Cinema News

ಕರಾವಳಿ ಕಥಾಹಂದರದಲ್ಲಿ ಮರ್ಡರ್ ಮಿಸ್ಟರಿ ‘ಗುಡ್ಡದ ಭೂತ’

Published

on

‘ಫಾರೆಸ್ಟ್’ ಚಿತ್ರದ ಮೂಲಕ ನಿರ್ಮಾಪಕರಾಗಿ ಗಮನ ಸೆಳೆದಿರುವ ಎನ್.ಎಂ. ಕಾಂತರಾಜ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ಗುಡ್ಡದ ಭೂತ’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ‘ಮುಗಿಲ್ ಪೇಟೆ’ ಹಾಗೂ ‘ಅಡಚಣೆಗಾಗಿ ಕ್ಷಮಿಸಿ’ ಚಿತ್ರಗಳ ನಿರ್ದೇಶಕ ಭರತ್ ಎಸ್. ನಾವುಂದ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸಿರುವ ಈ ಚಿತ್ರದ ಟೀಸರ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ವೀಕ್ಷಣೆಗಳ ಸಂಖ್ಯೆಯೂ ಹೆಚ್ಚುತ್ತಿದೆ. ಟೀಸರ್ ಬಿಡುಗಡೆಯ ಬಳಿಕ ಚಿತ್ರತಂಡದ ಸದಸ್ಯರು ಸಿನಿಮಾದ ವಿಶೇಷತೆಗಳನ್ನು ಹಂಚಿಕೊಂಡರು.

 

ನಿರ್ದೇಶಕ ಭರತ್ ಎಸ್. ನಾವುಂದ್ ಮಾತನಾಡಿ, ‘ಗುಡ್ಡದ ಭೂತ’ ಎಂಬ ಹೆಸರು ಕೇಳಿದಾಗ ತೊಂಬತ್ತರ ದಶಕದಲ್ಲಿ ಜನಪ್ರಿಯವಾಗಿದ್ದ ಧಾರಾವಾಹಿ ನೆನಪಾಗುವುದು ಸಹಜ. ಆದರೆ ಈ ಚಿತ್ರವು ಕರಾವಳಿ ಭಾಗದ ಹಿನ್ನೆಲೆಯಲ್ಲಿರುವ ಸ್ವತಂತ್ರ ಕಥೆಯನ್ನು ಹೊಂದಿದೆ ಎಂದು ಸ್ಪಷ್ಟಪಡಿಸಿದರು. ಇದು ನೈಜ ಘಟನೆ ಆಧಾರಿತ ಚಿತ್ರವಲ್ಲ; ಕುಟುಂಬವೊಂದರಲ್ಲಿ ನಡೆಯುವ ಕೊಲೆಯ ಸುತ್ತ ಹೆಣೆಯಲಾದ ಮರ್ಡರ್ ಮಿಸ್ಟರಿ. ಶಿರಸಿ, ಮಂಚಿಕೆರೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಚಿತ್ರೀಕರಣ ಪೂರ್ಣಗೊಂಡಿದೆ. ಸಮರ್ಜಿತ್ ಲಂಕೇಶ್ ನಾಯಕನಾಗಿದ್ದರೂ, ಚಿತ್ರದ ನಿಜವಾದ ಶಕ್ತಿ ಅದರ ಕಥೆಯೇ ಆಗಿದೆ. ಈ ಸಿನಿಮಾದ ಮೂಲಕ ಹಲವಾರು ರಂಗಭೂಮಿ ಕಲಾವಿದರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

 

 

 

 

 

ನಿರ್ಮಾಪಕ ಎನ್.ಎಂ. ಕಾಂತರಾಜ್ ಮಾತನಾಡಿ, ನಿರ್ದೇಶಕರು ಕಥೆ ವಿವರಿಸಿದ ರೀತಿ ತಮ್ಮಲ್ಲಿ ತಕ್ಷಣ ಸಿನಿಮಾ ನಿರ್ಮಿಸುವ ಉತ್ಸಾಹ ಮೂಡಿಸಿತು ಎಂದರು. ಆರಂಭದಲ್ಲಿ 30 ದಿನಗಳಲ್ಲಿ ಚಿತ್ರೀಕರಣ ಮುಗಿಸುವ ಯೋಜನೆ ರೂಪಿಸಲಾಗಿತ್ತು. ಆದರೆ ನಿರೀಕ್ಷೆಗಿಂತ ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಂಡು ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಸಮರ್ಜಿತ್ ಅವರ ಅಭಿನಯವೂ ಉತ್ತಮವಾಗಿ ಮೂಡಿಬಂದಿದೆ. ಪ್ರಸ್ತುತ ಚಿತ್ರದ ವಿಎಫ್‌ಎಕ್ಸ್ ಕೆಲಸ ನಡೆಯುತ್ತಿದ್ದು, ಅದು ಮುಗಿದ ಬಳಿಕ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.

 

ನಾಯಕ ಸಮರ್ಜಿತ್ ಲಂಕೇಶ್ ಮಾತನಾಡಿ, ಭರತ್ ಅವರು ಕಥೆ ನಿರೂಪಿಸಿದ ಶೈಲಿ ಬಹಳ ಆಕರ್ಷಕವಾಗಿತ್ತು ಎಂದರು. ಚಿತ್ರದಲ್ಲಿ ಅಲೋಕ್ ಎಂಬ ಹೆಸರಿನ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ತಿಳಿಸಿದರು. ಹಿರಿಯ ಕಲಾವಿದರೊಂದಿಗೆ ಕೆಲಸ ಮಾಡುವ ಮೂಲಕ ಸಾಕಷ್ಟು ಕಲಿತಿದ್ದೇನೆ ಎಂದ ಅವರು, ನಿರ್ಮಾಪಕರು ಚಿತ್ರಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಗೀತ ನಿರ್ದೇಶಕ ಶ್ರೀಹರಿ ಮಾತನಾಡಿ, ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಖ್ಯಾತ ಗಾಯಕ-ಗಾಯಕಿಯರು ಹಾಡಿದ್ದಾರೆ. ಹಿನ್ನೆಲೆ ಸಂಗೀತದ ಕೆಲಸವೂ ಉತ್ತಮವಾಗಿ ಮೂಡಿಬಂದಿದೆ ಎಂದರು. ದೀಪಕ್ ಕುಮಾರ್ ಛಾಯಾಗ್ರಹಣ ಹಾಗೂ ಶಶಿಧರ್ ಸಂಕಲನ ಈ ಚಿತ್ರಕ್ಕಿದೆ. ಟೀಸರ್‌ನಿಂದ ಕುತೂಹಲ ಮೂಡಿಸಿರುವ ‘ಗುಡ್ಡದ ಭೂತ’ ಇದೀಗ ತಾಂತ್ರಿಕ ಕೆಲಸಗಳನ್ನು ಪೂರ್ಣಗೊಳಿಸಿ ಬಿಡುಗಡೆಯತ್ತ ಹೆಜ್ಜೆ ಹಾಕುತ್ತಿದೆ.

Spread the love

Copyright © 2019 PopcornKannada.com