Cinema News
ಬಾದಾಮಿ ಬೆಟ್ಟದಲ್ಲಿ ಅದ್ಧೂರಿ ಹಾಡಿನ ಚಿತ್ರೀಕರಣ; ‘ಕರ್ಣಾಟಬಲಂ ಅಜೇಯಂ’ಗೆ ಸಾವಿರಾರು ಕಲಾವಿದರ ಸಂಗಮ
ಸಿ.ಪಿ. ಯೋಗೇಶ್ವರ್ ಅವರ ಪುತ್ರ ಧ್ಯಾನ್ ಯೋಗೇಶ್ವರ್ ನಾಯಕನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿರುವ ‘ಕರ್ಣಾಟಬಲಂ ಅಜೇಯಂ’ ಚಿತ್ರದ ಶೀರ್ಷಿಕೆ ಗೀತೆಯ ಭವ್ಯ ಚಿತ್ರೀಕರಣ ಬಾದಾಮಿಯಲ್ಲಿ ನಡೆಯಿತು. ಬಾದಾಮಿ ಕೋಟೆ ಸೇರಿದಂತೆ ಐತಿಹಾಸಿಕ ತಾಣಗಳಲ್ಲಿ ನಡೆದ ಈ ಹಾಡಿನಲ್ಲಿ ಸಾವಿರಾರು ನೃತ್ಯ ಕಲಾವಿದರು ಪಾಲ್ಗೊಂಡಿದ್ದು, ‘ಬಾದಾಮಿ ಸೀಮೆಯಿದು ಎಂಥ ಸೊಬಗು…’ ಗೀತೆಗೆ ಧ್ಯಾನ್ ಯೋಗೇಶ್ವರ್ ಅದ್ಧೂರಿಯಾಗಿ ಹೆಜ್ಜೆ ಹಾಕಿದರು. ಯಕ್ಷಗಾನ, ನಂದಿಕೋಲು ಕುಣಿತ ಸೇರಿದಂತೆ ಹಲವು ಜನಪದ ಕಲಾ ತಂಡಗಳ ಪ್ರದರ್ಶನ ಈ ಹಾಡಿನ ಪ್ರಮುಖ ಆಕರ್ಷಣೆಯಾಯಿತು.
ಚಿತ್ರೀಕರಣ ವೀಕ್ಷಣೆಗೆ ಆಹ್ವಾನಿಸಿದ್ದ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಪಿ. ಯೋಗೇಶ್ವರ್, ಇದು ಕನ್ನಡದ ಇತಿಹಾಸ, ರೈತರ ಬದುಕು ಹಾಗೂ ಮಹಾದಾಯಿ ಹೋರಾಟದಂತಹ ಸಮಕಾಲೀನ ವಿಷಯಗಳನ್ನು ಜೋಡಿಸುವ ಅಪ್ಪಟ ಕನ್ನಡದ ಸಿನಿಮಾ ಎಂದು ಹೇಳಿದರು. ಬಾದಾಮಿಯಿಂದ ಆರಂಭವಾಗುವ ಕಥೆ ಇಡೀ ಕರ್ನಾಟಕದ ನೆಲದ ಸೊಗಡನ್ನು ತೆರೆಗೆ ತರುತ್ತದೆ ಎಂದು ತಿಳಿಸಿದ ಅವರು, ಚಿತ್ರದ ಶೇ.35ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಉಳಿದ ಭಾಗವನ್ನು ಹೊಸಪೇಟೆ, ಬೆಂಗಳೂರು ಹಾಗೂ ಹಳೆ ಮೈಸೂರು ಭಾಗದಲ್ಲಿ ಚಿತ್ರೀಕರಿಸಲಾಗುತ್ತದೆ ಎಂದರು. ಸಿನಿಮಾ ಸಂಕ್ರಾಂತಿ ವೇಳೆಗೆ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನೂ ಹಂಚಿಕೊಂಡರು.
ನಿರ್ದೇಶಕ ನಾಗಣ್ಣ ಮಾತನಾಡಿ, ಐತಿಹಾಸಿಕ ಹಾಗೂ ಸಾಮಾಜಿಕ ಕಥೆಯನ್ನು ಒಂದೇ ಚಿತ್ರದಲ್ಲಿ ಕಟ್ಟಿಕೊಡುವ ಪ್ರಯತ್ನ ಇದಾಗಿದೆ ಎಂದು ಹೇಳಿದರು. ಸುಮಾರು 1,000ಕ್ಕೂ ಹೆಚ್ಚು ಕಲಾವಿದರು ಮತ್ತು ತಂತ್ರಜ್ಞರು ಭಾಗವಹಿಸಿರುವ ಈ ಹಾಡಿಗೆ ಮೋಹನ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದು, ತ್ರಿಲೋಕ್ ತ್ರಿವಿಕ್ರಮ್ ಸಾಹಿತ್ಯ ಹಾಗೂ ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ನಾಯಕ ಧ್ಯಾನ್ ಯೋಗೇಶ್ವರ್ ಕೂಡ ಚಿತ್ರದ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದು, ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರದಲ್ಲಿ ಮಣಿಕಾ ವಿಶ್ವಕರ್ಮ ನಾಯಕಿಯಾಗಿ ನಟಿಸಿದ್ದು, ಲಯ, ಸಂಪತ್, ಮಾನಸಿ ಸುಧೀರ್, ಬಲರಾಜ್‌ವಾಡಿ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಂದ್ರು ಛಾಯಾಗ್ರಹಣ, ಎಂ.ಎಸ್. ರಮೇಶ್ ಸಂಭಾಷಣೆ ಹಾಗೂ ಕೆ.ಪಿ. ಶ್ರೀಕಾಂತ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಕನ್ನಡದ ಇತಿಹಾಸ, ಸಂಸ್ಕೃತಿ ಮತ್ತು ರೈತರ ಹೋರಾಟವನ್ನು ತೆರೆಗೆ ತರುವ ಮಹತ್ವಾಕಾಂಕ್ಷೆಯ ಚಿತ್ರವಾಗಿ ‘ಕರ್ಣಾಟಬಲಂ ಅಜೇಯಂ’ ರೂಪುಗೊಳ್ಳುತ್ತಿದೆ.