Cinema News

ಸ್ಯಾಂಡಲ್‌ವುಡ್‌ನಲ್ಲಿ ಅಣ್ಣ-ತಮ್ಮನ ಹೊಸ ಜುಗಲ್‌ಬಂದಿ; ‘ಶ್ರೀರಸ್ತು’ಗೆ ಪ್ರಜ್ವಲ್ ಎಂಟ್ರಿ

Published

on

ಶ್ರೀರಸ್ತು’ ಚಿತ್ರದ ಮೂಲಕ ದೇವರಾಜ್ ಕುಟುಂಬದ ಇಬ್ಬರು ಪುತ್ರರಾದ ಪ್ರಜ್ವಲ್ ದೇವರಾಜ್ ಮತ್ತು ಪ್ರಣಾಮ್ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಈಗಾಗಲೇ ಪ್ರಣಾಮ್ ನಾಯಕನಾಗಿ ಘೋಷಣೆಯಾಗಿದ್ದ ಈ ಚಿತ್ರಕ್ಕೆ, ಪ್ರಜ್ವಲ್ ದೇವರಾಜ್ ಪ್ರಮುಖ ಪಾತ್ರದಲ್ಲಿ ಸೇರ್ಪಡೆಯಾಗಿರುವುದನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ. ಪ್ರಜ್ವಲ್ ಅವರ ಜನ್ಮದಿನದಂದು ಬಿಡುಗಡೆಯಾದ ವಿಶೇಷ ಪೋಸ್ಟರ್ ಹಾಗೂ ವಿಡಿಯೋದಲ್ಲಿ ಇಬ್ಬರೂ ಸಹೋದರರು ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

 

ಆರಂಭದಲ್ಲಿ ‘ಶ್ರೀರಸ್ತು’ ಪ್ರೇಮಕಥೆಯ ಚಿತ್ರ ಎಂದು ಹೇಳಲಾಗಿದ್ದರೂ, ಈಗ ಇದು ಕೌಟುಂಬಿಕ ಮನರಂಜನಾ ಚಿತ್ರವಾಗಿಯೂ ರೂಪುಗೊಳ್ಳುತ್ತಿದೆ. ಪ್ರಜ್ವಲ್ ಪಾತ್ರ ಚಿತ್ರದ ಕಥೆಗೆ ಹೊಸ ಆಯಾಮ ನೀಡಲಿದ್ದು, ಅವರು ತಮ್ಮನಿಗೆ ಸ್ಪರ್ಧಿಯಾಗಿ ಅಲ್ಲ, ಕಥೆಯ ಪ್ರಮುಖ ಭಾಗವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ಶಂಕರ್ ರೆಡ್ಡಿ ತಿಳಿಸಿದ್ದಾರೆ. ಸಂಜನಾ ಆನಂದ್ ನಾಯಕಿಯಾಗಿ ನಟಿಸುತ್ತಿದ್ದು, ಪ್ರೇಮ ಮತ್ತು ಕುಟುಂಬದ ಭಾವನೆಗಳನ್ನು ಒಂದೇ ಕಥೆಯಲ್ಲಿ ಕಟ್ಟಿಕೊಡುವ ಪ್ರಯತ್ನ ಚಿತ್ರದಲ್ಲಿದೆ.

 

 

 

 

 

 

ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲೂ ಬಿಡುಗಡೆಯಾಗಲಿರುವ ಈ ಚಿತ್ರವನ್ನು ಹರ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಹರಗೌಡ ನಿರ್ಮಿಸುತ್ತಿದ್ದಾರೆ. ಸುಮನ್, ಆಮನಿ, ಚೈತ್ರಾ ರೈ, ರವಿ ಶಿವತೇಜ, ಜೋಶ್ ರವಿ ಹಾಗೂ ರವಿ ಪ್ರಕಾಶ್ ಸೇರಿದಂತೆ ಹಲವು ಕನ್ನಡ-ತೆಲುಗು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಛಾಯಾಗ್ರಹಣವನ್ನು ಬಾಲಸರಸ್ವತಿ ನಿರ್ವಹಿಸುತ್ತಿದ್ದು, ಕೃಷ್ಣ ಮಾಯ ಕಲಾ ನಿರ್ದೇಶನ ಹಾಗೂ ಶ್ರೀ ವರ್ಕಲ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

 

 

 

 

 

 

ಚಿತ್ರದ ಮೊದಲ ವಿಡಿಯೋ ತುಣುಕಿನ ಹಿನ್ನೆಲೆ ಸಂಗೀತವೇ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ. ಸಂಗೀತ ನಿರ್ದೇಶಕ ಶೇಖರ್ ಚಂದ್ರ ಅವರ ಸಂಗೀತದ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿದ್ದು, ಈ ವರ್ಷದ ಮ್ಯೂಸಿಕಲ್ ಹಿಟ್ ಆಗುವ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ. ಪ್ರಜ್ವಲ್, ಪ್ರಣಾಮ್ ಮತ್ತು ಸಂಜನಾ ಆನಂದ್ ಅವರ ಹೊಸ ಕಾಂಬಿನೇಷನ್ ‘ಶ್ರೀರಸ್ತು’ ಚಿತ್ರಕ್ಕೆ ವಿಶೇಷ ಆಕರ್ಷಣೆಯಾಗಲಿದೆ ಎಂಬ ಮಾತು ಸಿನಿವಲಯದಲ್ಲಿ ಕೇಳಿಬರುತ್ತಿದೆ

Spread the love

Copyright © 2019 PopcornKannada.com