RKB ಫಿಲ್ಮ್ಸ್ ಬ್ಯಾನರ್‌ನಲ್ಲಿ ಭಾರತಿ ಶ್ರೀನಿವಾಸ್ ರಾಜ್ ನಿರ್ಮಿಸಿರುವ ಹಾಗೂ ಹರಿಪ್ರಾಣ ನಿರ್ದೇಶನದ ‘ಲವ್ 2 ಲಸ್ಸಿ’ ಸಿನಿಮಾದ ಮೋಷನ್ ಪೋಸ್ಟರ್ ಮತ್ತು ಹಾಡು ಬಿಡುಗಡೆಯಾಗಿದೆ. ಪ್ರೀತಿ, ಭಾವನೆ ಹಾಗೂ ಕುಟುಂಬದ ಸಂಬಂಧಗಳನ್ನು ಒಳಗೊಂಡಿರುವ ಈ ಸಿನಿಮಾ ಹೊಸ ತಂಡದ ವಿಭಿನ್ನ ಪ್ರಯತ್ನವಾಗಿದೆ. ಜೀವಿತಾ ಮತ್ತು ಆರ್ಯನ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸುಮಾರು 18 ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ನಿರ್ದೇಶಕ ಹರಿಪ್ರಾಣ, ಪುತ್ತೂರು ಮತ್ತು ಸುಳ್ಯ ಭಾಗಗಳ ನೈಸರ್ಗಿಕ ತಾಣಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಿದ್ದಾರೆ. ಜಗನ್, ತಾರಾ, ವೈಷ್ಣವಿ ಸೇರಿದಂತೆ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ. ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡ ಸಿನಿಮಾ ಕುರಿತ ಅನುಭವಗಳನ್ನು ಹಂಚಿಕೊಂಡಿತು.
ನಿರ್ದೇಶಕ ಹರಿಪ್ರಾಣ ಮಾತನಾಡಿ, ‘ಲವ್ 2 ಲಸ್ಸಿ’ ನೈಜ ಘಟನೆ ಆಧಾರಿತ ಪ್ರೇಮಕಥೆ ಎಂದು ತಿಳಿಸಿದ್ದಾರೆ. 2006-07ರ ಸಮಯದಲ್ಲಿ ನಡೆದ ಒಂದು ಘಟನೆ ಪ್ರೇರಣೆಯಿಂದ ಈ ಕಥೆ ರೂಪುಗೊಂಡಿದ್ದು, ಪುತ್ತೂರಿನ ಹುಡುಗಿ ಹಾಗೂ ಬೆಂಗಳೂರಿನ ಹುಡುಗನ ನಡುವಿನ ಪ್ರೀತಿಯ ಕಥೆಯನ್ನು ಸಿನಿಮಾ ಮೂಲಕ ಹೇಳಲಾಗಿದೆ. ಇದು ಕೇವಲ ಲವ್ ಸ್ಟೋರಿ ಮಾತ್ರವಲ್ಲದೆ ಕುಟುಂಬದ ಭಾವನೆಗಳನ್ನೂ ಒಳಗೊಂಡಿದೆ ಎಂದಿದ್ದಾರೆ.
ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು, ವಿನು ಮನಸ್ಸು ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಯಕಿ ಜೀವಿತಾ ಹಾಗೂ ನಟ ಆರ್ಯನ್ ಕೂಡ ಸಿನಿಮಾದ ಕಥೆ ಮತ್ತು ಅನುಭವದ ಬಗ್ಗೆ ಮಾತನಾಡಿದರು. ಹೊಸ ತಂಡದ ಈ ಪ್ರಯತ್ನಕ್ಕೆ ಒರಟ ಶ್ರೀ ಹಾಗೂ ಸಪ್ತಗಿರಿ ಗೌಡ ಶುಭ ಹಾರೈಸಿದರು. ಎಂ.ಎ. ಅರ್ಜುನ್ ಧೋನಿ ಸಂಕಲನ ಮಾಡಿರುವ ‘ಲವ್ 2 ಲಸ್ಸಿ’ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.