Cinema News

17ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 25 ದಿನ ಪೂರೈಸಿದ ‘ಡೆಡ್ಲಿ ಕಿಲ್ಲರ್’

Published

on

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಡೆಡ್ಲಿ ಕಿಲ್ಲರ್’ ಸಿನಿಮಾ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಥ್ರಿಲ್ಲರ್ ಮಂಜು ನಿರ್ದೇಶನದ ಈ ಚಿತ್ರದಲ್ಲಿ ಅಭಯ್‌ವೀರ್ ಹಾಗೂ ಲೋಕೇಂದ್ರ ಸೂರ್ಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಗಟ್ಟಿ ಕಥೆ ಹಾಗೂ ಬಿಗಿಯಾದ ನಿರೂಪಣೆಯಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಉತ್ತರ ಕರ್ನಾಟಕ ಸೇರಿದಂತೆ 17ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ, ಬೆಂಗಳೂರಿನ ಭೂಮಿಕಾ ಥಿಯೇಟರ್‌ನಲ್ಲೂ ಪ್ರದರ್ಶನ ಮುಂದುವರಿಸಿದೆ.

 

25 ದಿನಗಳ ಸಂಭ್ರಮದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಚಿತ್ರದ ಪಯಣವನ್ನು ಬಿಂಬಿಸುವ ವಿಶೇಷ ಎವಿ ಪ್ರದರ್ಶನ ನಡೆಸಿ, ಚಿತ್ರತಂಡಕ್ಕೆ ಸ್ಮರಣ ಫಲಕಗಳನ್ನು ವಿತರಿಸಲಾಯಿತು. ನಟಿ ರಾಗಿಣಿ ದ್ವಿವೇದಿ ಹಾಗೂ ಎ.ವಿ.ಆರ್. ಗ್ರೂಪ್‌ನ ಅರವಿಂದ್ ರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಂಡವನ್ನು ಅಭಿನಂದಿಸಿದರು. ಈ ವೇಳೆ ಮಾತನಾಡಿದ ನಿರ್ದೇಶಕ ಥ್ರಿಲ್ಲರ್ ಮಂಜು, ಸಿನಿಮಾ ನಿರ್ಮಾಣದ ವೇಳೆ ಎದುರಿಸಿದ ಸವಾಲುಗಳನ್ನು ನೆನೆದು ಭಾವುಕರಾದರು. ಪ್ರೇಕ್ಷಕರ ಬೆಂಬಲದ ಜೊತೆಗೆ ಉಪೇಂದ್ರ, ಜಗ್ಗೇಶ್, ದೊಡ್ಡಣ್ಣ, ಗಣೇಶ್ ಹಾಗೂ ಪ್ರಥಮ್ ಸೇರಿದಂತೆ ಹಲವರ ಸಹಕಾರದಿಂದ ಸಿನಿಮಾ ಯಶಸ್ಸು ಕಂಡಿದೆ ಎಂದು ಹೇಳಿದರು.

 

 

 

 

 

ನಾಯಕ ಅಭಯ್‌ವೀರ್ ಮಾತನಾಡಿ, ಮೊದಲ ಸಿನಿಮಾದ ಯಶಸ್ಸು ಖುಷಿ ತಂದಿದ್ದರೂ ತಮ್ಮ ಸಿನಿ ಪಯಣಕ್ಕೆ ದಾರಿತೋರಿದ ಗುರು ದರ್ಶನ್ ಅವರನ್ನು ನೆನೆದು ಭಾವುಕರಾದರು. 14 ವರ್ಷಗಳ ಹೋರಾಟದ ಬಳಿಕ ಈ ಯಶಸ್ಸು ಸಿಕ್ಕಿದ್ದು, ನಿರ್ಮಾಪಕ ಪ್ರಶಾಂತ್ ಹಾಗೂ ನಿರ್ದೇಶಕ ಥ್ರಿಲ್ಲರ್ ಮಂಜು ಸೇರಿದಂತೆ ಎಲ್ಲರ ಬೆಂಬಲವೇ ತನ್ನ ಬಲ ಎಂದು ಕೃತಜ್ಞತೆ ಸಲ್ಲಿಸಿದರು. ನಟಿ ರಾಗಿಣಿ ದ್ವಿವೇದಿ ಕೂಡ ತಂಡದ ಶ್ರಮವನ್ನು ಶ್ಲಾಘಿಸಿ, ನಿರಂತರ ಪ್ರಯತ್ನ ಮತ್ತು ಆತ್ಮವಿಶ್ವಾಸವೇ ಯಶಸ್ಸಿನ ಗುಟ್ಟು ಎಂದು ಹೇಳಿದರು.

 

 

 

 

 

 

ಕೀರ್ತಿ ಸಿಲ್ವರ್ ಸ್ಕ್ರೀನ್ ಹಾಗೂ ವೇದಿಕ್ ಕಾಸ್ಮಾಸ್ ಬ್ಯಾನರ್ ಅಡಿ ನಿರ್ಮಾಣವಾಗಿರುವ ಈ ಚಿತ್ರವನ್ನು ಪ್ರಶಾಂತ್ ಟಿ. ತಂಬ್ರಳ್ಳಿಮಠ ನಿರ್ಮಿಸಿದ್ದಾರೆ. ನಿರ್ದೇಶನದ ಜೊತೆಗೆ ವಿಲನ್ ಪಾತ್ರದಲ್ಲೂ ಥ್ರಿಲ್ಲರ್ ಮಂಜು ಕಾಣಿಸಿಕೊಂಡಿದ್ದಾರೆ. ಸಂಗೀತ ನಿರ್ದೇಶಕ ವಿನು ಮನಸು, ಛಾಯಾಗ್ರಾಹಕ ಮಲ್ಲಿಕಾರ್ಜುನ್, ನಟರಾದ ಲೋಕೇಂದ್ರ ಸೂರ್ಯ, ಸುನಿಲ್ ಬಾಲ್ಡರ್, ಪುನೀತ್, ಅಭಿ ಸೇರಿದಂತೆ ಚಿತ್ರತಂಡದ ಸದಸ್ಯರಿಗೆ ಇದೇ ಸಂದರ್ಭದಲ್ಲಿ ಸ್ಮರಣ ಫಲಕ ನೀಡಿ ಗೌರವಿಸಲಾಯಿತು.

Spread the love

Copyright © 2019 PopcornKannada.com