Cinema News
ಥ್ರಿಲ್ಲಿಂಗ್ ಅಂಶಗಳೊಂದಿಗೆ ಗಮನ ಸೆಳೆದ ‘ದೇವಿ ಮಹಾತ್ಮೆ’ ಟೀಸರ್
‘ದೇವಿ ಮಹಾತ್ಮೆ’ ಚಿತ್ರದ ಟೈಟಲ್ ಮೂಲಕವೇ ಕುತೂಹಲ ಮೂಡಿಸಿದ್ದ ಚಿತ್ರತಂಡ ಇದೀಗ ಟೀಸರ್ ಮೂಲಕ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ. ನಿರ್ದೇಶಕ ನಾಗರಾಜ್ ಸೋಮಯಾಜಿ ವಿಭಿನ್ನ ಕಥಾಹಂದರದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದು, ಬಿಡುಗಡೆಯಾದ ಟೀಸರ್ ರೋಚಕತೆ ಹಾಗೂ ಸಸ್ಪೆನ್ಸ್ ಅಂಶಗಳಿಂದ ಗಮನ ಸೆಳೆಯುತ್ತಿದೆ.
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದ ರಂಗಾಯಣ ರಘು ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾವುದೇ ಪಾತ್ರಕ್ಕೂ ಜೀವ ತುಂಬುವ ಅವರ ಅಭಿನಯ ಟೀಸರ್‌ನ ಪ್ರಮುಖ ಆಕರ್ಷಣೆಯಾಗಿದೆ. ಸಮುದ್ರ ತೀರದ ದೃಶ್ಯಗಳು ಹಾಗೂ ಹುಲಿ ವೇಷದ ಝಲಕ್ ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿದೆ.
ಕೇವಲ 1 ನಿಮಿಷ 5 ಸೆಕೆಂಡ್‌ಗಳ ಟೀಸರ್‌ನಲ್ಲಿ ಥ್ರಿಲ್ಲಿಂಗ್ ಅನುಭವ ನೀಡುವ ಪ್ರಯತ್ನ ಮಾಡಲಾಗಿದೆ. ಲಿಖಿತ್ ಪ್ರಸಾದ್ ಕೆ ಶೆಟ್ಟಿ ಅವರ ಸಂಗೀತ, ಎಸ್‌ಕೆ ರಾವ್ ಅವರ ಛಾಯಾಗ್ರಹಣ ಹಾಗೂ ಉಜ್ವಲ್ ಚಂದ್ರ ಅವರ ಸಂಕಲನ ಚಿತ್ರದ ತಾಂತ್ರಿಕ ಗುಣಮಟ್ಟವನ್ನು ಹೆಚ್ಚಿಸಿದೆ.
ಯುವಿಜಿ ಸ್ಟುಡಿಯೋ ಬ್ಯಾನರ್‌ನಡಿ ವಿದ್ಯಾ ಗಾಂಧಿರಾಜನ್ ನಿರ್ಮಿಸಿರುವ ಈ ಚಿತ್ರದಲ್ಲಿ ರಂಗಾಯಣ ರಘು ಜೊತೆಗೆ ಪ್ರತಿಮಾ ನಾಯಕ್, ಸುಂದರ್ ವೀಣಾ, ಅರವಿಂದ್ ಕುಪ್ಳಿಕರ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ನಾಗರಾಜ್ ಸೋಮಯಾಜಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ‘ದೇವಿ ಮಹಾತ್ಮೆ’ ವಿಭಿನ್ನ ಅನುಭವ ನೀಡುವ ನಿರೀಕ್ಷೆ ಮೂಡಿಸಿದೆ.