Cinema News

ದೀಕ್ಷಿತ್ ಶೆಟ್ಟಿ–ಸಂಜನಾ ಆನಂದ್ ಕ್ಯೂಟ್ ಕೆಮಿಸ್ಟ್ರಿ; ‘ಬೇಲ್’ನ ಮೊದಲ ರೊಮ್ಯಾಂಟಿಕ್ ಸಾಂಗ್ ಔಟ್!

Published

on

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಬೇಲ್’ ಸಿನಿಮಾದ ಮೊದಲ ರೊಮ್ಯಾಂಟಿಕ್ ಹಾಡು ‘ಚೆಲುವೆ ಕೇಳೇ ಚೆಲುವೆ’ ಬಿಡುಗಡೆಯಾಗಿದೆ. ಇಂಪಾದ ಮೆಲೋಡಿಯ ಮೂಲಕ ಸಂಗೀತಪ್ರಿಯರ ಗಮನ ಸೆಳೆಯುತ್ತಿರುವ ಈ ಹಾಡಿನಲ್ಲಿ ದೀಕ್ಷಿತ್ ಶೆಟ್ಟಿ ಹಾಗೂ ಸಂಜನಾ ಆನಂದ್ ಅವರ ಕ್ಯೂಟ್ ಕೆಮಿಸ್ಟ್ರಿ ಹೈಲೈಟ್ ಆಗಿದೆ. ನಿರ್ದೇಶಕ ಪವನ್ ಒಡೆಯರ್ ಸಾಹಿತ್ಯ ರಚಿಸಿರುವ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಕೆ.ಎಸ್. ಹರಿಶಂಕರ್ ಹಾಗೂ ಹರ್ಷಿಕಾ ದೇವನಾಥ್ ಧ್ವನಿ ನೀಡಿದ್ದಾರೆ. ಬಿಡುಗಡೆಯಾದ ಬೆನ್ನಲ್ಲೇ ಹಾಡಿಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

 

ಪವನ್ ಒಡೆಯರ್ ನಿರ್ದೇಶನದ ‘ಬೇಲ್’ನಲ್ಲಿ ಶಿವರಾಜ್‌ಕುಮಾರ್ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಶಿವಣ್ಣನ ಪವರ್‌ಫುಲ್ ಲುಕ್, ಮಾಸ್ ಮ್ಯಾನರಿಸಂ ಹಾಗೂ ಖಡಕ್ ಡೈಲಾಗ್‌ಗಳಿಂದ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಆಕ್ಷನ್ ಮತ್ತು ಕಮರ್ಷಿಯಲ್ ಅಂಶಗಳಿಂದ ಕೂಡಿರುವ ಈ ಚಿತ್ರಕ್ಕೆ ಪವನ್ ಒಡೆಯರ್ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

 

 

 

 

 

‘ಟಾಕ್ಸಿಕ್’ ಹಾಗೂ ‘ಜನ ನಾಯಗನ್’ ಚಿತ್ರಗಳ ನಿರ್ಮಾಣದ ಮೂಲಕ ಗಮನ ಸೆಳೆದಿರುವ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ್ ‘ಬೇಲ್’ ಚಿತ್ರವನ್ನು ಅದ್ಧೂರಿ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ. ಶಿವರಾಜ್‌ಕುಮಾರ್ ಜೊತೆಗೆ ಮಲಯಾಳಂನ ಜನಪ್ರಿಯ ನಟ ಜಯರಾಮ್, ಸಾಯಿಕುಮಾರ್, ಲೂಸ್ ಮಾದ ಯೋಗಿ, ದೀಕ್ಷಿತ್ ಶೆಟ್ಟಿ, ಸಂಜನಾ ಆನಂದ್ ಹಾಗೂ ಕಿರಣ್ ಶ್ರೀನಿವಾಸ್ ಸೇರಿದಂತೆ ಪ್ರತಿಭಾವಂತ ಕಲಾವಿದರ ದೊಡ್ಡ ಬಳಗ ಚಿತ್ರದಲ್ಲಿದೆ.

 

 

 

 

 

ಮಾಸ್ ಆಕ್ಷನ್ ಜೊತೆಗೆ ರೊಮ್ಯಾಂಟಿಕ್ ಅಂಶಗಳನ್ನೂ ಒಳಗೊಂಡಿರುವ ‘ಬೇಲ್’ ಇದೀಗ ಬಿಡುಗಡೆಯ ಹಂತ ತಲುಪಿದೆ. ಗಾಂಧಿ ಜಯಂತಿಯ ವಿಶೇಷ ಸಂದರ್ಭದಲ್ಲಿ ಅಕ್ಟೋಬರ್ 2ರಂದು ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ. ‘ಚೆಲುವೆ ಕೇಳೇ ಚೆಲುವೆ’ ಹಾಡಿನ ಮೂಲಕ ಚಿತ್ರದ ರೊಮ್ಯಾಂಟಿಕ್ ಭಾಗವನ್ನು ಪರಿಚಯಿಸಿರುವ ಚಿತ್ರತಂಡ, ಮುಂದಿನ ದಿನಗಳಲ್ಲಿ ಮತ್ತಷ್ಟು ಅಪ್‌ಡೇಟ್‌ಗಳೊಂದಿಗೆ ಪ್ರೇಕ್ಷಕರ ನಿರೀಕ್ಷೆಯನ್ನು ಹೆಚ್ಚಿಸಲು ಸಜ್ಜಾಗಿದೆ.

Spread the love

Copyright © 2019 PopcornKannada.com