Cinema News
ಎಐ ತಂತ್ರಜ್ಞಾನದ ಕಥೆ ಹೇಳುವ “ಗರುಡ” ಟ್ರೈಲರ್ ಬಿಡುಗಡೆ
ಎಐ ತಂತ್ರಜ್ಞಾನ ಇತ್ತೀಚೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ವೇಗವಾಗಿ ಬೆಳೆಯುತ್ತಿರುವ ನಡುವೆ, ಅದರ ಪರಿಣಾಮಗಳನ್ನು ಆಧರಿಸಿ ಮೂಡಿಬಂದಿರುವ ಸಿನಿಮಾ “ಗರುಡ” ಇದೀಗ ಟ್ರೈಲರ್ ಮೂಲಕ ಕುತೂಹಲ ಮೂಡಿಸಿದೆ. ಜನರು ಮತ್ತು ಮಕ್ಕಳ ಜೀವನದಲ್ಲಿ ಕೃತಕ ಬುದ್ಧಿಮತ್ತೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದನ್ನು ಕಥೆಯ ಹಂದರವಾಗಿಸಿಕೊಂಡು ಈ ಚಿತ್ರ ನಿರ್ಮಾಣವಾಗಿದೆ. ಶೈವಂ ಫಿಲಂಸ್ ಬ್ಯಾನರ್ ಅಡಿಯಲ್ಲಿ ಕಿರಣ್ ಎಸ್. ನಿರ್ಮಿಸಿರುವ ಈ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ಜೊತೆಗೆ ಛಾಯಾಗ್ರಾಹಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡ ಭಾಗವಹಿಸಿ ತಮ್ಮ ಅನುಭವ ಹಂಚಿಕೊಂಡರು. ನಿರ್ದೇಶಕ ಕಿರಣ್ ಮಾತನಾಡಿ, “ಗರುಡ” ಒಂದು ಆಕ್ಷನ್, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ ಎಂದರು. ಮೊದಲಿಗೆ ಪೈಲಟ್ ಪ್ರಾಜೆಕ್ಟ್ ಆಗಿ ಆರಂಭವಾದ ಈ ಸಿನಿಮಾ ನಂತರ “ಗರುಡ” ರೂಪ ಪಡೆದುಕೊಂಡಿತೆಂದು ತಿಳಿಸಿದರು. ನಾಲ್ಕು ವಿಭಿನ್ನ ಕಥೆಗಳು ಒಂದೇ ಹಂತದಲ್ಲಿ ಒಂದಾಗುವ ನಾನ್-ಲೀನಿಯರ್ ಶೈಲಿಯಲ್ಲಿ ಸಿನಿಮಾ ಸಾಗುತ್ತದೆ. ಚಿತ್ರದಲ್ಲಿ ಸುಮಾರು 30 ರಿಂದ 40 ಶೇಕಡಾ ಭಾಗ ಎಐ ತಂತ್ರಜ್ಞಾನಕ್ಕೆ ಸಂಬಂಧಿಸಿದರೆ, ಉಳಿದ ಭಾಗ ಡ್ರಾಮಾ ಅಂಶಗಳನ್ನು ಒಳಗೊಂಡಿದೆ ಎಂದು ಹೇಳಿದರು.
ನಾಯಕ ರೀತ್ವಾನ್ ಶ್ರೀನಿವಾಸ್ ಮಾತನಾಡಿ, ಈ ಹಿಂದೆ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾಗಿ ತಿಳಿಸಿ, ಚಿತ್ರದಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರಮುಖ ಪಾತ್ರ ನಿರ್ವಹಿಸಿರುವುದಾಗಿ ಹೇಳಿದರು. ಮತ್ತೊಬ್ಬ ನಟ ಸೌರವ್ ಪ್ರಶಾಂತ್, ಇದು ಎಲ್ಲರಿಗೂ ಕನೆಕ್ಟ್ ಆಗುವ ಕಥೆಯಾಗಿದ್ದು, ತಮ್ಮ ಪಾತ್ರ ವಿಲನ್ ಮತ್ತು ಹೀರೋ ಶೇಡ್ ಹೊಂದಿದೆ ಎಂದರು. ನಾಯಕಿ ದಿವ್ಯಾಚಂದ್ರ, ಅಪೂರ್ವ ಎಂಬ ಮುಖ್ಯಪಾತ್ರದಲ್ಲಿ ಆರಂಭದಿಂದ ಅಂತ್ಯದವರೆಗೆ ಕಾಣಿಸಿಕೊಳ್ಳುತ್ತಿರುವುದಾಗಿ ತಿಳಿಸಿದರು.
ಚಿತ್ರದಲ್ಲಿ ವಿವೇಕ್, ಅಭಿಮಹೇಶ್, ಅಭಿಷೇಕ್, ವಿನಯ್ ಪ್ರಭಾಕರ್, ವಿಲ್ ಫ್ರೆಡ್, ಸೌಭಾಗ್ಯ ಹಂದ್ರಾಳ್, ದಿಲೀಪ್ ಕುಮಾರ್ ಹಾಗೂ ಬಾಹುಬಲಿ ಮಂಜು ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಸಂತೋಷ್ ಜೋಶ್ವಾ ಸಂಗೀತ ಸಂಯೋಜನೆ ಮಾಡಿರುವ “ಗರುಡ” ಸಿನಿಮಾ ಬೆಂಗಳೂರಿನ ಸುತ್ತಮುತ್ತ 45 ದಿನಗಳ ಕಾಲ ಚಿತ್ರೀಕರಿಸಲಾಗಿದ್ದು, ಜೂನ್ ತಿಂಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ.