಮಶ್ರೀ ವೆಂಕಟೇಶ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ನಿರ್ದೇಶಕ ಪ್ರವೀಣ್ ಶಿವಣ್ಣ, “ಸಂಕಲನಕಾರನಾಗಿ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ ನಂತರ, ನಿರ್ದೇಶಕರಾಗಿ ಇದು ನನ್ನ ಮೊದಲ ಕಿರುಚಿತ್ರ. ನಿರ್ಮಾಪಕರು, ಕಲಾವಿದರು ಮತ್ತು ತಂತ್ರಜ್ಞರ ಸಹಕಾರದಿಂದ ಚಿತ್ರವನ್ನು ಯಶಸ್ವಿಯಾಗಿ ಮೂಡಿಸಬಹುದು ಎಂಬ ವಿಶ್ವಾಸ ನನಗಿದೆ. ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ,” ಎಂದರು.

ವಾಲ್ಮೀಕಿ ಪಾತ್ರದಲ್ಲಿ ಅಭಿನಯಿಸಿರುವ ಸುಜಿತ್ ಶೆಟ್ಟಿ, “ರಾಮನು 14 ವರ್ಷಗಳ ವನವಾಸ ಮುಗಿಸಿ ಬಂದಂತೆ, ನನಗೂ ನಟನೆಯಲ್ಲಿ ಅವಕಾಶ ಸಿಗಲು 14 ವರ್ಷಗಳ ಕಾಲ ಹಿಡಿದಿದೆ. ಅದೂ ರಾಮಭಕ್ತ ವಾಲ್ಮೀಕಿ ಕಥೆಯ ಮೂಲಕ ಸಿಕ್ಕಿರುವುದು ವಿಶೇಷ. ಶಿವಮಣಿ ಅವರಂತಹ ಹಿರಿಯರೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ಸಂತೋಷ,” ಎಂದರು.

ನಟಿ ರೂಪ ಮುತ್ತುರಾಯಪ್ಪ ಕೂಡ ಈ ಕಿರುಚಿತ್ರದ ಭಾಗವಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ನಿರ್ಮಾಪಕಿ ರತ್ನ ದಾಸ್ ಆಗಮಿಸಿದ ಗಣ್ಯರು ಹಾಗೂ ತಂಡದ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಛಾಯಾಗ್ರಾಹಕ ತನ್ವಿಕ್ ಹಾಗೂ ಸಂಗೀತ ನಿರ್ದೇಶಕ ರಾಮಾನುಜನ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Spread the love
Click to comment

Copyright © 2019 PopcornKannada.com