Cinema News
‘ಪಾರ್ಟ್ನರ್’ ಚಿತ್ರದಿಂದ ಮತ್ತೊಂದು ಮೆಲೋಡಿ ಸಾಂಗ್ ರಿಲೀಸ್: ಗಮನ ಸೆಳೆಯುತ್ತಿದೆ ‘ಲವಲವಿಕೆ’!
ವಿಭಿನ್ನ ಕಥಾಹಂದರ, ಸುಮಧುರ ಸಂಗೀತ ಹಾಗೂ ಆಕರ್ಷಕ ಮೇಕಿಂಗ್ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿರುವ ‘ಪಾರ್ಟ್ನರ್’ ಸಿನಿಮಾದಿಂದ ಇದೀಗ ‘ಲವಲವಿಕೆ’ ಎಂಬ ಹೊಸ ಹಾಡು ಬಿಡುಗಡೆಯಾಗಿದೆ. ಈಗಾಗಲೇ ಚಿತ್ರದ ‘ಅಮೋರಾ’ ಹಾಡು ಕೇಳುಗರ ಮೆಚ್ಚುಗೆಗೆ ಪಾತ್ರವಾಗಿರುವ ಬೆನ್ನಲ್ಲೇ ಎರಡನೇ ಹಾಡು ಕೂಡ ಸಂಗೀತಾಸಕ್ತರನ್ನು ಸೆಳೆಯುತ್ತಿದೆ. ‘ಮಳೆ’, ‘ಧೈರ್ಯಂ’, ‘ದಿಲ್ ಪಸಂದ್’ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಶಿವತೇಜಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಪ್ರೀತಿ ಮತ್ತು ಕೌಟುಂಬಿಕ ಭಾವನೆಗಳ ಸಮ್ಮಿಲನದೊಂದಿಗೆ ಮನರಂಜನೆ ನೀಡುವ ಪ್ರಯತ್ನ ಮಾಡಿದ್ದಾರೆ. ಇಂದಿನ ಯುವಜನರ ಜೀವನಶೈಲಿ, ಪ್ರೀತಿ, ಬ್ರೇಕಪ್ ಹಾಗೂ ಲಿವ್-ಇನ್ ಸಂಬಂಧಗಳ ಸುತ್ತ ಹೆಣೆದಿರುವ ಕಥೆಯಲ್ಲಿ ಪ್ರೇಕ್ಷಕರಿಗೆ ಉತ್ತಮ ಸಂದೇಶ ನೀಡುವ ಆಶಯ ಚಿತ್ರತಂಡಕ್ಕಿದೆ.
ಅಜಯ್ ರಾವ್ ಮತ್ತು ಬೃಂದಾ ಆಚಾರ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ‘ಲವಲವಿಕೆ’ ಹಾಡಿಗೆ ಕವಿರಾಜ್ ಸಾಹಿತ್ಯ ರಚಿಸಿದ್ದು, ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಕಾರ್ತಿಕ್ ಹಾಗೂ ರಮ್ಯ ಅಭ್ಯಂಕರ್ ಹಾಡಿಗೆ ಧ್ವನಿಯಾಗಿದ್ದಾರೆ. ನಕುಲ್ ಅಭ್ಯಂಕರ್ ಸಂಗೀತ ಸಂಯೋಜನೆ ನೀಡಿದ್ದು, ಸುಜ್ಞಾನ್ ಅವರ ಛಾಯಾಗ್ರಹಣದಲ್ಲಿ ಹಾಡು ವರ್ಣರಂಜಿತವಾಗಿ ಮೂಡಿಬಂದಿದೆ. ನಿರ್ಮಾಪಕರ ಆಧ್ಯಾತ್ಮಿಕ ಗುರುಗಳಾದ ರಂಗನಾಥ್ ಮತ್ತು ಮಂಜುನಾಥ್ ಹಾಡನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಶಿವತೇಜಸ್, ತಾವು ನಿರೀಕ್ಷಿಸಿದ್ದಕ್ಕಿಂತಲೂ ಉತ್ತಮವಾಗಿ ಸಿನಿಮಾ ಮೂಡಿಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. ಚಿತ್ರದ ಪ್ರತಿಯೊಂದು ಹಾಡನ್ನೂ ವಿಭಿನ್ನ ಬಣ್ಣದ ವಿನ್ಯಾಸದಲ್ಲಿ ರೂಪಿಸಲಾಗಿದ್ದು, ಲಕ್ಷ್ಮಿ ಕೃಷ್ಣ ವಸ್ತ್ರವಿನ್ಯಾಸ ಮಾಡಿದ್ದಾರೆ. ಪಾಂಡಿಚೇರಿ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದ್ದು, ರಂಗಾಯಣ ರಘು ಮತ್ತು ಚಿತ್ಕಲಾ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ‘ಪ್ರೇಮದ ಊರಲಿ’ಯಂತೆ ತಮ್ಮ ಚಿತ್ರವೂ ಯಶಸ್ಸು ಕಾಣುವ ವಿಶ್ವಾಸವಿದೆ ಎಂದು ಹೇಳಿದರು.
ಚಿತ್ರದ ನಿರ್ಮಾಪಕ ಹರೀಶ್ ದೇವಿತಂದ್ರೆ ಮಾತನಾಡಿ, ಸಿನಿಮಾ ವಿತರಣೆ ಹಾಗೂ ಟಿವಿ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ತಮ್ಮದಾಗಿದ್ದು, ವ್ಯವಹಾರಿಕ ದೃಷ್ಟಿಕೋನದೊಂದಿಗೆ ‘ಪಾರ್ಟ್ನರ್’ ನಿರ್ಮಿಸಿರುವುದಾಗಿ ತಿಳಿಸಿದರು. ಯಾವುದೇ ಮುಜುಗರವಿಲ್ಲದೆ ಇಡೀ ಕುಟುಂಬ ಒಟ್ಟಿಗೆ ಕುಳಿತು ವೀಕ್ಷಿಸಬಹುದಾದ ಚಿತ್ರ ಇದಾಗಿದ್ದು, ಪ್ರೇಕ್ಷಕರಿಗೆ ಸಿನಿಮಾವನ್ನು ತಲುಪಿಸಲು ಸೂಕ್ತ ಯೋಜನೆ ರೂಪಿಸಲಾಗುತ್ತಿದೆ ಎಂದರು. ನಾಯಕ ಅಜಯ್ ರಾವ್ ಮಾತನಾಡಿ, ನಿರ್ದೇಶಕರು ವಿವರಿಸಿದ ಕಥೆ ತಮ್ಮ ಮನಸ್ಸಿಗೆ ಬಹಳ ಹತ್ತಿರವಾಯಿತು ಎಂದು ತಿಳಿಸಿದರು. ಹಾಡುಗಳಷ್ಟೇ ಚಿತ್ರದ ದೃಶ್ಯಗಳೂ ವರ್ಣರಂಜಿತವಾಗಿದ್ದು, ಮಾನವೀಯ ಮೌಲ್ಯಗಳು ಮತ್ತು ಭಾವನೆಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದರು. ಶಿವತೇಜಸ್ ಅವರೊಂದಿಗಿನ 25 ವರ್ಷಗಳ ಸ್ನೇಹವನ್ನು ಸ್ಮರಿಸಿದ ಅವರು, ಉತ್ತಮ ನಿರ್ಮಾಪಕರ ಸಹಕಾರವೂ ಚಿತ್ರಕ್ಕೆ ದೊರೆತಿದೆ. ‘ಪಾರ್ಟ್ನರ್’ ಚಿತ್ರದ ಯಶಸ್ಸಿನ ಬಗ್ಗೆ ತಮಗೆ ಶೇ.100ರಷ್ಟು ವಿಶ್ವಾಸವಿದೆ ಎಂದು ಹೇಳಿದರು.
ನಾಯಕಿ ಬೃಂದಾ ಆಚಾರ್ಯ ಮಾತನಾಡಿ, ಚಿತ್ರೀಕರಣದ ಆರಂಭದಿಂದಲೇ ಚಿತ್ರತಂಡದ ಸದಸ್ಯರ ನಡುವೆ ಉತ್ತಮ ಬಾಂಧವ್ಯವಿತ್ತು ಎಂದು ಹೇಳಿದರು. ಆರಂಭದಲ್ಲಿ ಅಜಯ್ ರಾವ್ ಹೆಚ್ಚು ಮಾತನಾಡದೆ ಗಂಭೀರವಾಗಿರುತ್ತಿದ್ದರು; ದಿನಗಳು ಕಳೆದಂತೆ ಆತ್ಮೀಯವಾಗಿ ಬೆರೆತು ಎಲ್ಲರಿಗೂ ಹತ್ತಿರವಾದರು ಎಂದು ಹಾಸ್ಯಭರಿತವಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಡುಗಳ ಚಿತ್ರೀಕರಣದ ಸಮಯದಲ್ಲಿ ಅಜಯ್ ಸಾಕಷ್ಟು ಸಲಹೆಗಳನ್ನು ನೀಡಿದ್ದರು ಎಂದೂ ತಿಳಿಸಿದರು. H.P.R. ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಹರೀಶ್ ದೇವಿತಂದ್ರೆ ಈ ಚಿತ್ರವನ್ನು ನಿರ್ಮಿಸಿದ್ದು, ಸುಜ್ಞಾನ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ. ಪ್ರೀತಿ, ಸಂಬಂಧಗಳು, ಭಾವನೆಗಳು ಹಾಗೂ ಕುಟುಂಬದ ಮೌಲ್ಯಗಳನ್ನು ಒಳಗೊಂಡಿರುವ ‘ಪಾರ್ಟ್ನರ್’ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.