Cinema News
ಆಟೋ ಚಾಲಕರಿಗೆ ವಿಶೇಷ ಉಡುಗೊರೆಯೊಂದಿಗೆ ಬರುತ್ತಿದೆ “ದೊಡ್ಮನ್ಸ”
ವೇದಿಕ್ ಕಾಸ್ಮೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ, ಶರತ್ ಕೃಷ್ಣ ನಿರ್ದೇಶಿಸಿ ನಟಿಸಿರುವ “ದೊಡ್ಮನ್ಸ” ಚಿತ್ರದ ಹೊಸ ಪ್ರಣಯ ಗೀತೆ ಬಿಡುಗಡೆಯಾಗಿದೆ. ಶರತ್ ಕೃಷ್ಣ, ರೇಷ್ಮಾ ಹಾಗೂ ಶಿಲ್ಪಾ ಮುಖ್ಯಪಾತ್ರಗಳಲ್ಲಿ ಅಭಿನಯಿಸಿರುವ ಈ ಹಾಡು ಪ್ರೇಮದ ಮಧುರತೆಯನ್ನು ಮನಮುಟ್ಟುವ ರೀತಿಯಲ್ಲಿ ಮೂಡಿಸಿದೆ. ಸಮುದ್ರ ತೀರದಂತಿರುವ ಸಾಲ್ಟ್ ಪ್ರದೇಶದಲ್ಲಿ, ನೀರಿನ ಸದ್ದಿನ ನಡುವೆ ಚಿತ್ರೀಕರಿಸಿದ ದೃಶ್ಯಗಳು ಹಾಡಿಗೆ ವಿಶೇಷ ಕಳೆ ತಂದಿವೆ. ವಿಶೇಷವಾಗಿ ಶರತ್ ಹಾಗೂ ರೇಷ್ಮಾ ಅವರ ಜೋಡಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಗೀತೆಯನ್ನು ಗುಜರಾತ್‌ನಲ್ಲಿ ಚಿತ್ರೀಕರಿಸಲಾಗಿದೆ.
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಶರತ್ ಕೃಷ್ಣ, “ದೊಡ್ಮನ್ಸ” ಎಂಬ ಶೀರ್ಷಿಕೆ ಸಿಕ್ಕಿದ್ದು ತುಂಬಾ ಸಂತೋಷ ತಂದಿದೆ ಎಂದರು. ವಿಷ್ಣುವರ್ಧನ್ ಸರ್ ಕಾಲದ ಈ ಟೈಟಲ್ ನಮಗೆ ಸಿಕ್ಕಿದ್ದು ಗೌರವದ ವಿಷಯ ಎಂದ ಅವರು, “ಹಣ ಇದ್ದವನೇ ದೊಡ್ಡವನು ಅಲ್ಲ, ದೊಡ್ಡ ಮನಸ್ಸು ಇರುವವನೇ ನಿಜವಾದ ದೊಡ್ಮನ್ಸ” ಎಂಬ ಸಂದೇಶವನ್ನು ಸಿನಿಮಾ ಹೊತ್ತೊಯ್ಯಲಿದೆ ಎಂದು ಹೇಳಿದರು. ಜೊತೆಗೆ ಆಟೋ ಚಾಲಕರಿಗಾಗಿ ಎಂಟು ಜಿಲ್ಲೆಗಳಲ್ಲಿ ವಿಶೇಷ ಪ್ರದರ್ಶನಗಳನ್ನು ಆಯೋಜಿಸಿರುವುದಾಗಿ ತಿಳಿಸಿದರು. ಇದಕ್ಕಾಗಿ ವಿಶೇಷ ಆಪ್ ಸಿದ್ಧಪಡಿಸಲಾಗಿದ್ದು, ಲಕ್ಕಿ ಡ್ರಾ ಮೂಲಕ ಒಬ್ಬ ಆಟೋ ಚಾಲಕನಿಗೆ ಆಟೋ ಉಡುಗೊರೆಯಾಗಿ ನೀಡಲಿದ್ದೇವೆ ಎಂದರು.
ನಟಿ ರೇಷ್ಮಾ ಮಾತನಾಡಿ, ಈ ಚಿತ್ರವನ್ನು ಅಪಾರ ನಂಬಿಕೆ ಹಾಗೂ ಪ್ರೀತಿಯಿಂದ ಮಾಡಿದ್ದೇವೆ ಎಂದರು. “ಸ್ನೇಹಾ” ಎಂಬ ಮಧ್ಯಮ ವರ್ಗದ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿರುವ ಅವರು, ಜೀವನದಲ್ಲಿ ಕನಸು ಸಾಕಾರಗೊಳಿಸಲು ಎದುರಾಗುವ ಸವಾಲುಗಳನ್ನು ದಾಟಿ ಗೆಲ್ಲುವ ಕಥೆಯೇ ಚಿತ್ರದ ಹೃದಯ ಎಂದು ಹೇಳಿದರು. ಆಟೋ ಚಾಲಕನನ್ನು ಪ್ರೀತಿಸುವ ಹುಡುಗಿಯ ಬದುಕಿನಲ್ಲಿ ನಡೆಯುವ ಘಟನೆಗಳು ಸಿನಿಮಾದ ಪ್ರಮುಖ ಅಂಶವಾಗಿವೆ ಎಂದು ತಿಳಿಸಿದರು.
ನಟಿ ಶಿಲ್ಪಾ ಶಿವಕುಮಾರ್ ಕೂಡ ಚಿತ್ರದ ಅನುಭವ ಹಂಚಿಕೊಂಡರು. ತಮ್ಮ ಪಾತ್ರ ಚಿಕ್ಕದಾದರೂ ಕಥೆಯಲ್ಲಿ ಮಹತ್ವ ಪಡೆದಿದೆ ಎಂದ ಅವರು, “ನನಗೆ ಹಾಡು ಇಲ್ಲವೆಂದು ಕೇಳಿದಾಗ ನಿರ್ದೇಶಕರು ಫೈಟ್ ಇದೆ ಎಂದರು. ನನ್ನಿಗಾಗಿ ಅವರು ಹೋರಾಡುತ್ತಾರೆ” ಎಂದು ಹಾಸ್ಯವಾಗಿ ಹೇಳಿದರು. ನಿರ್ಮಾಪಕ ವೇದಿಕ್ ವೀರ ಮಾತನಾಡಿ, ಉತ್ತಮ ಕಂಟೆಂಟ್ ಜನರಿಗೆ ತಲುಪಬೇಕು ಎಂಬ ಉದ್ದೇಶದಿಂದ ಸಿನಿಮಾ ಮಾಡಿದ್ದೇವೆ ಎಂದರು. ಚಿತ್ರದಲ್ಲಿ ಬಾಲ ರಾಜ್ವಾಡಿ, ಹುಲಿ ಕಾರ್ತಿಕ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.