Cinema News
‘ಕಾನ್ಧಾರಿ’ ಟ್ರೇಲರ್‌ಗೆ ದೊಡ್ಡಣ್ಣ ಮೆಚ್ಚುಗೆ; ಉತ್ತರ ಕನ್ನಡದ ಪ್ರಕೃತಿ–ಸಂಸ್ಕೃತಿಗೆ ಫಿದಾ
ಉತ್ತರ ಕನ್ನಡದ ಇತಿಹಾಸ, ಪ್ರಕೃತಿ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ವೈವಿಧ್ಯವನ್ನು ಮೂರು ವಿಭಿನ್ನ ಕಾಲಘಟ್ಟಗಳ ಮೂಲಕ ತೆರೆಗೆ ತರುತ್ತಿರುವ ‘ಕಾನ್ಧಾರಿ’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. 1801ರಿಂದ 2026ರವರೆಗಿನ ಅವಧಿಯನ್ನು ಒಳಗೊಂಡಿರುವ ಈ ಚಿತ್ರಕ್ಕೆ ‘ಕರ್ನಾಟಕದ ಕವಿತೆ’ ಎಂಬ ಅಡಿಬರಹವಿದ್ದು, ಹಿರಿಯ ನಟ ದೊಡ್ಡಣ್ಣ ಟ್ರೇಲರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಅಖ್ಯಾನ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಉತ್ತರ ಕನ್ನಡದವರೇ ಆದ ಸುಪ್ರೀತ್ ಹೆಗಡೆ ಸೋಮನಮನೆ ನಿರ್ಮಿಸಿರುವ ಈ ಚಿತ್ರವನ್ನು ವಿನಾಯಕ ಹೆಗಡೆ ಬೊಮ್ಮನಳ್ಳಿ ಪರಿಕಲ್ಪಿಸಿ, ನಿರ್ದೇಶಿಸಿದ್ದಾರೆ.
ಟ್ರೇಲರ್ ವೀಕ್ಷಿಸಿದ ಬಳಿಕ ಮಾತನಾಡಿದ ದೊಡ್ಡಣ್ಣ, ‘ಒಂದು ಮುತ್ತಿನ ಕಥೆ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಉತ್ತರ ಕನ್ನಡಕ್ಕೆ ತೆರಳಿದ್ದನ್ನು ಸ್ಮರಿಸಿಕೊಂಡರು. ಅಲ್ಲಿನ ಜನರ ಸರಳತೆ, ಸಂಸ್ಕೃತಿ ಮತ್ತು ಪ್ರಕೃತಿಯ ಸೊಬಗು ಅಂದು ತಮ್ಮನ್ನು ಆಕರ್ಷಿಸಿತ್ತು ಎಂದು ಹೇಳಿದರು. ಇದೀಗ ‘ಕಾನ್ಧಾರಿ’ಯ ದೃಶ್ಯಗಳನ್ನು ನೋಡಿದ ಬಳಿಕ ಮತ್ತೊಮ್ಮೆ ಉತ್ತರ ಕನ್ನಡಕ್ಕೆ ಭೇಟಿ ನೀಡುವ ಆಸೆ ಮೂಡಿದೆ ಎಂದ ಅವರು, ತಮ್ಮ ಸ್ವಂತ ಖರ್ಚಿನಲ್ಲೇ ಜಿಲ್ಲೆಗೆ ತೆರಳುವುದಾಗಿ ತಿಳಿಸಿದರು. ಚಿತ್ರದ ನಿರ್ದೇಶನದ ಜೊತೆಗೆ ಛಾಯಾಗ್ರಹಣದ ಗುಣಮಟ್ಟಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪ್ರಕೃತಿ ತಾಯಿಯಿದ್ದಂತೆ. ಅದನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಪರಿಸರ ಕಾಳಜಿಯ ಸಂದೇಶ ನೀಡಿದರು. ಪರಿಸರ ನಾಶವಾದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿ, ಚಿತ್ರಕ್ಕೆ ಮಾಧ್ಯಮಗಳು ವ್ಯಾಪಕ ಪ್ರಚಾರ ನೀಡುವಂತೆ ಮನವಿ ಮಾಡಿದರು.
