Cinema News

ರವಿಚಂದ್ರನ್ ವಿಶೇಷ ಪಾತ್ರದಲ್ಲಿ; ‘ಪ್ಯಾರ್’ ಚಿತ್ರದ ಟೀಸರ್ ರಿಲೀಸ್

Published

on

ಎಸ್.ಎಂ. ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಹೆಚ್.ಎಸ್. ನಾಗಶ್ರೀ ನಿರ್ಮಿಸಿರುವ, ತಂದೆ–ಮಗಳ ನಡುವಿನ ಅಪರೂಪದ ಬಾಂಧವ್ಯವನ್ನು ಕೇಂದ್ರವಾಗಿಟ್ಟುಕೊಂಡ ಪ್ಯಾರ್’ ಸಿನಿಮಾ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಎಸ್. ಸುಪ್ರೀತ್ ಕಥೆ ಹಾಗೂ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ರಿಶ್ವಿನ್ ಹಾಗೂ ರಾಶಿಕಾ ಶೆಟ್ಟಿ ನಾಯಕ–ನಾಯಕಿಯಾಗಿ ಕಾಣಿಸಿಕೊಂಡಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದ ಭಾವನಾತ್ಮಕ ಟೀಸರ್ ಬಿಡುಗಡೆಯಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಒಂದೇ ಮಾತಲಿ ಹೇಳೋದಾದರೆ’ ಹಾಡು ಉತ್ತಮ ವೀಕ್ಷಣೆ ಪಡೆದುಕೊಂಡಿದ್ದು, ಪಳನಿ ಡಿ. ಸೇನಾಪತಿ ಸಂಗೀತ ಹಾಗೂ ಕೆ.ಎಸ್. ಚಂದ್ರಶೇಖರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

 

ಟೀಸರ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಸುಪ್ರೀತ್, ಚಿತ್ರದ ಎರಡು ಹಾಡುಗಳಾದ ‘ಒಂದೇ ಮಾತಲಿ’ ಹಾಗೂ ‘ರಾಯಭಾರಿಯಾಗಿ’ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಸಂತಸ ಹಂಚಿಕೊಂಡರು. ನಿರ್ಮಾಪಕರು ತಮ್ಮ ಮೇಲಿಟ್ಟ ನಂಬಿಕೆಯಿಂದ ಸಿನಿಮಾಗೆ ಅದ್ಧೂರಿಯಾಗಿ ಬಂಡವಾಳ ಹೂಡಿದ್ದಾರೆ ಎಂದ ಅವರು, ಪ್ರೀತಿ–ಪ್ರೇಮದ ಕಥೆಯ ಜತೆಗೆ ತಂದೆ ಮತ್ತು ಮಗಳ ನಡುವಿನ ಗಾಢ ಭಾವನಾತ್ಮಕ ಸಂಬಂಧವನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ ಎಂದರು. ತಂದೆಗಾಗಿ ಮಗಳು ಯಾವ ಹಂತಕ್ಕೂ ಹೋಗಬಲ್ಲಳು ಎಂಬುದೇ ಕಥೆಯ ಪ್ರಮುಖ ಅಂಶವಾಗಿದ್ದು, ರಾಶಿಕಾ ಶೆಟ್ಟಿ ತಮ್ಮ ಪಾತ್ರದಲ್ಲಿ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರವಿಚಂದ್ರನ್ ಅವರು ತಾವು ಕಲ್ಪಿಸಿಕೊಂಡಿದ್ದ ತಂದೆಯ ಪಾತ್ರಕ್ಕೆ ನಿರೀಕ್ಷೆಗೂ ಮೀರಿದ ಜೀವ ತುಂಬಿದ್ದಾರೆ ಎಂದರು.

