Cinema News
‘ದೇವಿ ಮಹಾತ್ಮೆ’ ಭಕ್ತಿ ಪ್ರಧಾನ ಚಿತ್ರವಲ್ಲ; ವಿಭಿನ್ನ ಸೋಷಿಯಲ್ ಡ್ರಾಮಾ: ನಿರ್ದೇಶಕ ನಾಗರಾಜ್ ಸೋಮಾಯಾಜಿ
ಶೀರ್ಷಿಕೆಯ ಮೂಲಕವೇ ಕುತೂಹಲ ಮೂಡಿಸಿರುವ ‘ದೇವಿ ಮಹಾತ್ಮೆ’ ಚಿತ್ರದ ಕುರಿತು ನಿರ್ದೇಶಕ ನಾಗರಾಜ್ ಸೋಮಾಯಾಜಿ ಹಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಟೀಸರ್‌ನಿಂದ ಗಮನ ಸೆಳೆದಿರುವ ಈ ಸಿನಿಮಾ ಪೌರಾಣಿಕ ಕಥೆ ಅಥವಾ ಭಕ್ತಿ ಪ್ರಧಾನ ಚಿತ್ರವಲ್ಲ; ಬದಲಿಗೆ ಸಮಕಾಲೀನ ಸಮಾಜದ ಮೌಲ್ಯಗಳು ಹಾಗೂ ಮಾನವೀಯ ಸಂಬಂಧಗಳನ್ನು ಕೇಂದ್ರವಾಗಿಟ್ಟುಕೊಂಡಿರುವ ವಿಭಿನ್ನ ಸೋಷಿಯಲ್ ಡ್ರಾಮಾ ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಸೇರಿದಂತೆ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರ ಡಿಸೆಂಬರ್ 4ರಂದು ರಾಜ್ಯಾದ್ಯಂತ ತೆರೆಕಾಣಲಿದೆ.
‘ದೇವಿ ಮಹಾತ್ಮೆ’ ಎಂಬ ಶೀರ್ಷಿಕೆಯ ಹಿಂದಿರುವ ಕಾರಣವನ್ನು ವಿವರಿಸಿರುವ ನಾಗರಾಜ್ ಸೋಮಾಯಾಜಿ, ಕರಾವಳಿ ಭಾಗದಲ್ಲಿ ಅದರಲ್ಲೂ ಕುಂದಾಪುರ ಸುತ್ತಮುತ್ತ ‘ದೇವಿ ಮಹಾತ್ಮೆ’ ಯಕ್ಷಗಾನ ಪ್ರಸಂಗ ಹಾಗೂ ಬಯಲಾಟಕ್ಕೆ ವಿಶೇಷ ಜನಪ್ರಿಯತೆ ಇದೆ ಎಂದು ತಿಳಿಸಿದ್ದಾರೆ. ಚಿತ್ರದ ಕಥಾಹಂದರಕ್ಕೂ ಈ ಪ್ರಸಂಗಕ್ಕೂ ಒಂದು ರೀತಿಯ ನಂಟಿದ್ದು, ಸಿನಿಮಾದಲ್ಲಿಯೂ ಅದರ ಕೆಲವು ಅಂಶಗಳನ್ನು ಬಳಸಿಕೊಳ್ಳಲಾಗಿದೆ. ಕಥೆ ಮುಂದುವರಿದಂತೆ ಚಿತ್ರದ ಶೀರ್ಷಿಕೆ ಮತ್ತು ಕಥೆಯ ನಡುವಿನ ಸಂಬಂಧ ಪ್ರೇಕ್ಷಕರಿಗೆ ಸ್ಪಷ್ಟವಾಗಿ ಅರ್ಥವಾಗಲಿದೆ ಎಂದು ಅವರು ಹೇಳಿದ್ದಾರೆ.
