Cinema News
ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಹಾಡುಗಳ ಸಂಭ್ರಮ
ಜೋಗಿ, ವಿಲನ್, ಜೋಗಯ್ಯದಂಥ ಯಶಸ್ವೀ ಚಿತ್ರಗಳನ್ನು ಕನ್ನಡಿಗರಿಗೆ ನೀಡಿದ ಪ್ರೇಮ್ ಅಪ್ಪಟ ಮಾಸ್ ಲವ್ ಸ್ಟೋರಿಯೊಂದನ್ನು ತೆರೆಗೆ ತರುತ್ತಿದ್ದಾರೆ. ಅವರ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಏಕ್ ಲವ್ ಯಾ ಇದೇ ತಿಂಗಳ ೨೪ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಗಾಂಧಿನಗರದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಈ ಚಿತ್ರದಲ್ಲಿ ಪ್ರೇಮ್ ಭಾಮೈದ ರಾಣಾ(ಅಭಿಷೇಕ್) ನಾಯಕನಾಗಿ ನಟಿಸಿದ್ದಾರೆ.
ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಈ ಸಿನಿಮಾದಲ್ಲಿ ನಾಯಕಿಯಾಗಿ ರೀಶ್ಮಾ ನಾಣಯ್ಯ ಕೂಡ ಸಿನಿ ಇಂಡಸಿಗೆ ಪ್ರವೇಶಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳ ಮೂಲಕ ಈ ಜೋಡಿ ಕ್ಯೂಟ್ ಪೇರ್ ಎನಿಸಿಕೊಂಡಿದೆ. ತೆರೆಮೇಲೆ ಯಾವರೀತಿ ಮೋಡಿ ಮಾಡಲಿದೆ ಎಂಬುದನ್ನು ಕಾದುನೋಡಬೇಕು. ನಟಿ ರಚಿತಾರಾಮ್ ಅವರು ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಿಲೀಸ್‌ಗೆ ಸಿದ್ದವಾಗಿರುವ ಈ ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮ ಯಶವಂತಪುರದ ತಾಜ ವಿವಾಂತ ಹೋಟೆಲ್‌ನಲ್ಲಿ ನೆರವೇರಿತು.
ಸಾಮಾನ್ಯವಾಗಿ ಪ್ರೇಮ್ ನಿರ್ದೇಶನದ ಚಿತ್ರಗಳು ಎಂದರೆ ಅಲ್ಲಿ ಸಂಗೀತಕ್ಕೆ ಪ್ರಥಮ ಪ್ರಾಶಸ್ತ್ಯವಿರುತ್ತದೆ, ಏಕ ಲವ್ ಯಾ ಚಿತ್ರದಲ್ಲೂ ಅರ್ಜುನ ಜನ್ಯ ಅವರ ಮೆಲೋಡಿ ಮ್ಯೂಸಿಕ್ ಸಿನಿಪ್ರೇಕ್ಷಕರಲ್ಲಿ ಚಿತ್ರದ ಕುರಿತು ಕುತೂಹಲ ಹೆಚ್ಚಿಸಿದೆ. ಈ ಚಿತ್ರದ ಎಲ್ಲಾ ಹಾಡುಗಳು ಒಂದಕ್ಕಿಂತ ಒಂದು ವಿಶೇಷವಾಗಿ ಮೂಡಿಬಂದಿದ್ದು, ಹಾಡುಗಳೇ ಚಿತ್ರವನ್ನು ಗೆಲ್ಲಿಸುವಂತಿವೆ, ಸಂಜೆಯ ಚುಮು ಚುಮು ಛಳಿಯಲ್ಲಿ ಆರಂಭವಾದ ಈ ವರ್ಣರಂಜಿತ ಕಾರ್ಯಕ್ರಮದ ವೇದಿಕೆಯಲ್ಲಿ ಏಕ ಲವ್ ಯಾ ಚಿತ್ರದ ಹಾಡುಗಳನ್ನು ಒಂದೊಂದಾಗಿ ದೊಡ್ಡ ಪರದೆಯ ಮೇಲೆ ಪ್ರದರ್ಶಿಸಲಾಯಿತು, ನಂತರ ಆ ಹಾಡಿನ ವಿಶೇಷತೆಗಳ ಕುರಿತಂತೆ ನಿರ್ದೇಶಕ ಪ್ರೇಮ್ ಹೇಳುತ್ತಾ ಹೋದರು.
