Cinema News

ಧ್ಯಾನ್ ಯೋಗೀಶ್ವರ್‌ಗೆ ಭರ್ಜರಿ ಲಾಂಚ್; ‘ಕರ್ಣಾಟಬಲಂ ಅಜೇಯಂ’ ಹಾಗೂ ‘ಸೈನಿಕ 2’ಗೆ ಅದ್ದೂರಿ ಚಾಲನೆ

Published

on

ಪಿಎಂಜಿ ಫಿಲಂ ಫ್ಯಾಕ್ಟರಿ ನಿರ್ಮಾಣದ ‘ಕರ್ಣಾಟಬಲಂ ಅಜೇಯಂ’ ಹಾಗೂ ‘ಸೈನಿಕ 2’ ಚಿತ್ರಗಳ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನಡೆಯಿತು. ‘ಕರ್ಣಾಟಬಲಂ ಅಜೇಯಂ’ ಚಿತ್ರಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರೆ, ‘ಸೈನಿಕ 2’ ಚಿತ್ರಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಆರಂಭ ಫಲಕ ತೋರಿಸಿದರು. ಈ ಕಾರ್ಯಕ್ರಮದಲ್ಲಿ ಹಲವು ರಾಜಕೀಯ ಗಣ್ಯರು ಹಾಗೂ ಚಿತ್ರರಂಗದ ಪ್ರಮುಖರು ಭಾಗಿಯಾಗಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

 

 

 

 

 

ಸಿ.ಪಿ. ಯೋಗೀಶ್ವರ್ ಪುತ್ರ ಧ್ಯಾನ್ ಯೋಗೀಶ್ವರ್ ಈ ಎರಡು ಚಿತ್ರಗಳ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ವಿಶೇಷವೆಂದರೆ, ಸುಮಾರು 25 ವರ್ಷಗಳ ಬಳಿಕ ಸಿ.ಪಿ. ಯೋಗೀಶ್ವರ್ ಮತ್ತೆ ನಟನಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದು, ತಂದೆ-ಮಗ ಇಬ್ಬರೂ ಈ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ‘ಕರ್ಣಾಟಬಲಂ ಅಜೇಯಂ’ ಚಿತ್ರವನ್ನು ಹಿರಿಯ ನಿರ್ದೇಶಕ ನಾಗಣ್ಣ, ‘ಸೈನಿಕ 2’ ಚಿತ್ರವನ್ನು ಪುನೀತ್ ರುದ್ರನಾಗ್ ನಿರ್ದೇಶಿಸುತ್ತಿದ್ದಾರೆ.

 

 

 

 

 

 

ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಧ್ಯಾನ್ ಅವರನ್ನು ತಮ್ಮ ಮಗನಂತೆಯೇ ಭಾವಿಸುತ್ತೇನೆ ಎಂದು ಹೇಳಿ, ಟೀಸರ್‌ನಲ್ಲಿ ಅವರ ಅಭಿನಯ ಗಮನ ಸೆಳೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿ. ಸೋಮಣ್ಣ ಕೂಡ ಯೋಗೀಶ್ವರ್ ಅವರೊಂದಿಗೆ ದೀರ್ಘಕಾಲದ ಸ್ನೇಹವನ್ನು ಸ್ಮರಿಸಿ, ತಂದೆ-ಮಗ ಅಭಿನಯಿಸುತ್ತಿರುವ ‘ಸೈನಿಕ 2’ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

 

 

 

 

 

ಸಿ.ಪಿ. ಯೋಗೀಶ್ವರ್ ಮಾತನಾಡಿ, ‘ಸೈನಿಕ’ ಚಿತ್ರದ ಮುಹೂರ್ತಕ್ಕೂ ಡಿ.ಕೆ. ಶಿವಕುಮಾರ್ ಕ್ಲಾಪ್ ಮಾಡಿದ್ದರು, ಇಂದು ನನ್ನ ಮಗನ ಮೊದಲ ಸಿನಿಮಾಕ್ಕೂ ಅವರೇ ಚಾಲನೆ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ‘ಕರ್ಣಾಟಬಲಂ ಅಜೇಯಂ’ ಕನ್ನಡದ ಮಣ್ಣಿನ ಇತಿಹಾಸವನ್ನು ಒಳಗೊಂಡ ಕಥೆಯಾಗಿದ್ದು, ಮುಂದಿನ ಸಂಕ್ರಾಂತಿಗೆ ಚಿತ್ರವನ್ನು ಬಿಡುಗಡೆ ಮಾಡುವ ಗುರಿ ಹೊಂದಿದ್ದೇವೆ ಎಂದರು. ಧ್ಯಾನ್ ಕೂಡ ನಟನಾಗಲು ಅಗತ್ಯವಾದ ಎಲ್ಲಾ ತರಬೇತಿಯನ್ನು ಪಡೆದಿದ್ದು, ಪ್ರೇಕ್ಷಕರ ಆಶೀರ್ವಾದ ಕೋರುತ್ತೇನೆ ಎಂದು ಹೇಳಿದರು.

 

 

 

 

 

‘ಕರ್ಣಾಟಬಲಂ ಅಜೇಯಂ’ ಚಿತ್ರದ ಕಥೆ ಇತಿಹಾಸ ಹಾಗೂ ಸಮಕಾಲೀನ ಕಥಾಹಂದರವನ್ನು ಹೊಂದಿದ್ದು, ಸಂಗೀತವನ್ನು ವಿ. ಹರಿಕೃಷ್ಣ, ಛಾಯಾಗ್ರಹಣವನ್ನು ಶೇಖರ್ ಚಂದ್ರ ನಿರ್ವಹಿಸುತ್ತಿದ್ದಾರೆ. ಖ್ಯಾತ ನಟ ಜಗಪತಿಬಾಬು, ನಟಿ ಲಯ, ಮಣಿಕಾ ವಿಶ್ವಕರ್ಮ ಹಾಗೂ ರೇಖಾ ಪಾಂಡೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ‘ಸೈನಿಕ 2’ ನೈಜ ಘಟನೆಗಳಿಂದ ಪ್ರೇರಿತ ಕಥೆಯಾಗಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಪುನೀತ್ ರುದ್ರನಾಗ್ ತಿಳಿಸಿದರು.

Spread the love

Copyright © 2019 PopcornKannada.com