ಚಿತ್ರದಲ್ಲಿ ರಂಗಾಯಣ ರಘು ಅವರು ಹಿಂದೆ ಕಾಣಿಸಿಕೊಂಡಿರದ ರೀತಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಯಾವುದೇ ಅಬ್ಬರ ಅಥವಾ ಅತಿಯಾದ ಭಾವನಾತ್ಮಕ ಪ್ರದರ್ಶನವಿಲ್ಲದೆ, ಅತ್ಯಂತ ಸಹಜ ಹಾಗೂ ಸೂಕ್ಷ್ಮ ಅಭಿನಯದ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ತಂದೆಯ ಪಾತ್ರದ ಮೂಲಕ ಮಾನವೀಯತೆ ಹಾಗೂ ಮನುಷ್ಯರು ಪರಸ್ಪರ ಸ್ಪಂದಿಸಬೇಕಾದ ರೀತಿಯನ್ನು ಚಿತ್ರದಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ. ಪ್ರಶಾಂತ್ ಹಿರೇಮಠ್ ಮೈಸೂರು, ಪಿ.ಡಿ. ಸತೀಶ್, ಅರವಿಂದ್ ಕುಪ್ಳೀಕರ್, ಬಾಸುಮ ಕೊಡಗು, ರಘು ಪಾಂಡೇಶ್ವರ್, ಶ್ವೇತಾ ಶ್ರೀನಿವಾಸ್, ಮೋಹನ್ ಶಣೈ, ಆಸೀಫ್ ಕ್ಷತ್ರೀಯಾ ಹಾಗೂ ಪ್ರತಿಮಾ ನಾಯ್ಕ್ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಸಾಂಪ್ರದಾಯಿಕ ಸಿನಿಮಾಗಳ ನಿರೂಪಣಾ ಶೈಲಿಗಿಂತ ವಿಭಿನ್ನವಾಗಿ ‘ದೇವಿ ಮಹಾತ್ಮೆ’ಯ ಕಥೆಯನ್ನು ರೂಪಿಸಲಾಗಿದೆ. ಫ್ಲ್ಯಾಶ್‌ಬ್ಯಾಕ್ ಸೇರಿದಂತೆ ಚಿತ್ರದ ಹಲವು ಭಾಗಗಳನ್ನು ವಿಶಿಷ್ಟ ನಿರೂಪಣಾ ಕ್ರಮದಲ್ಲಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡಲಾಗಿದೆ. ಟೀಸರ್‌ಗೆ ದೊರೆತ ಪ್ರತಿಕ್ರಿಯೆಯ ಬೆನ್ನಲ್ಲೇ ಚಿತ್ರದ ಕಥೆಯ ಪ್ರಮುಖ ಅಂಶಗಳನ್ನು ಮತ್ತಷ್ಟು ಪರಿಚಯಿಸುವ ಟ್ರೈಲರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಮೂಲತಃ ತಮಿಳುನಾಡಿನ ಗಾಂಧಿರಾಜನ್ ಅವರು ಕನ್ನಡ ಸಿನಿಮಾ ಹಾಗೂ ಚಿತ್ರತಂಡದ ಮೇಲಿನ ನಂಬಿಕೆಯಿಂದ ಚಿತ್ರವನ್ನು ನಿರ್ಮಿಸಿದ್ದು, ಎಸ್.ಕೆ. ರಾವ್ ಛಾಯಾಗ್ರಹಣ, ಲಿಖಿತ್ ಪ್ರಸಾದ್ ಶೆಟ್ಟಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಸಂಗೀತವೂ ಕಥೆಯ ಪ್ರಮುಖ ಭಾಗವಾಗಿ ಮೂಡಿಬಂದಿದೆ ಎಂದು ಚಿತ್ರತಂಡ ತಿಳಿಸಿದೆ. ಜನನಿ ಪ್ರೊಡಕ್ಷನ್ಸ್ ಚಿತ್ರದ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದ್ದು, ಡಿಸೆಂಬರ್ 4ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.