ಈ ಚಿತ್ರದ ಎಲ್ಲಾ ಹಾಡುಗಳು ಹಿಟ್ ಆಗಿದ್ದರೂ ಅದರಲ್ಲಿ ಮೀಟ್ ಮಾಡಣ, ಇಲ್ಲ ಡೇಟ್ ಮಾಡಣ.. ಎನ್ನುವ ಸಾಂಗ್ ಎಲ್ಲಕ್ಕಿಂತ ಹೆಚ್ಚು ಜನಪ್ರಿಯವಾಗಿದೆ. ಅಂದಹಾಗೆ, ಈ ಹಾಡನ್ನು ಬರೆದವರು ವಿಜಯ್ ಈಶ್ವರ್. ಆರಂಭದಲ್ಲಿ ಈ ಹಾಡು ಬೇಡ ಎಂದು ಹಲವರು ಪ್ರೇಮ್‌ಗೆ ಸಲಹೆ ನೀಡಿದ್ದರಂತೆ. ಆದರೆ ಪ್ರೇಮ್ ಮಾತ್ರ ಈ ಸಾಂಗ್ ಬೇಕೇಬೇಕು ಎಂದು ಅರ್ಜುನ್ ಜನ್ಯ ಅವರ ಬಳಿ ಹೊಸ ಟ್ಯೂನ್ ಮಾಡಿಸಿದ್ದರಂತೆ. ಐಶ್ವರ್ಯಾ ರಂಗರಾಜನ್ ಅವರ ಕಂಠದಲ್ಲಿ ಹೊರಬಂದಿರುವ ಈ ಹಾಡಿಗೆ ವಿಜಯ್ ಈಶ್ವರ್ ಸಾಹಿತ್ಯ ಬರೆದಿದ್ದಾರೆ. ಅಂದು ಎಲ್ಲರೂ ಬೇಡ ಎಂದಿದ್ದ ಹಾಡು ಇದೀಗ ಭರ್ಜರಿ ಹಿಟ್ ಆಗಿದೆ.
ಸಹೋದರನಿಗಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿರುವ ರಕ್ಷಿತಾ ಪ್ರೇಮ್ ಮಾತನಾಡಿ ರಾಣಾಗೆ 3 ವರ್ಷದ ಹಿಂದೆ ನಾನು ಹೀರೋ ಆಗಬೇಕು ಎಂಬ ಥಾಟ್ ಬಂತು. ಅಲ್ಲಿಂದ ಈ ಸಿನಿಮಾ ಜರ್ನಿ ಶುರುವಾಯ್ತು. ಈ ಹಾಡನ್ನು ನಮ್ಮ ಟೆಕ್ನೀಷಿಯನ್ಸ್ ಗೋಸ್ಕರವೇ ಮಾಡಿದ್ದು. ಚಿತ್ರ ಖಂಡಿತವಾಗಿ ಎಲ್ಲರಿಗೂ ಇಷ್ಟವಾಗುತ್ತೆ. ಗೆಲ್ಲುತ್ತೆ ಎಂಬ ಭರವಸೆಯಿದೆ. ಇದೇ 24 ರ ಗುರುವಾರ ಬಿಡುಗಡೆಯಾಗುತ್ತಿದ್ದು ಎಲ್ಲರೂ ಸಪೋರ್ಟ್ ಮಾಡಿ ಎಂದು ಕೇಳಿಕೊಂಡರು. ಅಲ್ಲದೆ ತಂತ್ರಜ್ಞರೆಲ್ಲರನ್ನೂ ವೇದಿಕೆಮೇಲೆ ಕರೆದು ಎದೆ ಬಡಿತ ಹಾಡಿಗೆ ಸ್ಟೆಪ್ ಹಾಕಿದರು. ನಿರ್ದೇಶಕ ಪ್ರೇಮ್ ಮಾತನಾಡಿ ನಮ್ಮ ಸಿನಿಮಾ ಮ್ಯೂಸಿಕ್ ನಲ್ಲಿ ಒಳ್ಳೇ ಟ್ರೀಟ್ ಕೊಡುತ್ತೆ. ಸೌಂಡ್ ಬಗ್ಗೆ ತುಂಬಾ ಜಾಗೃತೆ ವಹಿಸುತ್ತೇವೆ. ನನ್ನಜೊತೆ ಕೆಲಸ ಮಾಡುವವರಾರೂ ದುಡ್ಡಿಗೋಸ್ಕರ ಬಂದವರಲ್ಲ. ಗೆಲ್ಲಬೇಕೆಂದು ತುಂಬಾ ಶ್ರಮವಹಿಸಿ ವರ್ಕ್ ಮಾಡುತ್ತಾರೆ. ಹಾಗಾಗಿ ಎಲ್ಲರ ಫೋಟೋ ಹಾಕಿಸಿದ್ದೇನೆ. ಅಲ್ಲದೆ ನನ್ನ ಸಿನಿಮಾಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಛಾಯಾಗ್ರಾಹಕ ಮಹೇಂದ್ರ ಸಿಂಹ ಇಬ್ಬರು ಹೀರೋಗಳು. ನನ್ನ ಅರ್ಧ ಕೆಲಸವನ್ನು ಇವರೇ ಮಾಡಿದ್ದಾರೆ. ಅಲ್ಲದೆ ನಾನು ಚರಣರಾಜ್ ಅವರ ಅಭಿಮಾನಿ. ತುಂಬಾ ಎನರ್ಜಿಟಿಕ್ ಆಗಿ ಅಭಿನಯಿಸಿದ್ದಾರೆ ಎಂದರು.
