Cinema News
ಹುಬ್ಬಳ್ಳಿಯಲ್ಲಿ ಅದ್ಧೂರಿ ‘ಬೃಂದಾವಿಹಾರಿ’ ಪ್ರೀ-ರಿಲೀಸ್ ಇವೆಂಟ್: ನವೆಂಬರ್ 20ಕ್ಕೆ ಗಣೇಶ್ ಸಿನಿಮಾ ತೆರೆಗೆ!
ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ‘ಬೃಂದಾವಿಹಾರಿ’ ಚಿತ್ರದ ಪ್ರೀ-ರಿಲೀಸ್ ಸಮಾರಂಭ ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ಜರುಗಿತು. ಕೆವಿಸಿ ಪ್ರೊಡಕ್ಷನ್ ಹಾಗೂ ವಿರಾಟ್ ಸಾಯಿ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ಸಮೃದ್ಧಿ ವಿ. ಮಂಜುನಾಥ್ ನಿರ್ಮಿಸಿರುವ ಈ ಚಿತ್ರಕ್ಕೆ ಶ್ರೀನಿವಾಸರಾಜು ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಗಣೇಶ್ ಜೊತೆಗೆ ಮಾಳವಿಕಾ ಶರ್ಮ ಹಾಗೂ ದೇವಿಕಾ ಭಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಗರದ ನೆಹರು ಮೈದಾನದಲ್ಲಿ ನಿರ್ಮಿಸಲಾಗಿದ್ದ ವರ್ಣರಂಜಿತ ವೇದಿಕೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಸಾವಿರಾರು ಅಭಿಮಾನಿಗಳು ಸಾಕ್ಷಿಯಾದರು. ಕಾಮಿಡಿ ಕಿಲಾಡಿಗಳ ಖ್ಯಾತಿಯ ಜಗಪ್ಪ, ಸುಶ್ಮಿತಾ ಹಾಗೂ ಬಿಗ್‌ಬಾಸ್ ವಿಜೇತರಾದ ಗಿಲ್ಲಿ ನಟ ಮತ್ತು ಮಂಜು ಪಾವಗಡ ಅವರ ಮನರಂಜನಾ ಕಾರ್ಯಕ್ರಮಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದವು. ಚಿತ್ರದ ಹಾಡುಗಳಿಗೆ ಕಲಾವಿದರು ನೀಡಿದ ನೃತ್ಯ ಪ್ರದರ್ಶನವೂ ಕಾರ್ಯಕ್ರಮದ ಆಕರ್ಷಣೆಯನ್ನು ಹೆಚ್ಚಿಸಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕ ಸಮೃದ್ಧಿ ವಿ. ಮಂಜುನಾಥ್, ಉತ್ತರ ಕರ್ನಾಟಕದ ಜನರು ಸದಾ ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅದೇ ರೀತಿಯಲ್ಲಿ ‘ಬೃಂದಾವಿಹಾರಿ’ ಚಿತ್ರವನ್ನೂ ವೀಕ್ಷಿಸಿ ಬೆಂಬಲಿಸಬೇಕೆಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು. ಸದ್ಯ ‘ಪ್ರೇಮದ ಊರಲಿ’ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಆ ಸಿನಿಮಾಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ‘ಬೃಂದಾವಿಹಾರಿ’ ಬಿಡುಗಡೆ ದಿನಾಂಕವನ್ನು ಅಕ್ಟೋಬರ್ 16ರಿಂದ ನವೆಂಬರ್ 20ಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದರು. ಚಿತ್ರತಂಡದ ಈ ನಿರ್ಧಾರಕ್ಕೆ ಪ್ರೇಕ್ಷಕರು ಪ್ರೀತಿ ಮತ್ತು ಆಶೀರ್ವಾದ ನೀಡಬೇಕೆಂದು ಕೋರಿದರು. ಸಮಾರಂಭದಲ್ಲಿ ಭಾಗವಹಿಸಿದ್ದ ಶಾಸಕರಾದ ