Cinema News

ದೊಡ್ಮನೆಗೆ ದೊಡ್ಡವರಿಂದ ಕ್ಲಾಪ್

Published

on

ಘನತೆಯ ಶೀರ್ಷಿಕೆ ’ದೊಡ್ಮನೆ ಸೊಸೆ’ ಚಿತ್ರಕ್ಕೆ ಪದ್ಮಶ್ರೀ ರಾಷ್ಟ್ರ ಪ್ರಶಸ್ತಿ ವಿಜೇತರಾದ ಡಾ.ಗಿರೀಶ್ ಕಾಸರವಳ್ಳಿ ಕ್ಲಾಪ್ ಮಾಡಿದ್ದು ವಿಶೇಷವಾಗಿತ್ತು. ಶುಭ ಗುರವಾರದಂದು ಶ್ರೀ ವಿಶ್ವ ವಿದ್ಯಾಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಮುಹೂರ್ತ ಸಮಾರಂಭ ನಡೆಯಿತು.

ಸದಭಿರುಚಿಯ ನಿರ್ದೇಶಕ ಆಸ್ಕರ್ ಕೃಷ್ಣ ಕತೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹಿರಿಯ ನಿರ್ಮಾಪಕ ಡಾ.ಸುನಿಲ್‌ಕುಮಾರ್.ಆರ್.ಎಂ ಹಿರಿಯ ಪುತ್ರ ತೇಜ್‌ವಿನಯ್.ಎಸ್ ಅವರು ಮಾನ್ಯ ಸಿನಿ ಕ್ರಿಯೇಶನ್ಸ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ.

ನಂತರ ಮಾತನಾಡಿದ ಡಾ.ಗಿರೀಶ್‌ಕಾಸರವಳ್ಳಿ ಪ್ರಸ್ತುತ ಮಾರುಕಟ್ಟೆ ಉದ್ದೇಶದಿಂದಾಗಿ ಹಿಂಸೆ, ಕ್ರೌರ್ಯ ವಿಜೃಂಭಿಸುತ್ತಿರುವ ಕಾಲದಲ್ಲಿ ಸುಂದರವಾದ ಕುಟುಂಬ ಆಧಾರಿತ ಕಥೆ, ಅಷ್ಟೇ ಅಲ್ಲ ಮನುಷ್ಯ ಸಂಬಂಧಗಳು ಸಮಾಜದ ಇತಿಮಿತಿಗಳು ಯಾವ ರೀತಿ ಪುನರ್ ಅವಿಷ್ಕಾರಗೊಳ್ಳಬೇಕೆಂದು ಹೇಳುತ್ತಿದ್ದಾರೆ, ಇದು ಸಂತೋಷದ ವಿಷಯ. ಒಂದಷ್ಟು ಮಾಹಿತಿಗಳನ್ನು ಕೇಳಿದಾಗ, 70-80ರ ದಶಕದ ಪುಟ್ಟಣ್ಣ ಕಣಗಾಲ್, ದೊರೆ ಭಗವಾನ್, ಸಿದ್ದಲಿಂಗಯ್ಯ ಹಾಗೆಯೇ ಡಾ.ರಾಜ್‌ಕುಮಾರ್ ಸಿನಿಮಾಗಳು ಯಾವ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದ್ದರು, ಅದನ್ನು ಇದರಲ್ಲಿ ಪ್ರತಿಷ್ಟಾಪಿಸುತ್ತಿದ್ದಾರೆ. ಅದಕ್ಕಾಗಿ ವಂದಿಸುತ್ತೇನೆ. ತುಂಬ ಜನಕ್ಕೆ ಹೊಸತನ್ನು ತೋರಿಸಬೇಕಾಗಿದೆ. ಚರ್ವಿತ ಚರ್ವಣ ಬಿಟ್ಟು ನಾವು ಮತ್ತೆ ಹಿನ್ನೋಟದಲ್ಲಿ ನಮ್ಮ ಇರುವಿಕೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಿಸುತ್ತಿರುವುದಕ್ಕೆ ನಿರ್ದೇಶಕರನ್ನು ಅಭಿನಂದಿಸುತ್ತೇನೆ. ಸಂಪ್ರದಾಯ ಕಟ್ಟಳೆಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಶುಭವಾಗಲಿ ಎಂದರು.

ನಿರ್ದೇಶಕರು ಮಾತನಾಡಿ ನಾನು ಡಾ.ಗಿರೀಶ್‌ಕಾಸರವಳ್ಳಿ ಚಿತ್ರಗಳನ್ನು ನೋಡಿ ಬೆಳೆದವನು. ಇಂದು ಅವರು ಆಗಮಿಸಿದ್ದು ನಮಗೆ ಹೆಚ್ಚಿನ ಶಕ್ತಿ ಬಂದಿದೆ. ಇದು ನನ್ನ ನಿರ್ದೇಶನದ ಏಳನೆ ಸಿನಿಮಾ. ನಮ್ಮ ಚಿತ್ರರಂಗಕ್ಕೆ ದೊಡ್ಮನೆ ಅಂದರೆ ಅಣ್ಣಾವ್ರ ಕುಟುಂಬ. ನಾನು ಅಣ್ಣಾವ್ರರ ಕಟ್ಟಾಅಭಿಮಾನಿ. ಆದರೆ ಆ ಮನೆಗೂ ಚಿತ್ರದ ಕಥೆಗೂ ಯಾವುದೇ ಸಂಬಂದ ಇರುವುದಿಲ್ಲ. ಎಲ್ಲಾ ಊರಿನಲ್ಲಿ ದೊಡ್ಮನೆ ಇರುತ್ತದೆ. ಒಂದು ಊರಿನಲ್ಲಿ ನಡೆಯುವ ಕಾಲ್ಪನಿಕ ಕಥೆ. ಪ್ರತಿ ಹೆಣ್ಣು ಮಗಳು ಒಂದು ಮನೆಗೆ ಸೊಸೆಯಾಗಿ ಪ್ರವೇಶ ನೀಡುತ್ತಾಳೆ. ಆ ಮನೆಗೆ ಅತಿಥಿಯಾಗಿ ಪ್ರವೇಶಿಸಿ, ಮುಂದೆ ಒಡತಿ ಆಗುತ್ತಾಳೆ. ಸೊಸೆಯ ಅನುದಿನದ ವ್ಯಕ್ತಿತ್ವ ಮತ್ತು ನಡತೆಯು ಇಡೀ ಕುಟುಂಬದ ಗೌರವ ಹಾಗೂ ಘನತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆಕೆ ಕಟ್ಟಲೂ ಬಲ್ಲಳು, ಕೆಡವಲೂ ಬಲ್ಲಳು. ಅವಳ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನಿಭಾಯಿಸುವ ಹೊತ್ತಿನಲ್ಲಿ ಏನಾದರೂ ಘರ್ಷಣೆಗಳು ಬಂದಾಗ ಹೇಗೆ ಸರಿದೂಗಿಸುತ್ತಾಳೆ? ಮತ್ತು ಆ ಮನೆಗೆ ಇರುವ ಘನತೆಯ ವಿಷಯದಲ್ಲಿ ಸೊಸೆಯ ಪಾತ್ರವೇನು? ಎಂಬ ಅಂಶಗಳನ್ನು ಬಳಸಿಕೊಂಡು ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ನಿಮ್ಮಗಳ ಹಾರೈಕೆ ಬೇಕೆಂದು ಕೋರಿದರು.

’ದೊಡ್ಮನೆ ಸೊಸೆ’ಯಾಗಿ ರಾಗಶ್ರೀ ನಾಯಕಿ. ಮಾವನಾಗಿ ಸುಂದರರಾಜ್, ಉಳಿದಂತೆ ಸಚ್ಚಿನ್ ಪುರೋಹಿತ್, ವಂಶಿ, ಶಂಕರಭಟ್, ಲಯಕೋಕಿಲ, ಡಾ.ಮುರಳಿ ಕೊಟ್ಟೂರು, ಮಮತಾಶ್ರೀ ಮುಂತಾದವರು ನಟಿಸುತ್ತಿದ್ದಾರೆ. ನಿತೀಶ್.ವಿ ಸಂಗೀತ, ಮೈಸೂರು ಸೋಮು ಛಾಯಾಗ್ರಹಣ, ಕೌಶಿಕ್ ಕಿರಣ್ ಸಂಕಲನ, ಚಿತ್ರಕಥೆ-ಸಂಭಾಷಣೆಗೆ ವಿನಯ್‌ಕುಮಾರ್ ಪೆನ್ನು ಕೆಲಸ ಮಾಡುತ್ತಿದೆ. ಫೆಬ್ರವರಿ ಮೂರನೇ ವಾರದಿಂದ ಬೆಂಗಳೂರು ಹಾಗೂ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ಆರಂಭಿಸಿ, ಒಂದೇ ಹಂತದಲ್ಲಿ ಮುಗಿಸಿ, ಮೇ ತಿಂಗಳಲ್ಲ್ಲಿ ಸಿನಿಮಾವನ್ನು ಜನರಿಗೆ ತೋರಿಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

Spread the love
Click to comment

Copyright © 2019 PopcornKannada.com