 

 

 

 

 

ನಿರ್ಮಾಪಕಿ ಹೆಚ್.ಎಸ್. ನಾಗಶ್ರೀ ಮಾತನಾಡಿ, ಪ್ಯಾರ್’ ಎಂಬ ಶೀರ್ಷಿಕೆ ರವಿಚಂದ್ರನ್ ಅವರಿಗೆ ಸೂಕ್ತವಾಗಿ ಹೊಂದಿಕೆಯಾಗುತ್ತದೆ ಎಂದರು. ‘ಒಂದೇ ಮಾತಲಿ ಹೇಳೋದಾದರೆ’ ಹಾಡನ್ನು ರವಿಚಂದ್ರನ್ ಬಿಡುಗಡೆ ಮಾಡಿದ್ದರಿಂದ ಚಿತ್ರಕ್ಕೆ ಹೆಚ್ಚಿನ ರೀಚ್ ದೊರೆತಿದೆ ಎಂದು ತಿಳಿಸಿದರು. ರಾಶಿಕಾ ಶೆಟ್ಟಿ ಅವರಿಂದಲೂ ಸಿನಿಮಾಗೆ ಉತ್ತಮ ಪ್ರಚಾರ ಸಿಕ್ಕಿದೆ ಎಂದು ಹೇಳಿದರು. ಕುಟುಂಬದ ಸಹಕಾರದಿಂದ ಸಿನಿಮಾ ಪೂರ್ಣಗೊಳಿಸಿದ್ದು, ಅಕ್ಟೋಬರ್‌ನಲ್ಲಿ ಚಿತ್ರವನ್ನು ತೆರೆಗೆ ತರುವ ಯೋಜನೆ ಇದೆ ಎಂದರು. ವಿಶೇಷವೆಂದರೆ ಬಹಳ ದಿನಗಳ ನಂತರ ಸೋನು ನಿಗಮ್ ಹಾಗೂ ಶ್ರೇಯಾ ಘೋಷಾಲ್ ಈ ಚಿತ್ರಕ್ಕಾಗಿ ಹಾಡಿದ್ದಾರೆ. ಕಾಶ್ಮೀರ, ರಾಜಸ್ಥಾನ, ಅಂಡಮಾನ್ ಸೇರಿದಂತೆ ಮಂಗಳೂರು, ಚಿಕ್ಕಮಗಳೂರು, ಮೈಸೂರು ಹಾಗೂ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

 

 

 

 

 

 

ನಾಯಕ ರಿಶ್ವಿನ್ ತಮ್ಮ ಪಾತ್ರದಲ್ಲಿ ಅಭಿನಯಕ್ಕೆ ಸಾಕಷ್ಟು ಅವಕಾಶವಿದೆ ಎಂದು ಹೇಳಿದ್ದು, ನಾಲ್ಕು ವರ್ಷಗಳ ಚಿತ್ರತಂಡದ ಪರಿಶ್ರಮ ಟೀಸರ್‌ನಲ್ಲಿ ಕಾಣಿಸುತ್ತದೆ ಎಂದರು. ತಂದೆ–ಮಗಳ ಭಾವನೆಗಳ ಜತೆಗೆ ಯುವ ಜೋಡಿಯ ಪ್ರೇಮಕಥೆಯೂ ಸಿನಿಮಾದಲ್ಲಿದೆ ಎಂದು ತಿಳಿಸಿದರು. ನಾಯಕಿ ರಾಶಿಕಾ ಶೆಟ್ಟಿ, ತಮ್ಮ ಪಾತ್ರದ ಹೆಸರು ಅತೀವ’ ಆಗಿದ್ದು, ತಂದೆಯೆಂದರೆ ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧಳಾಗಿರುವ ಹುಡುಗಿಯ ಪಾತ್ರ ಇದು ಎಂದು ಪರಿಚಯಿಸಿದರು. ಸಂಗೀತ ನಿರ್ದೇಶಕ ಪಳನಿ ಡಿ. ಸೇನಾಪತಿ ಹಾಗೂ ಛಾಯಾಗ್ರಾಹಕ ಕೆ.ಎಸ್. ಚಂದ್ರಶೇಖರ್ ಕೂಡ ಚಿತ್ರದ ಕುರಿತು ಮಾತನಾಡಿದರು. ಸೋನು ನಿಗಮ್, ಕುನಾಲ್ ಗಾಂಜಾವಾಲ, ವಿಜಯಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಪಲಕ್ ಮಚ್ಚಲ್ ಧ್ವನಿಯಾಗಿರುವ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್, ವಿಜಯ ಸೂರ್ಯ, ಶಂಕರ್ ಅಶ್ವಥ್ ಸೇರಿದಂತೆ ಹಲವರು ನಟಿಸಿದ್ದಾರೆ.

 

Spread the love

Copyright © 2019 PopcornKannada.com