ನಂತರ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಿರುವ ಹಿರಿಯನಟ ಚರಣರಾಜ್ ಮಾತನಾಡಿ ಈ ಚಿತ್ರದಲ್ಲಿ ನಾನು ಆಕ್ಟ್ ಮಾಡುತ್ತೇನೆ ಅಂದ್ಕೊಂಡೇ ಇರಲಿಲ್ಲ, ದಶಾವರ ಚಂದ್ರು ನನಗೆ ಒಮ್ಮೆ ಕಾಲ್ ಮಾಡಿ ಪ್ರೇಮ್ ಸರ್ ನಿಮ್ಮ ಬಳಿ ಮಾತಾದಬೇಕಂತೆ ಎಂದರು. ನನಗೆ ಪ್ರೇಮ್ ಮೇಲೆ ಒಂಚೂರು ಕೋಪವಿತ್ತು, ಯಾಕೆ ನನಗೆ ಕರೀತಿಲ್ಲ, ಅಥವಾ ನನಗೊಪ್ಪುವ ಪಾತ್ರ ಇಲ್ಲವೇನೋ ಎಂದುಕೊಳ್ತಿದ್ದೆ, ನಂತರ ಪ್ರೇಮ್ ಬಳಿ ಕಥೆ ಕೇಳದೇ ಒಪ್ಪಿಕೊಂಡೆ. ಅವರು ದಿನದ ೨೪ ಗಂಟೆ ಶೂಟಿಂಗ್ ಮಾಡಿದರೂ ನಗುನಗುತ್ತಲೇ ಇರುತ್ತಾರೆ. ಅವರ ರಕ್ತದಲ್ಲೇ ಸಿನಿಮಾ ಅನ್ನುವುದು ಜೊತೆಗಿದೆ. ಅಲ್ಲದೆ ಅವರ ತಾಯಿಯ ಆಶೀರ್ವಾದವೂ ಇದೆ. ಪ್ರೇಮ್ ನಮ್ಮ ಸಾಮರ್ಥ್ಯ ಎಷ್ಟಿದೆ ಎಂದು ತಿಳಿದುಕೊಂಡು ನಮ್ಮಿಂದ ಕೆಲಸ ತಗೋತಾರೆ. ಪ್ರೇಮ್ ಹಾಡುವ ಹಾಡುಗಳನ್ನು ಕೇಳುತ್ತಿದ್ದರೆ ಹಾಗೇ ಕಣ್ಣಲ್ಲಿ ನೀರು ಬಂದು ಬಿಡುತ್ತದೆ, ಇನ್ನು ರಾಣಾ ಕೂಡ ಹೊಸ ಹುಡುಗ ಅನಿಸೋದೇ ಇಲ್ಲ, ಈತನ ಮೂಲಕ ಕನ್ನಡಕ್ಕೆ ಮತ್ತೊಬ್ಬ ಹೊಸ ಹೀರೋ ಬಂದಂತಾಗಿದೆ ಎಂದು ರಾಣಾ ಅಭಿನಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ನಂತರ ನಾಯಕ ರಾಣಾ ಮಾತನಾಡಿ ಚಿತ್ರಕ್ಕೆ ಮಾಡಿಕೊಂಡ ಸಿದ್ದತೆ, ಮೊದಲು ಬಣ್ಣ ಹಚ್ಚಿದ ಅನುಭವಗಳನ್ನು ಹಂಚಿಕೊಂಡರು. ಚಿತ್ರದ ನಾಯಕಿ ರೀಷ್ಮಾ ನಾಣಯ್ಯ ಮಾತನಾಡುತ್ತ ನನಗೆ ಏಪ್ರಿಲ್ ಒಂದರಂದೇ ಏಕ್ ಲವ್ ಯಾ ಸಿನಿಮಾದ ಆಫರ್ ಬಂದಿತ್ತು. ಮೊದಲು ಯಾರೋ ಫೂಲ್ ಮಾಡ್ತಿದಾರೆ ಅಂತ ನಂಬಲಿಲ್ಲ. ನಿಜ ಅಂತ ಗೊತ್ತಾದಾಗ ಖುಷಿಯಾಯ್ತು. ವರ್ಕ್ ಷಾಪ್ ಮಾಡಿ ನಂತರ ಆಕ್ಟ್ ಮಾಡಿದ್ದೇವೆ ಎಂದು ಹೇಳಿಕೊಂಡರು.