Television News
ಭಾರತದ ಟಾಪ್ 10ನಲ್ಲಿ ಸತತ 15 ವಾರ! ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ಗೆ ಭರ್ಜರಿ OTT ಯಶಸ್ಸು
ಕನ್ನಡದ ಕಂಟೆಂಟ್ ಆಧಾರಿತ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ನಡುವೆಯೇ, ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಡಿಜಿಟಲ್ ವೇದಿಕೆಯಲ್ಲಿ ಮಹತ್ವದ ಸಾಧನೆ ಮಾಡಿದೆ. ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಭಾರತದ ಟಾಪ್ 10 ಸಿನಿಮಾಗಳ ಪಟ್ಟಿಯಲ್ಲಿ ಸತತ 15 ವಾರಗಳ ಕಾಲ ಸ್ಥಾನ ಕಾಯ್ದುಕೊಂಡಿರುವ ಈ ಚಿತ್ರ, 250 ಮಿಲಿಯನ್‌ಗಿಂತಲೂ ಅಧಿಕ ಅಂದರೆ 25 ಕೋಟಿಗೂ ಹೆಚ್ಚು ಸ್ಟ್ರೀಮಿಂಗ್ ನಿಮಿಷಗಳ ವೀಕ್ಷಣೆಯನ್ನು ದಾಖಲಿಸಿ ಹೊಸ ಮೈಲಿಗಲ್ಲು ನಿರ್ಮಿಸಿದೆ.
ವಿಜಯ್ ರಾಘವೇಂದ್ರ, ಗೋಪಾಲಕೃಷ್ಣ ದೇಶಪಾಂಡೆ ಹಾಗೂ ಸಾಗರ್ ಪುರಾಣಿಕ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಈ ಚಿತ್ರ ತನ್ನ ಬಿಗಿಯಾದ ಕಥಾಹಂದರ ಮತ್ತು ನೈಜ ಅಭಿನಯದಿಂದ ಪ್ರೇಕ್ಷಕರ ಮನಗೆದ್ದಿದೆ. ಸಸ್ಪೆನ್ಸ್ ಹಾಗೂ ಭಾವನಾತ್ಮಕ ಅಂಶಗಳ ಸಮತೋಲನದೊಂದಿಗೆ ಸಾಗುವ ಕಥೆ, OTT ಪ್ರೇಕ್ಷಕರನ್ನು ನಿರಂತರವಾಗಿ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಅವರು ಥ್ರಿಲ್ಲರ್ ಕಥೆಯನ್ನು ನೈಜತೆಯ ಸ್ಪರ್ಶದೊಂದಿಗೆ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರವನ್ನು ಖ್ಯಾತ ನಿರ್ಮಾಪಕ ಪವನ್ ಒಡೆಯರ್ ಪ್ರಸ್ತುತಪಡಿಸಿದ್ದು, ದೇವಿಪ್ರಸಾದ್ ಶೆಟ್ಟಿ ಮತ್ತು ಸಾತ್ವಿಕ್ ಹೆಬ್ಬಾರ್ ಜಂಟಿಯಾಗಿ ನಿರ್ಮಿಸಿದ್ದಾರೆ. ಕನ್ನಡದ ಜೊತೆಗೆ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲೂ ಸಿನಿಮಾ ಬಿಡುಗಡೆಯಾಗಿ ವ್ಯಾಪಕ ಪ್ರೇಕ್ಷಕರನ್ನು ತಲುಪಿದೆ.
OTTಯಲ್ಲಿ 250+ ಮಿಲಿಯನ್ ಸ್ಟ್ರೀಮಿಂಗ್ ನಿಮಿಷಗಳು ಹಾಗೂ ಭಾರತದ ಟಾಪ್ 10 ಪಟ್ಟಿಯಲ್ಲಿ 15 ವಾರಗಳ ಸತತ ಸ್ಥಾನ ಎನ್ನುವುದು ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ಗೆ ಸಿಕ್ಕಿರುವ ದೊಡ್ಡ ಯಶಸ್ಸಾಗಿದೆ. ಈ ಸಾಧನೆಯು ಕನ್ನಡ ಸಿನಿಮಾಗಳ ಬಲಿಷ್ಠ ಕಥೆ ಮತ್ತು ಗುಣಮಟ್ಟದ ಕಂಟೆಂಟ್‌ಗೆ ಮತ್ತೊಂದು ಸಾಕ್ಷಿಯಾಗಿದ್ದು, ಸ್ಯಾಂಡಲ್‌ವುಡ್‌ಗೆ ಹೆಮ್ಮೆಯ ಕ್ಷಣವನ್ನು ತಂದಿದೆ.