Cinema News

ನಂದಗೋಕುಲ ಖ್ಯಾತಿಯ ಅಭಿದಾಸ್ ನಟನೆಯ ‘ಕಾಲಘಟ್ಟ’ ಜೂನ್ 19ಕ್ಕೆ ಬಿಡುಗಡೆ

Published

on

‘ಖಾಲಿ ಡಬ್ಬ’ ಚಿತ್ರದ ಮೂಲಕ ಗುರುತಿಸಿಕೊಂಡ ನಿರ್ದೇಶಕ ಕೆ. ಪ್ರಕಾಶ್ ಅಂಬಳೆ ಅವರ ಹೊಸ ಚಿತ್ರ ‘ಕಾಲಘಟ್ಟ’ ಇದೇ ಜೂನ್ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಬೆಂಗಳೂರಿನ ಎಸ್‌ಆರ್‌ವಿ ಥಿಯೇಟರ್‌ನಲ್ಲಿ ಸುದ್ದಿಗೋಷ್ಠಿ ಆಯೋಜಿಸಲಾಗಿದ್ದು, ಚಿತ್ರತಂಡದ ಸದಸ್ಯರು ಭಾಗವಹಿಸಿ ಸಿನಿಮಾದ ವಿಶೇಷತೆಗಳನ್ನು ಹಂಚಿಕೊಂಡರು.

 

ಚಿತ್ರದ ನಾಯಕ ಅಭಿದಾಸ್ ಮಾತನಾಡಿ, ಈ ಸಿನಿಮಾದಲ್ಲಿ ತಾವು ಹಿಂದೆಂದೂ ಮಾಡದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ತಿಳಿಸಿದರು. 1995 ಹಾಗೂ 2025ರ ಎರಡು ವಿಭಿನ್ನ ಕಾಲಘಟ್ಟಗಳಲ್ಲಿ ಕಥೆ ಸಾಗುತ್ತಿದ್ದು, ತಾವು 1990ರ ದಶಕದ ಹಳ್ಳಿ ಯುವಕನ ಪಾತ್ರದಲ್ಲಿ ನಟಿಸಿದ್ದೇನೆ ಎಂದರು. ಗ್ರಾಮೀಣ ಹಿನ್ನೆಲೆಯ ಈ ಪಾತ್ರ ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

 

 

 

 

 

 

ನಿರ್ದೇಶಕ ಕೆ. ಪ್ರಕಾಶ್ ಅಂಬಳೆ ಮಾತನಾಡಿ, ಇಂದಿನ ಕಮರ್ಷಿಯಲ್ ಸಿನೆಮಾಗಳ ನಡುವೆಯೂ ಜಾನಪದ ಕಲೆ, ಗೊರವ ಸಂಸ್ಕೃತಿ ಮತ್ತು ಗ್ರಾಮೀಣ ಮೌಲ್ಯಗಳನ್ನು ಒಳಗೊಂಡ ಕಥೆಯನ್ನು ತೆರೆಗೆ ತರಬೇಕೆಂಬ ಉದ್ದೇಶದಿಂದ ಈ ಚಿತ್ರವನ್ನು ರೂಪಿಸಿದ್ದಾಗಿ ಹೇಳಿದರು. ಕಥೆಯನ್ನು ಕೇಳಿದ ನಿರ್ಮಾಪಕರು ಸಂಪೂರ್ಣ ಬೆಂಬಲ ನೀಡಿದ್ದರಿಂದ ಚಿತ್ರ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಈಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ ಎಂದು ತಿಳಿಸಿದರು.

 

 

 

 

 

 

ಅಭಿದಾಸ್ ಮತ್ತು ನಿತಿನ್ ನಾಯಕರಾಗಿ ನಟಿಸಿರುವ ಈ ಚಿತ್ರದಲ್ಲಿ ಮೇಘ ಹಾಗೂ ಖುಷಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಶೋಭರಾಜ್, ಭವ್ಯ, ಪ್ರಶಾಂತ್ ಸೇರಿದಂತೆ ಹಲವು ಹಿರಿಯ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಕೆ. ಪ್ರಕಾಶ್ ಅಂಬಳೆ ಬರೆದಿದ್ದು, ಸದಾಶಿವ ಹಿರೇಮಠ ಮತ್ತು ರಾಜ್ ಕಡೂರ್ ಛಾಯಾಗ್ರಹಣ, ಎ.ಎಂ. ನೀಲ್ ಸಂಗೀತ, ವೆಂಕಿ ಯುಡಿವಿ ಸಂಕಲನ ಹಾಗೂ ಮಾಸ್ ಮಾದ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಲಯನ್ ಚಿಕ್ಕೇಗೌಡ ಮತ್ತು ಟಿ.ಸಿ. ತಳಗವಾಡಿ ನಿರ್ಮಿಸಿರುವ ‘ಕಾಲಘಟ್ಟ’ ಜೂನ್ 19ರಂದು ಪ್ರೇಕ್ಷಕರನ್ನು ಭೇಟಿಯಾಗಲಿದೆ.

Spread the love

Copyright © 2019 PopcornKannada.com