Cinema News

ಜೂನ್ 20 ರಂದು ತೆರೆಗೆ ಬರಲಿದೆ ಧರ್ಮ ಕೀರ್ತಿರಾಜ್ ಅಭಿನಯದ “ಬುಲೆಟ್”.

Published

on

ತೆಲುಗು , ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಅಭಿನಯಿಸಿರುವ ಸತ್ಯಜಿತ್ ಶಬ್ಬೀರ್ ನಿರ್ಮಿಸಿ, ನಿರ್ದೇಶಿಸಿರುವ ಹಾಗೂ ಧರ್ಮ ಕೀರ್ತಿರಾಜ್ ನಾಯಕನಾಗಿ ನಟಿಸಿರುವ “ಬುಲೆಟ್” ಚಿತ್ರದ ಟೀಸರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಬಹುಜನ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ಆರ್ ಎಂ ಎನ್ ರಮೇಶ್ ಹಾಗೂ ನಟಿ ನಿಖಿತ ಸ್ವಾಮಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಟೀಸರ್ ಹಾಗೂ ಹಾಡುಗಳನ್ನು ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಾನು ಭಾರತಿರಾಜ ಅವರ ನಿರ್ದೇಶನದ “ಪದಿನಾರು ವಯದಿನಿಲೆ” ಚಿತ್ರದಲ್ಲಿ ಅಭಿನಯಿಸುವ ಮೂಲಕ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಈ ಚಿತ್ರದ ಸಂಗೀತ ನಿರ್ದೇಶಕರಾದ ಇಳಯರಾಜ ಅವರು ಶಬ್ಬೀರ್ ಅಂತ ಇದ್ದ ನನ್ನ ಹೆಸರಿನ ಮುಂದೆ ಸತ್ಯಜಿತ್‌ ಎಂದು ಸೇರಿಸಿದರು. ಅಂದಿನಿಂದ ನನ್ನ ಹೆಸರು ಸತ್ಯಜಿತ್ ಶಬ್ಬೀರ್. ಈವರೆಗೂ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳ 75 ಚಿತ್ರಗಳಲ್ಲಿ ನಟಿಸಿದ್ದೇನೆ. ಮೂಲತಃ ಕರ್ನಾಟಕದವನಾಗಿರುವ ನಾನು ಆನಂತರ ಚೆನ್ನೈ ಹಾಗೂ ಮುಂಬೈನಲ್ಲಿ ನೆಲೆಸಿದ್ದೆ.

ಮೊದಲ ಚಿತ್ರವನ್ನು ಕನ್ನಡದಲ್ಲೇ ನಿರ್ಮಿಸಿ, ನಿರ್ದೇಶಿಸಬೇಕೆಂಬ ಆಸೆಯಿತ್ತು. ಅದು ಈಗ ಈಡೇರಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ “ಬುಲೆಟ್” ಚಿತ್ರದ ನಾಯಕನಾಗಿ ಧರ್ಮ ಕೀರ್ತಿರಾಜ್ ಅಭಿನಯಿಸಿದ್ದಾರೆ. ಶ್ರೀಯಾ ಶುಕ್ಲ ನಾಯಕಿ. ಹಿರಿಯ ನಟಿ ಭವ್ಯ, ಶೋಭ್ ರಾಜ್, ಶಿವ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣ, ರಾಜ್ ಭಾಸ್ಕರ್ ಸಂಗೀತ ನಿರ್ದೇಶನ ಹಾಗೂ ಗುರುಪ್ರಸಾದ್ ಸಂಕಲನ ಈ ಚಿತ್ರಕ್ಕಿದೆ. ಚಿತ್ರತಂಡದ ಸಹಕಾರದಿಂದ ಒಂದೊಳ್ಳೆ ಚಿತ್ರ ಮೂಡಿಬಂದಿದೆ. ಇದೇ ಜೂನ್ 20 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಜಯದೇವ ಫಿಲಂಸ್ ಮೂಲಕ ಮರಿಸ್ವಾಮಿ ಅವರು ವಿತರಣೆ ಮಾಡಲಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಹಾಗೂ ನಿರ್ದೇಶಕ ಸತ್ಯಜಿತ್‌ ಶಬ್ಬೀರ್.

ಸತ್ಯಜಿತ್‌ ಶಬ್ಬೀರ್ ಅವರ ನಿರ್ದೇಶನದಲ್ಲಿ ಉತ್ತಮ ಚಿತ್ರ ನಿರ್ಮಾಣವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಈ ವರ್ಷದಲ್ಲಿ ನಾನು ನಾಯಕನಾಗಿ ನಟಿಸಿ ಬಿಡುಗಡೆಯಾಗುತ್ತಿರುವ ಮೂರನೇ ಚಿತ್ರ ಇದು. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಾಯಕ ಧರ್ಮ ಕೀರ್ತಿರಾಜ್ ತಿಳಿಸಿದರು.

ನಾಯಕನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಟಿ ಭವ್ಯ ಹೇಳಿದರು. “ಬಲೆಟ್” ನನ್ನ ಛಾಯಾಗ್ರಹಣದ 50 ನೇ ಚಿತ್ರ ಎಂದು ಛಾಯಾಗ್ರಾಹಕ ಪಿ.ವಿ.ಆರ್ ಸ್ವಾಮಿ ಹೇಳಿದರು. ಚಿತ್ರದಲ್ಲಿ ನಾಲ್ಕು ಹಾಡುಗಳಿದೆ ಎಂದು ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ರಾಜ್ ಭಾಸ್ಕರ್ ಮಾಹಿತಿ ನೀಡಿದರು. ಹಾಡು ಬರೆದಿರುವ ಮನು ಕುಮಾರ್, ನಟ ಶರತ್, ವಿತರಕ ಜಯದೇವ ಫಿಲಂಸ್ ಮರಿಸ್ವಾಮಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

Spread the love
Click to comment

Copyright © 2019 PopcornKannada.com