Cinema News

‘ಸೆಲೆಬ್ರಿಟಿ’ ಚಿತ್ರದ ಮೆಲೋಡಿ ಹಾಡಿಗೆ ಜಾನಿ ಮಾಸ್ಟರ್ ಕೊರಿಯೋಗ್ರಫಿ

Published

on

ಗೌರಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಜೆಡಿಎಸ್ ನಾಯಕ ಸಾರಾ ಮಹೇಶ್ ಹಾಗೂ ಸುಷ್ಮಾ ಅಶ್ವಿನ್ ನಿರ್ಮಿಸುತ್ತಿರುವ *’ಸೆಲೆಬ್ರಿಟಿ’* ಚಿತ್ರದ ಚಿತ್ರೀಕರಣ ವೇಗವಾಗಿ ಸಾಗುತ್ತಿದೆ. ಯುವ ನಟ ಅಶ್ವಿನ್ ನಾಯಕನಾಗಿ ಪರಿಚಯವಾಗುತ್ತಿರುವ ಈ ಸಿನಿಮಾದ ಕಪಲ್ ಸಾಂಗ್ ಅನ್ನು ಇಂದು ಮೇಲುಕೋಟೆಯ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಯಿತು. ನಾಯಕ ಅಶ್ವಿನ್ ಮತ್ತು ನಾಯಕಿ ಪ್ರಿಯಾಂಕಾ ಆಚಾರ್ ಅಭಿನಯಿಸಿದ ಈ ಮೆಲೋಡಿ ಹಾಡಿಗೆ ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ.

 

ಹಾಡಿನ ಚಿತ್ರೀಕರಣದ ವೇಳೆ ಮಾತನಾಡಿದ ಜಾನಿ ಮಾಸ್ಟರ್, ದೊಡ್ಡ ಸ್ಟಾರ್‌ಗಳಿಗೆ ಅವರ ಇಮೇಜ್‌ಗೆ ತಕ್ಕಂತೆ ಕೊರಿಯೋಗ್ರಫಿ ರೂಪಿಸಬೇಕಾಗುತ್ತದೆ. ಆದರೆ ಹೊಸ ಕಲಾವಿದರು ಹೊಸತನಕ್ಕೆ ಹೆಚ್ಚು ಅವಕಾಶ ನೀಡುವುದರಿಂದ ಸೃಜನಶೀಲವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದರು. ಅಶ್ವಿನ್ ಈ ಹಾಡಿಗಾಗಿ ನಾಲ್ಕು ದಿನಗಳ ಕಾಲ ನಿರಂತರ ರಿಹರ್ಸಲ್ ನಡೆಸಿದ್ದು, ಅವರ ಪರಿಶ್ರಮ ಮೆಚ್ಚುವಂತಿದೆ. ಈ ತಂಡದೊಂದಿಗೆ ಕೆಲಸ ಮಾಡಲು ನಿರ್ಮಾಪಕರು ಸುಮಾರು ಒಂದೂವರೆ ವರ್ಷದಿಂದ ಕಾಯುತ್ತಿದ್ದರು ಎಂಬುದನ್ನೂ ಅವರು ತಿಳಿಸಿದರು.

 

 

 

 

 

 

ನಟ ಅಶ್ವಿನ್ ಮಾತನಾಡಿ, ಮೇಲುಕೋಟೆಯಲ್ಲೇ ಈ ಕಪಲ್ ಸಾಂಗ್ ಚಿತ್ರೀಕರಿಸಬೇಕೆಂಬ ಆಸೆ ಇತ್ತು. ಅದೇ ರೀತಿ ಇಂದು ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ. ಜಾನಿ ಮಾಸ್ಟರ್ ಅವರೊಂದಿಗೆ ಕೆಲಸ ಮಾಡುವುದು ತಮ್ಮ ಕನಸಾಗಿದ್ದು, ಚಿತ್ರದ ಈ ಹಾಡಿನಲ್ಲಿ ವಿಶೇಷ ಹುಕ್ ಸ್ಟೆಪ್ಸ್ ಪ್ರೇಕ್ಷಕರಿಗೆ ಇಷ್ಟವಾಗಲಿವೆ ಎಂದರು. ಇದೇ ವೇಳೆ ನಾಯಕಿ ಪ್ರಿಯಾಂಕಾ ಆಚಾರ್, ಸಿರಿ ಎಂಬ ಯೂಟ್ಯೂಬರ್ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಹೇಳಿ, ಉತ್ತಮ ತಂಡದೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದು ಹಂಚಿಕೊಂಡರು.

 

 

 

 

 

 

‘ಸೆಲೆಬ್ರಿಟಿ’ ಚಿತ್ರಕ್ಕೆ ಕಿರಣ್ ವಿಶ್ವನಾಥ್ ನಿರ್ದೇಶನ ಮಾಡುತ್ತಿದ್ದು, ‘ಯಾರೇ ನೀನು ಚೆಲುವೆ’ ಖ್ಯಾತಿಯ ಸಂಗೀತಾ ಹಲವು ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಸುರೇಶ್ ಬಾಬು ಸಿಬಿ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದು, ಗುಮ್ಮಿನೇನಿ ವಿಜಯ್ ಸಂಗೀತ, ರವಿ ವರ್ಮಾ ಸಾಹಸ ನಿರ್ದೇಶನ, ಗುಣ ಕಲಾ ನಿರ್ದೇಶನ ಹಾಗೂ ಅನಿರುದ್ಧ್ ಶಾಸ್ತ್ರಿ ಸಾಹಿತ್ಯ ಈ ಚಿತ್ರಕ್ಕಿದೆ.

Spread the love

Copyright © 2019 PopcornKannada.com