Cinema News
ಬೆಂಗಳೂರಿನಲ್ಲಿ ‘ಚೆನ್ನೈ ಲವ್ ಸ್ಟೋರಿ’ ಪ್ರಚಾರ; 100ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್
ಬಹುನಿರೀಕ್ಷಿತ ‘ಚೆನ್ನೈ ಲವ್ ಸ್ಟೋರಿ’ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಪ್ರಚಾರ ಕಾರ್ಯದ ಅಂಗವಾಗಿ ಚಿತ್ರತಂಡ ಬೆಂಗಳೂರಿನಲ್ಲಿ ಮಾಧ್ಯಮಗಳನ್ನು ಭೇಟಿ ಮಾಡಿತು. ಜುಲೈ 24ರಂದು ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ಜುಲೈ 23ರಂದು ಬೆಂಗಳೂರಿನಲ್ಲಿ ವಿಶೇಷ ಪ್ರೀಮಿಯರ್ ಪ್ರದರ್ಶನಗಳು ನಡೆಯಲಿವೆ. ಕರ್ನಾಟಕದಲ್ಲಿ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ವಿತರಕ ಕುಮಾರ್ ಚಿತ್ರದ ಬಿಡುಗಡೆಯ ಜವಾಬ್ದಾರಿ ಹೊತ್ತಿದ್ದಾರೆ.
ಈ ವೇಳೆ ಮಾತನಾಡಿದ ನಾಯಕ ನಟ ಕಿರಣ್ ಅಬ್ಬಾವರಂ, ಬೆಂಗಳೂರಿನೊಂದಿಗೆ ತಮ್ಮ ಭಾವನಾತ್ಮಕ ನಂಟನ್ನು ನೆನಪಿಸಿಕೊಂಡರು. ಬಿ.ಟೆಕ್ ಬಳಿಕ ಸಾಫ್ಟ್‌ವೇರ್ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಿದ್ದ ಅವರು, ಬಿಟಿಎಂ ಲೇಔಟ್, ಬೆಳ್ಳಂದೂರು, ಎಚ್‌ಎಸ್‌ಆರ್ ಲೇಔಟ್, ಮಾರತಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸುಮಾರು ಮೂರು ವರ್ಷ ವಾಸವಿದ್ದ ಅನುಭವವನ್ನು ಹಂಚಿಕೊಂಡರು. ಸಿನಿಮಾ ಕನಸಿಗಾಗಿ ಐಟಿ ಉದ್ಯೋಗ ತೊರೆದು ಬಂದ ನಿರ್ಧಾರವೇ ತಮ್ಮ ಬದುಕಿನ ಮಹತ್ವದ ತಿರುವು ಎಂದು ತಿಳಿಸಿದರು.
ನಾಯಕಿ ಶ್ರೀ ಗೌರಿ ಪ್ರಿಯ, ಈ ಚಿತ್ರದಲ್ಲಿನ ಪಾತ್ರವು ತಮ್ಮ ವೃತ್ತಿಜೀವನದ ಅತ್ಯಂತ ಸವಾಲಿನ ಮತ್ತು ತೃಪ್ತಿ ನೀಡಿದ ಪಾತ್ರ ಎಂದು ಹೇಳಿದರು. ಸಾಮಾನ್ಯ ಪ್ರೇಮಕಥೆಗಳಿಗಿಂತ ಭಿನ್ನವಾಗಿ, ನಾಯಕ ಮತ್ತು ನಾಯಕಿ ಇಬ್ಬರ ಭಾವನೆಗಳಿಗೆ ಸಮಾನ ಪ್ರಾಮುಖ್ಯತೆ ನೀಡಲಾಗಿದೆ. ಕಥೆಯಲ್ಲಿ ಟ್ವಿಸ್ಟ್, ಸಸ್ಪೆನ್ಸ್ ಹಾಗೂ ಭಾವನಾತ್ಮಕ ಕ್ಷಣಗಳು ಪ್ರೇಕ್ಷಕರನ್ನು ಸೆಳೆಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕದ ವಿತರಕ ಕುಮಾರ್, ಇತ್ತೀಚಿನ ಯಶಸ್ವಿ ಪ್ರೇಮಕಥಾ ಚಿತ್ರಗಳಂತೆ ಈ ಸಿನಿಮಾದಲ್ಲೂ ಹೊಸತನವಿದ್ದು, ಕಿರಣ್ ಅಬ್ಬಾವರಂ ಅವರ ಅಭಿನಯ ಮತ್ತು ಚಿತ್ರದ ಕಥಾವಸ್ತು ಕನ್ನಡ ಪ್ರೇಕ್ಷಕರನ್ನು ಸೆಳೆಯಲಿದೆ ಎಂದು ಹೇಳಿದರು. ರಾಜ್ಯದಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಉತ್ತಮ ಪ್ರತಿಕ್ರಿಯೆ ಸಿಗುವ ನಿರೀಕ್ಷೆಯಿದೆ.