ನಿರ್ದೇಶಕ ವಿನಾಯಕ ಹೆಗಡೆ ಬೊಮ್ಮನಳ್ಳಿ ಮಾತನಾಡಿ, ‘ಕಾನ್ಧಾರಿ’ಯನ್ನು ರೂಪಿಸಲು ಎರಡು ವರ್ಷಗಳ ಸುದೀರ್ಘ ಪರಿಶ್ರಮ ನಡೆಸಲಾಗಿದೆ ಎಂದರು. ಉತ್ತರ ಕನ್ನಡದ ಧಾರ್ಮಿಕ, ಆಧ್ಯಾತ್ಮಿಕ, ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಹಿನ್ನೆಲೆಯಲ್ಲಿರುವ ಹಲವು ಅಪರೂಪದ ಇತಿಹಾಸದ ಘಟನೆಗಳನ್ನು ಚಿತ್ರದಲ್ಲಿ ದಾಖಲಿಸಲಾಗಿದೆ. ಸುಮಾರು 1600 ವರ್ಷಗಳ ಹಿಂದೆ ವನವಾಸಿ ಕರ್ನಾಟಕದ ರಾಜಧಾನಿಯಾಗಿದ್ದ ಸಂಗತಿ, ಸಾಮ್ರಾಜ್ಯಗಳ ನಿರ್ಮಾಣ, ಬೆಳವಾಡಿ ಮಲ್ಲಮ್ಮ ಅವರ ಮಹಿಳಾ ಸೈನ್ಯದ ಸಂಘಟನೆ ಹಾಗೂ ಬ್ರಿಟಿಷರ ವಿರುದ್ಧ ಹೋರಾಡಿದ ಸದಾಶಿವರಾಯ ಸೇರಿದಂತೆ ಅನೇಕ ಐತಿಹಾಸಿಕ ವಿಚಾರಗಳು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿವೆ ಎಂದು ವಿವರಿಸಿದರು. ಭಟ್ಕಳದಿಂದ ವನವಾಸಿವರೆಗೆ ಚಿತ್ರೀಕರಣ ನಡೆಸಲಾಗಿದ್ದು, ಮೂರು ಕಾಲಘಟ್ಟಗಳ ಮೂಲಕ ಒಂದೇ ನೆಲದ ಅನೇಕ ಕಥೆಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಮುಂದಿನ ಪೀಳಿಗೆಗೆ ಇತಿಹಾಸದ ಅರಿವು ಮೂಡಿಸುವ ಉದ್ದೇಶದಿಂದ ಸಿನಿಮಾ ರೂಪಿಸಲಾಗಿದೆ ಎಂದರು.
ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರನ್ನು ಹೊರತುಪಡಿಸಿ ಬಹುತೇಕ ವಿಭಾಗಗಳಲ್ಲಿ ಚಿತ್ರರಂಗದ ಅನುಭವಿ ಹಿರಿಯ ತಂತ್ರಜ್ಞರು ಕಾರ್ಯನಿರ್ವಹಿಸಿರುವುದು ‘ಕಾನ್ಧಾರಿ’ಯ ಮತ್ತೊಂದು ವಿಶೇಷ. ಹರ್ಷವರ್ಧನ್ ರಾಜ್ ಸಂಗೀತ, ಸತೀಶ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಹಾಗೂ ಕವಿರಾಜ್ ಮತ್ತು ಸಂತೋಷ್ ಸಾಹಿತ್ಯದ ಜವಾಬ್ದಾರಿ ನಿರ್ವಹಿಸಿದ್ದಾರೆ. ಉತ್ತರ ಕನ್ನಡದ ಇತಿಹಾಸ ಮತ್ತು ನೆಲದ ವೈವಿಧ್ಯತೆಯನ್ನು ದಾಖಲಿಸುವ ಈ ಚಿತ್ರದಲ್ಲಿ ಎರಡು ಹಾಡುಗಳಿದ್ದು, ಹಿಲ್ಲಿವುಡ್ ಪಿಕ್ಚರ್ಸ್ ಮೂಲಕ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ತೆರೆಕಾಣಲಿದೆ.