Cinema News

ಆರ್‌ಸಿ ಸ್ಟುಡಿಯೋಸ್‌ನ ಮೊದಲ ಚಿತ್ರ ‘ಫಾದರ್’ ಡಿಸೆಂಬರ್ 4ಕ್ಕೆ ಗ್ರ್ಯಾಂಡ್ ರಿಲೀಸ್

Published

on

ಡಾರ್ಲಿಂಗ್ ಕೃಷ್ಣ ಹಾಗೂ ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಬಹು ನಿರೀಕ್ಷಿತ ‘ಫಾದರ್’ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಆರ್‌ಸಿ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ಪ್ರಕಟಿಸಿರುವಂತೆ, ಅಪ್ಪ–ಮಗನ ಬಾಂಧವ್ಯವನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಸಿನಿಮಾ ಡಿಸೆಂಬರ್ 4ರಂದು ಅದ್ದೂರಿಯಾಗಿ ರಾಜ್ಯಾದ್ಯಂತ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಹಾಗೂ ಟೀಸರ್ ಪ್ರೇಕ್ಷಕರ ಗಮನ ಸೆಳೆದಿದ್ದು, ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

 

ಖ್ಯಾತ ನಿರ್ಮಾಪಕ–ನಿರ್ದೇಶಕ ಆರ್. ಚಂದ್ರು ಅವರ ನೇತೃತ್ವದ ಆರ್‌ಸಿ ಸ್ಟುಡಿಯೋಸ್ ಲಾಂಛನದಲ್ಲಿ ಯಮುನ ಚಂದ್ರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇತ್ತೀಚಿನ ಯಶಸ್ವಿ ಚಿತ್ರಗಳ ಮೂಲಕ ಗಮನ ಸೆಳೆದಿರುವ ಡಾರ್ಲಿಂಗ್ ಕೃಷ್ಣ ಹಾಗೂ ತಮ್ಮ ವಿಶಿಷ್ಟ ಅಭಿನಯದ ಮೂಲಕ ಜನಪ್ರಿಯರಾಗಿರುವ ಪ್ರಕಾಶ್ ರಾಜ್ ಇಲ್ಲಿ ತಂದೆ–ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ‘ಕಬ್ಜ’ ಚಿತ್ರದ ಮೂಲಕ ನಿರ್ಮಾಣ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ಆರ್. ಚಂದ್ರು, ತಮ್ಮದೇ ನಿರ್ಮಾಣ ಸಂಸ್ಥೆಯ ಮೊದಲ ಚಿತ್ರವಾಗಿ ‘ಫಾದರ್’ ಅನ್ನು ನಿರ್ಮಿಸಿದ್ದಾರೆ.

 

 

 

 

 

ಸದಭಿರುಚಿಯ ಸಿನಿಮಾಗಳಿಗೆ ಹೆಸರಾಗಿರುವ ಆರ್. ಚಂದ್ರು ಅವರ ಆರ್‌ಸಿ ಸ್ಟುಡಿಯೋಸ್‌ನ ಈ ಚೊಚ್ಚಲ ನಿರ್ಮಾಣಕ್ಕೆ ರಾಜಮೋಹನ್ ನಿರ್ದೇಶನ ಮಾಡಿದ್ದಾರೆ. ಕುಟುಂಬ, ಪ್ರೀತಿ, ಭಾವನೆಗಳು ಹಾಗೂ ಸಂಬಂಧಗಳ ಸುತ್ತ ಹೆಣೆದಿರುವ ಕಥೆ ‘ಫಾದರ್’ನಲ್ಲಿದೆ. ಹೆಸರಾಂತ ಮ್ಯಾಕೀಸ್ ಸಂಸ್ಥೆ ಚಿತ್ರದ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದ್ದು, ಶೀಘ್ರದಲ್ಲೇ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಪ್ರೇಕ್ಷಕರ ಮುಂದೆ ಬರಲಿವೆ.

 

ಅಪ್ಪ–ಮಗನ ನಡುವಿನ ಆತ್ಮೀಯ ಸಂಬಂಧದ ಹಲವು ಭಾವನಾತ್ಮಕ ಆಯಾಮಗಳನ್ನು ತೆರೆದಿಡುವ ‘ಫಾದರ್’, ಎಲ್ಲಾ ವರ್ಗದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ರೂಪುಗೊಂಡಿದೆ. ವಿಶೇಷವಾಗಿ ಕುಟುಂಬ ಸಮೇತ ಸಿನಿಮಾ ವೀಕ್ಷಿಸುವ ಪ್ರೇಕ್ಷಕರಿಗೆ ಸಂಬಂಧಗಳ ಮಹತ್ವವನ್ನು ಮನದಟ್ಟಾಗಿಸುವಂತಹ ಅನುಭವ ನೀಡುವ ನಿರೀಕ್ಷೆಯಿದೆ. ಹೀಗಾಗಿ ಡಾರ್ಲಿಂಗ್ ಕೃಷ್ಣ–ಪ್ರಕಾಶ್ ರಾಜ್ ಜೋಡಿಯ ‘ಫಾದರ್’ ಡಿಸೆಂಬರ್ 4ರಂದು ಚಿತ್ರಮಂದಿರಗಳಲ್ಲಿ ಯಾವ ರೀತಿಯ ಅನುಭವ ನೀಡಲಿದೆ ಎಂಬ ಕುತೂಹಲ ಈಗಾಗಲೇ ಮೂಡಿದೆ.

Spread the love

Copyright © 2019 PopcornKannada.com