Cinema News

ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯತಿಥಿ: ಅದ್ಭುತ ನಟನನ್ನು ನೆನಪು ಮಾಡಿಕೊಂಡ ಸ್ನೇಹಿತರು

Published

on

ಅದ್ಭುತ ಕಲಾವಿದ, ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ರನ್ನ ಕಳೆದುಕೊಂಡ ಸ್ಯಾಂಡಲ್ ವುಡ್ ಇಂದಿಗೂ ರೋದಿಸುತ್ತಿದೆ.
ಸಂಚಾರಿ ವಿಜಯ್ ನಮ್ಮೊಂದಿಗೆ ಇಲ್ಲ ಎನ್ನುವುದನ್ನು ಅಷ್ಟು ಸುಲಭವಾಗಿ ಒಪ್ಪಲು ಮನಸ್ಸು ರೆಡಿ ಇಲ್ಲ. ಆದರೂ ಅವರು ನಮ್ಮೊಂದಿಗೆ ಇಲ್ಲದೆ ಒಂದು ವರ್ಷ ಕಳಿತು ಎನ್ನುವುದು ಕಹಿ ಸತ್ಯ.
ನಟ ಸಂಚಾರಿ ವಿಜಯ್ ನಿಧನವಾಗಿ ಇಂದಿಗೆ (ಜೂನ್ 15) ಒಂದು ವರ್ಷ ಕಳೆದಿದೆ. ಜೂನ್ 12ರಂದು ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯೊಂಡಿದ್ದ ಸಂಚಾರಿ ವಿಜಯ್, ಮೂರು ದಿನಗಳ ಕಾಲ ಸಾವು- ಬದುಕಿನ ನಡುವೆ ಹೋರಾಟ ನಡೆಸಿದರು. ಅಪಘಾತದಲ್ಲಿ ಅಪಘಾತದಲ್ಲಿ ತಲೆಗೆ ಬಲವಾದ ಪೆಟ್ಟು ಬಿದ್ದು ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಅಂತಿಮವಾಗಿ ಜೂನ್ 15ರ ಬೆಳಗಿನ ಜಾವ ಸಂಚಾರಿ ವಿಜಯ್ ಇಹಲೋಕ ತ್ಯಜಿಸಿದರು. ಇಂಥ ಅಪರೂಪದ ಕಲಾವಿದನನ್ನು ಕನ್ನಡ ಚಿತ್ರರಂಗ ಕಳೆದುಕೊಂಡು ಇಂದಿಗೆ 1 ವರ್ಷವಾಯಿತು.
ಸಂಚಾರಿ ವಿಜಯ್ ಸಾಕಷ್ಟು ಸ್ನೇಹಿತರನ್ನು ಹೊಂದಿದ್ದರು. ಎಂದಿಗೂ ಯಾರ ಜೊತೆಯೂ ತಾನೊಬ್ಬ ಸೆಲೆಬ್ರಿಟಿ ಎಂಬ ಅಹಂಕಾರದಲ್ಲಿ ವಿಜಯ್ ನಡೆದುಕೊಂಡಿರಲಿಲ್ಲ. ಕುಟುಂಬದ ಜೊತೆಗೆ ಇದ್ದಷ್ಟೇ ಆತ್ಮೀಯವಾದ ಒಡನಾಟವನ್ನು ತಮ್ಮ ಸ್ನೇಹಿತರೊಂದಿಗೂ ವಿಜಯ್ ಇರಿಸಿಕೊಂಡಿದ್ದರು. ವಿಜಯ್ ನಮ್ಮೊಂದಿಗೆ ಇಲ್ಲವಾಗಿ ಒಂದು ವರ್ಷ ಕಳೆದರೂ, ಇಂದಿಗೂ ವಿಜಯ್ ನೆನಪು ಅವರ ಆಪ್ತರನ್ನು ಕಾಡುತ್ತಿದೆ. ವಿಜಯ್ ಜೊತೆಗಿನ ಹಳೆಯ ಫೋಟೋಗಳನ್ನು ಹಂಚಿಕೊಂಡು, ವಿಜಯ್ರನ್ನು ನೆನಪಿಸಿಕೊಂಡಿದ್ದಾರೆ.
ವಿಜಯ್ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಪಂಚನಹಳ್ಳಿ ಎಂಬ ಪುಟ್ಟ ಗ್ರಾಮ. ಅದೇ ಗ್ರಾಮದಲ್ಲಿ ವಿಜಯ್ ಅವರ ಅಂತ್ಯಕ್ರಿಯೆ ಮಾಡಲಾಗಿತ್ತು. ವಿಜಯ್ ಅವರ ಸಮಾಧಿ ಸ್ಥಳದಲ್ಲಿ ಅವರ ಪುತ್ಥಳಿಯನ್ನು ಸಹ ನಿರ್ಮಾಣ ಮಾಡಲಾಗಿದೆ. ಈಚೆಗೆ ಪುಣ್ಯಸ್ಮರಣೆ ಮತ್ತು ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಸಂಚಾರಿ ವಿಜಯ್ ಅವರ ಕುಟುಂಬಸ್ಥರು ನೆರವೇರಿಸಿದ್ದರು. ಇಂದು ವಿಜಯ್ ಅವರ ಮೊದಲ ವರ್ಷದ ಪುಣ್ಯತಿಥಿ ಅಂಗವಾಗಿ ಅವರ ಅನೇಕ, ಆಪ್ತರು, ಸ್ನೇಹಿತರು ಪಂಚನಹಳ್ಳಿಗೆ ಭೇಟಿ ನೀಡಲಿದ್ದಾರೆ.
ನಟ ಸಂಚಾರಿ ವಿಜಯ್ ರಂಗಭೂಮಿ ಹಿನ್ನೆಲೆಯಿಂದ ಬಂದವರು. ‘ನಾನು ಅವನಲ್ಲ ಅವಳು’ ಚಿತ್ರದ ಮೂಲಕ ಹೆಚ್ಚು ಖ್ಯಾತಿ ಪಡೆದರು. ಸಂಚಾರಿ ವಿಜಯ್ ಎಂತಹ ಅದ್ಭುತ ನಟ ಎನ್ನುವುದನ್ನು ಈ ಚಿತ್ರ ತೋರಿಸಿಕೊಟ್ಟಿತ್ತು. ಸಂಚಾರಿ ವಿಜಯ್ ಅಭಿನಯಕ್ಕೆ ದೊಡ್ಡ ಅಭಿಮಾನಿ ಬಳಗವೇ ಇತ್ತು.
ಸಂಚಾರಿ ವಿಜಯ್ ಮೊದಲಿನಿಂದಲೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡವರು. ಕಷ್ಟದಲ್ಲಿ ಇರುವವರಿಗೆ ವಿಜಯ್ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ಲಾಕ್ಡೌನ್ ಸಂದರ್ಭದಲ್ಲೂ ಅನೇಕರಿಗೆ ಸಹಾಯ ಮಾಡಿದ್ದರು. ಸಿನಿಮಾಗಳ ಜೊತೆಗೆ ಸಾಮಾಜಿಕ ಸೇವೆಯಿಂದಲೂ ವಿಜಯ್ ಹೆಸರು ಮಾಡಿದ್ದಾರೆ.

Spread the love
Click to comment

Copyright © 2019 PopcornKannada.com