Cinema News
‘ಮಹಾನ್’ ಚಿತ್ರದಲ್ಲಿ ಮಹಾನ್ ನಟರ ಸಂಗಮ; ಆರು ಹಿರಿಯ ಕಲಾವಿದರ ಫಸ್ಟ್ ಲುಕ್ ರಿಲೀಸ್!
ಆಕಾಶಾ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದೂರು ನಿರ್ಮಿಸುತ್ತಿರುವ, ಪಿ.ಸಿ. ಶೇಖರ್ ನಿರ್ದೇಶನದ ‘ಮಹಾನ್’ ಚಿತ್ರ ಈಗಾಗಲೇ ವಿಭಿನ್ನ ಕಾರಣಗಳಿಂದ ಕುತೂಹಲ ಮೂಡಿಸಿದೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹಾಗೂ ವಿಜಯ್ ರಾಘವೇಂದ್ರ ಅಭಿನಯಿಸಿರುವ ಈ ಚಿತ್ರಕ್ಕೆ ಮತ್ತೊಂದು ದೊಡ್ಡ ವಿಶೇಷತೆ ಸೇರ್ಪಡೆಯಾಗಿದೆ. ಕನ್ನಡ ಚಿತ್ರರಂಗದ ಅನುಭವಿ ಹಾಗೂ ಪ್ರತಿಭಾವಂತ ನಟರಾದ ದೇವರಾಜ್, ರಮೇಶ್ ಭಟ್, ಅವಿನಾಶ್, ರಂಗಾಯಣ ರಘು, ಶರತ್ ಲೋಹಿತಾಶ್ವ ಮತ್ತು ರಮೇಶ್ ಇಂದಿರಾ ಅವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಆರು ಕಲಾವಿದರ ಫಸ್ಟ್ ಲುಕ್‌ಗಳು ಬಿಡುಗಡೆಯಾಗಿದ್ದು, ಪ್ರೇಕ್ಷಕರ ಗಮನ ಸೆಳೆದಿವೆ.
ಚಿತ್ರದಲ್ಲಿನ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ನೀಡಲಾಗಿದ್ದು, ಪಾತ್ರದ ತೂಕ ಹೆಚ್ಚಿದಂತೆ ಅದನ್ನು ಸಮರ್ಥವಾಗಿ ನಿಭಾಯಿಸುವ ನಟನ ಜವಾಬ್ದಾರಿಯೂ ಹೆಚ್ಚುತ್ತದೆ. ನಿರ್ದೇಶಕ ಪಿ.ಸಿ. ಶೇಖರ್ ಅವರ ಕಲ್ಪನೆ ಮತ್ತು ನಿರೀಕ್ಷೆಗೆ ತಕ್ಕಂತೆ ಈ ಮೇರು ಕಲಾವಿದರು ತಮ್ಮ ಅಭಿನಯದ ಮೂಲಕ ಜೀವ ತುಂಬಿದ್ದಾರೆ. ರಮೇಶ್ ಇಂದಿರಾ ಅವರು ಪೊಲೀಸ್ ಇನ್‌ಸ್ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದು, ಇತ್ತೀಚಿನ ದಿನಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ಅವರು ಈ ಪಾತ್ರದಲ್ಲೂ ವಿಶೇಷವಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಇನ್‌ಸ್ಪೆಕ್ಟರ್ ಕಾರ್ಯವೈಖರಿ ಹಾಗೂ ಲೋಪಗಳನ್ನು ಪ್ರಶ್ನಿಸುವ ಮೇಲಧಿಕಾರಿಯ ಪಾತ್ರದಲ್ಲಿ ಡೈನಮಿಕ್ ಹೀರೋ ದೇವರಾಜ್ ಅವರು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಆಗಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಪಾತ್ರಗಳಿಗೆ ಹೆಸರುವಾಸಿಯಾಗಿರುವ ದೇವರಾಜ್ ಅವರ ಫಸ್ಟ್ ಲುಕ್‌ನಲ್ಲೇ ಪಾತ್ರದ ಗಂಭೀರತೆ ಎದ್ದು ಕಾಣುತ್ತಿದೆ.
ರಂಗಾಯಣ ರಘು ಅವರು ಇಡೀ ಗ್ರಾಮದ ಹಿತಾಸಕ್ತಿಗಾಗಿ ಹೋರಾಡುವ ಹಿರಿಯ ರೈತ ಮುಖಂಡನ ಪಾತ್ರವನ್ನು ನಿರ್ವಹಿಸಿದ್ದಾರೆ. ಯಾವುದೇ ರೀತಿಯ ಪಾತ್ರವನ್ನಾದರೂ ತಮ್ಮದೇ ಶೈಲಿಯಲ್ಲಿ ಜೀವಂತಗೊಳಿಸುವ ಸಾಮರ್ಥ್ಯ ಹೊಂದಿರುವ ರಂಗಾಯಣ ರಘು ಅವರ ಈ ಪಾತ್ರವೂ ವಿಶೇಷವಾಗಿರಲಿದೆ. ಹಿರಿಯ ನಟ ರಮೇಶ್ ಭಟ್ ಅವರು ಅನುಭವಸಂಪನ್ನ ವೈದ್ಯನಾಗಿ ಕಾಣಿಸಿಕೊಳ್ಳಲಿದ್ದು, ಶರತ್ ಲೋಹಿತಾಶ್ವ ಅವರು ಊರಿನ ಸಂಪ್ರದಾಯ, ದೈವಿಕ ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಮೌಲ್ಯಗಳ ಮೂಲಕ ಜನರ ಮೇಲೆ ಪ್ರಭಾವ ಬೀರುವ ಧಾರ್ಮಿಕ ಗುರುವಿನ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರದಲ್ಲಿ ಅವರು ಈ ಹಿಂದಿನ ಪಾತ್ರಗಳಿಗಿಂತ ಸಂಪೂರ್ಣ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ, ಅವಿನಾಶ್ ಅವರು ಗ್ರಾಮಸ್ಥರಿಗೆ ಸೇನೆಯ ಮಹತ್ವವನ್ನು ತಿಳಿಸುವ, ಶಿಸ್ತು ಮತ್ತು ದೇಶಾಭಿಮಾನ ಹೊಂದಿರುವ ಹೆಮ್ಮೆಯ ಸೈನಿಕನ ಪಾತ್ರವನ್ನು ನಿರ್ವಹಿಸಿದ್ದಾರೆ.
‘ಮಹಾನ್’ ಒಂದು ಬಹು ತಾರಾಗಣದ ಚಿತ್ರವಾಗಿದ್ದು, ಈ ಎಲ್ಲಾ ಹಿರಿಯ ಕಲಾವಿದರ ಸಹಭಾಗಿತ್ವ ಚಿತ್ರಕ್ಕೆ ಮತ್ತಷ್ಟು ಬಲ ನೀಡಿದೆ ಎಂದು ನಿರ್ದೇಶಕ ಪಿ.ಸಿ. ಶೇಖರ್ ಸಂತಸ ವ್ಯಕ್ತಪಡಿಸಿದ್ದಾರೆ. ವಿಜಯ್ ರಾಘವೇಂದ್ರ ಅವರು ರೈತನ ಪಾತ್ರದಲ್ಲಿ ಅಭಿನಯಿಸಿದ್ದು, ವಿಶೇಷ ಪಾತ್ರದಲ್ಲಿ ಶಿವರಾಜಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ರಾಧಿಕಾ ನಾರಾಯಣ್, ಮಿತ್ರ, ನಮ್ರತಾ ಗೌಡ, ವರ್ಷಾ ಬೊಳ್ಳಮ್ಮ ಹಾಗೂ ಕಿರಣ್ ಶ್ರೀನಿವಾಸ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಎಸ್. ವೈದಿ ಛಾಯಾಗ್ರಹಣ ಹಾಗೂ ಪ್ರಶಾಂತ್ ರಾಜಪ್ಪ ಸಂಭಾಷಣೆ ಇದೆ. ಅನುಭವಿ ಕಲಾವಿದರು ಮತ್ತು ಜನಪ್ರಿಯ ತಾಂತ್ರಿಕ ವರ್ಗದ ಸಂಗಮವಾಗಿರುವ ‘ಮಹಾನ್’ ಮೇಲೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ.