Cinema News
ಅಪ್ಪ-ಮಗನ ಬಾಂಧವ್ಯದ ಕಥೆ ‘ಫಾದರ್’; ಟೀಸರ್ ಬಳಿಕ ಚಿತ್ರದ ಮೇಲಿನ ನಿರೀಕ್ಷೆ ಡಬಲ್!
‘ತಾಜ್ ಮಹಲ್’, ‘ಚಾರ್ ಮಿನಾರ್’, ‘ಮೈಲಾರಿ’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಿರುವ ಆರ್. ಚಂದ್ರು, ‘ಕಬ್ಜ’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲೂ ಜನಪ್ರಿಯತೆ ಗಳಿಸಿದ್ದಾರೆ. ಇದೀಗ ತಮ್ಮದೇ ಆರ್‌ಸಿ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ಆರಂಭಿಸಿರುವ ಅವರು, ಅದರ ಮೊದಲ ಚಿತ್ರವಾಗಿ ‘ಫಾದರ್’ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣ ಮತ್ತು ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಆರಂಭದಿಂದಲೇ ಸಿನಿಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
‘ಲವ್ ಮಾಕ್ಟೇಲ್’ ಸರಣಿ ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಡಾರ್ಲಿಂಗ್ ಕೃಷ್ಣ ಹಾಗೂ ತಮ್ಮ ವಿಭಿನ್ನ ಅಭಿನಯದ ಮೂಲಕ ಗುರುತಿಸಿಕೊಂಡಿರುವ ಪ್ರಕಾಶ್ ರಾಜ್, ಈ ಚಿತ್ರದಲ್ಲಿ ಅಪ್ಪ-ಮಗನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ತಂದೆ ಮತ್ತು ಮಗನ ನಡುವಿನ ಪ್ರೀತಿ, ಭಾವನೆ ಹಾಗೂ ಸಂಬಂಧದ ಆಳವನ್ನು ಕಥೆಯ ಪ್ರಮುಖ ಅಂಶವನ್ನಾಗಿ ಮಾಡಲಾಗಿದೆ. ರಾಜಮೋಹನ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಸೇರಿದಂತೆ ಎಲ್ಲಾ ಕೆಲಸಗಳು ಪೂರ್ಣಗೊಂಡಿದ್ದು, ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.
ಬಹು ನಿರೀಕ್ಷಿತ ‘ಫಾದರ್’ ಚಿತ್ರದ ಟೀಸರ್ ಇದೀಗ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಚಿತ್ರದ ಬಗ್ಗೆ ಚರ್ಚೆ ಹೆಚ್ಚಾಗಿದೆ. ಟೀಸರ್‌ನಲ್ಲಿರುವ ಭಾವನಾತ್ಮಕ ಅಂಶಗಳು, ಕಥೆಯ ಸುಳಿವು ಹಾಗೂ ಡಾರ್ಲಿಂಗ್ ಕೃಷ್ಣ-ಪ್ರಕಾಶ್ ರಾಜ್ ಅವರ ಅಭಿನಯ ಗಮನ ಸೆಳೆದಿದೆ. ಟೀಸರ್‌ಗೆ ದೊರೆಯುತ್ತಿರುವ ಮೆಚ್ಚುಗೆಯಿಂದ ಚಿತ್ರತಂಡವೂ ಸಂತಸಗೊಂಡಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ಆರ್. ಚಂದ್ರು ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ಫಾದರ್’ ಈಗಾಗಲೇ ಸಾಕಷ್ಟು ಗಮನ ಸೆಳೆದಿದ್ದು, ಟೀಸರ್ ಬಿಡುಗಡೆಯೊಂದಿಗೆ ಚಿತ್ರದ ಹೈಪ್ ಮತ್ತಷ್ಟು ಹೆಚ್ಚಿದೆ. ಹೆಸರಾಂತ ‘ಮ್ಯಾಕೀಸ್’ ಸಂಸ್ಥೆ ಚಿತ್ರದ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿರುವುದು ವಿಶೇಷ. ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಹಾಡುಗಳು ಮತ್ತು ಟ್ರೇಲರ್ ಹೇಗಿರಲಿವೆ ಎಂಬ ಕುತೂಹಲವೂ ಪ್ರೇಕ್ಷಕರಲ್ಲಿದೆ. ಒಟ್ಟಿನಲ್ಲಿ ‘ಫಾದರ್’ ಕೇವಲ ಮನರಂಜನೆಯ ಸಿನಿಮಾವಾಗದೆ, ಅಪ್ಪ-ಮಗನ ಸಂಬಂಧದ ಭಾವನಾತ್ಮಕ ಪಯಣವನ್ನು ಕಟ್ಟಿಕೊಡುವ ಚಿತ್ರವಾಗುವ ನಿರೀಕ್ಷೆ ಮೂಡಿಸಿದೆ.