Cinema News

ಶೀರ್ಷಿಕೆ ಅನಾವರಣದೊಂದಿಗೆ ಗಮನ ಸೆಳೆದ “ಕಿರುನಗೆ” ಚಿತ್ರತಂಡ

Published

on

ಹರ್ಷಿಣಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಲತಾಶ್ರೀ ಡಿ.ಸಿ ನಿರ್ಮಿಸಿರುವ ಹಾಗೂ ಅಶೋಕ್ ಕಡಬ ನಿರ್ದೇಶಿಸಿರುವ ಹೊಸ ಚಿತ್ರದ ಶೀರ್ಷಿಕೆ ಇತ್ತೀಚೆಗೆ ಅನಾವರಣಗೊಂಡಿದೆ. ಚಿತ್ರಕ್ಕೆ *“ಕಿರುನಗೆ”* ಎಂಬ ಹೆಸರು ಇಡಲಾಗಿದ್ದು, ಸಮಾರಂಭವನ್ನು ಡಾ. ರಾಜ್‌ಕುಮಾರ್ ಪುತ್ರಿ ಲಕ್ಷ್ಮಿ ಗೋವಿಂದರಾಜು ಹಾಗೂ ಎಸ್.ಎ. ಗೋವಿಂದರಾಜು ನೆರವೇರಿಸಿದರು. ನಿರ್ದೇಶಕರ ಸಂಘದ ಅಧ್ಯಕ್ಷ ಎನ್.ಆರ್.ಕೆ. ವಿಶ್ವನಾಥ್, ನಟ ಷಣ್ಮುಖ ಮತ್ತು ಯುವ ಕಾಂಗ್ರೆಸ್ ಮುಖಂಡ ಅಶೋಕ್ ಭೀಮಾನಾಯಕ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

 

ನಿರ್ದೇಶಕ ಅಶೋಕ್ ಕಡಬ ಮಾತನಾಡಿ, “ಕಿರುನಗೆ” ತಮ್ಮ ನಿರ್ದೇಶನದ ಆರನೇ ಚಿತ್ರವಾಗಿದ್ದು, ಇದು ಪ್ರೇಮಕಥೆಯ ಜೊತೆಗೆ ಕುಟುಂಬ ಮೌಲ್ಯಗಳನ್ನು ಪ್ರತಿಬಿಂಬಿಸುವ ಕಥೆಯಾಗಿದೆ ಎಂದು ತಿಳಿಸಿದರು. ತಂದೆ-ತಾಯಿಗಾಗಿ ಮಕ್ಕಳು ತಮ್ಮ ಪ್ರೀತಿಯನ್ನು ತ್ಯಾಗ ಮಾಡುವ ಭಾವನಾತ್ಮಕ ಕಥಾಹಂದರ ಚಿತ್ರದಲ್ಲಿದ್ದು, ಮೊದಲಾರ್ಧದ ಬಹುತೇಕ ಕಥೆ ಮದುವೆ ಮನೆಯ ಸನ್ನಿವೇಶಗಳಲ್ಲಿ ಸಾಗುತ್ತದೆ. ಬೆಂಗಳೂರು, ಉಡುಪಿ, ವಿಜಯಪುರ, ಮುಂಬೈ ಹಾಗೂ ಗೋವಾದಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.

 

 

 

 

 

 

ಚಿತ್ರದಲ್ಲಿ ಹೊಸ ಪ್ರತಿಭೆಗಳಾದ ವಿಜಯ್ ರಾಜ್ ಮತ್ತು ಖುಷ್ಬು ನಾಯಕ-ನಾಯಕಿಯಾಗಿ ಅಭಿನಯಿಸಿದ್ದಾರೆ. ಹಿರಿಯ ನಟಿ ಶೃತಿ, ರಾಜು ಖೇರ್, ಸಂಗೀತ, ಮೂಗು ಸುರೇಶ್, ಸುಧಾ ಬೆಳವಾಡಿ, ಮಂಜುನಾಥ್ ಹೆಗ್ಡೆ ಹಾಗೂ ಶ್ರೀಶ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎ.ಆರ್. ರೆಹಮಾನ್ ತಂಡದಲ್ಲಿ ಕಾರ್ಯನಿರ್ವಹಿಸಿದ್ದ ಸುಕೃತ್ ಸಂಗೀತ ನಿರ್ದೇಶನ ಮಾಡಿದ್ದು, ಸಿದ್ದು ಕಂಚನಹಳ್ಳಿ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹಾಡುಗಳಿಗೆ ನಾಗಾರ್ಜುನ ಶರ್ಮ ಸಾಹಿತ್ಯ ರಚಿಸಿದ್ದಾರೆ.

 

 

 

 

 

 

 

ನಿರ್ಮಾಪಕಿ ಹಾಗೂ ಕಥೆಗಾರ್ತಿ ಲತಾಶ್ರೀ ಡಿ.ಸಿ ಮಾತನಾಡಿ, ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಹಾಗೂ ತಮ್ಮ ತಂದೆ, ಮಾಜಿ ಶಾಸಕ ದೇವಾನಂದ್ ಚವ್ಹಾಣ್ ಅವರ ಆಶೀರ್ವಾದ ಮತ್ತು ಸಹಕಾರದಿಂದ ಸಿನಿಮಾ ನಿರ್ಮಾಣವಾಗಿದೆ ಎಂದರು. ಇದು ಕೇವಲ ಪ್ರೇಮಕಥೆಯಲ್ಲ, ಪ್ರೀತಿಯನ್ನು ವಿಭಿನ್ನ ರೀತಿಯಲ್ಲಿ ನಿರೂಪಿಸುವ ಮನರಂಜನಾತ್ಮಕ ಚಿತ್ರವಾಗಿದ್ದು, ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾಯಕ ವಿಜಯ್ ರಾಜ್, ನಾಯಕಿ ಖುಷ್ಬು ಹಾಗೂ ಪ್ರಮುಖ ಪಾತ್ರಧಾರಿ ಶ್ರೀಶ ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ಹಂಚಿಕೊಂಡು ಚಿತ್ರದ ಮೇಲಿನ ನಿರೀಕ್ಷೆಗಳನ್ನು ವ್ಯಕ್ತಪಡಿಸಿದರು.

Spread the love

Copyright © 2019 PopcornKannada.com