News

ಮೇ 30ಕ್ಕೆ ನಡೆಯಲಿದೆ ‘ಕ್ರೇಜಿ – ಬ್ರಹ್ಮ’ ರೀಯೂನಿಯನ್ ಮೆಗಾ ಇವೆಂಟ್

Published

on

ಕನ್ನಡ ಚಿತ್ರರಂಗದ ಐಕಾನಿಕ್ ಜೋಡಿಗಳಲ್ಲಿ ಒಂದಾದ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ನಾದಬ್ರಹ್ಮ ಹಂಸಲೇಖ ಅವರ ಸುವರ್ಣ ಸಂಗಮವನ್ನು ಸಂಭ್ರಮಿಸುವ ಸಲುವಾಗಿ “ಕ್ರೇಜಿ – ಬ್ರಹ್ಮ” ರೀಯೂನಿಯನ್ ಮೆಗಾ ಇವೆಂಟ್ ಮೇ 30ರಂದು ಅದ್ದೂರಿಯಾಗಿ ನಡೆಯಲಿದೆ. ಕೆಂಗೇರಿ ಸಮೀಪದ ಜೆಕೆ ಗ್ರಾಂಡ್ ಅರೇನಾದಲ್ಲಿ ಸಂಜೆ 6 ಗಂಟೆಯಿಂದ ಆರಂಭವಾಗಲಿರುವ ಈ ಕಾರ್ಯಕ್ರಮವನ್ನು ಪ್ರಸ್ತುತತ್ ಇನ್ನೋವೇಟಿವ್ ಕ್ರಿಯೇಷನ್ಸ್ ಅಂಡ್ ಸಲ್ಯೂಷನ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನ.ವಿನಯ್ ಹಾಗೂ ಕಲಾಲೂಹ ಸಂಸ್ಥಾಪಕಿ ಡಾ.ಚೇತನಾ ಆರ್.ಎಸ್ ಆಯೋಜಿಸಿದ್ದಾರೆ.

 

80 ಮತ್ತು 90ರ ದಶಕದಲ್ಲಿ ರವಿಚಂದ್ರನ್ ನಿರ್ದೇಶನ ಹಾಗೂ ಹಂಸಲೇಖ ಸಂಗೀತದ ಸಂಯೋಜನೆಯಲ್ಲಿ ಬಂದ ಅನೇಕ ಸಿನಿಮಾಗಳು ಕನ್ನಡ ಸಿನಿರಂಗದಲ್ಲಿ ಹೊಸ ಇತಿಹಾಸ ಬರೆದಿದ್ದವು. ಸುಮಾರು ಹದಿನಾರು ವರ್ಷಗಳ ಕಾಲ ಈ ಜೋಡಿ ನೀಡಿದ ಚಿತ್ರಗಳು ಮತ್ತು ಹಾಡುಗಳು ಇಂದಿಗೂ ಜನಮನದಲ್ಲಿ ಉಳಿದಿವೆ. ಇದೇ ಸಾಧನೆಯನ್ನು ಸ್ಮರಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಂಗವಾಗಿ ಸಮಾರಂಭದ ಸ್ಥಳದ ಮುಂಭಾಗದಲ್ಲಿ ರವಿಚಂದ್ರನ್ ಹಾಗೂ ಹಂಸಲೇಖ ಅವರ ಭವ್ಯ 80 ಅಡಿ ಕಟೌಟ್‌ಗಳನ್ನು ಅನಾವರಣಗೊಳಿಸಲಾಗಿದೆ.

 

 

 

 

 

ಸಮಾರಂಭದಲ್ಲಿ ಸುಮಾರು 8000ಕ್ಕೂ ಹೆಚ್ಚು ಅಭಿಮಾನಿಗಳು ಭಾಗಿಯಾಗುವ ನಿರೀಕ್ಷೆಯಿದ್ದು, ಸಾರ್ವಜನಿಕರಿಗಾಗಿ ಸಾಮಾನ್ಯ ಹಾಗೂ ವಿ.ಐ.ಪಿ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಟಿಕೆಟ್‌ಗಳು ಬುಕ್ ಮೈ ಶೋ ಮೂಲಕ ಲಭ್ಯವಿರುತ್ತವೆ. ಕನ್ನಡದ ಅನೇಕ ಖ್ಯಾತ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ನಾಲ್ಕು ಗಂಟೆಗಳ ವಿಶೇಷ ಮನರಂಜನಾ ಕಾರ್ಯಕ್ರಮ ಕೂಡ ನಡೆಯಲಿದೆ. ಅಭಿಮಾನಿಗಳು ಶಾಲು, ಹಾರ, ಕೇಕ್ ತರದಂತೆ ಆಯೋಜಕರು ಮನವಿ ಮಾಡಿಕೊಂಡಿದ್ದಾರೆ.

 

 

 

 

 

 

ಕಾರ್ಯಕ್ರಮದ ಕುರಿತು ಮಾತನಾಡಿದ ಹಂಸಲೇಖ, “ಇದು ಎಲ್ಲರಿಗೂ ಒಂದು ಕಾರ್ಯಕ್ರಮವಾಗಿರಬಹುದು, ಆದರೆ ನಮ್ಮಿಬ್ಬರಿಗೆ ಇದು ಒಂದು ಭಾವನಾತ್ಮಕ ಘಟನೆ. ರವಿಚಂದ್ರನ್ ಅವರ ಜೊತೆ ಕಳೆದ ದಿನಗಳನ್ನು ನೆನೆಸಿಕೊಳ್ಳುವುದು ಸಂತೋಷದ ಸಂಗತಿ” ಎಂದರು. ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡಿ, “ನಮ್ಮ ಕಾಂಬಿನೇಶನ್‌ನಲ್ಲಿ ಬಂದ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ. ನಾವು ಸಿನಿಮಾಗಳಲ್ಲಿ ಜೊತೆಯಾಗದೇ ಇರಬಹುದು, ಆದರೆ ಮನಸ್ಸಿನಲ್ಲಿ ಸದಾ ಒಟ್ಟಿಗೇ ಇದ್ದೇವೆ” ಎಂದು ಭಾವುಕರಾದರು.

Spread the love

Copyright © 2019 PopcornKannada.com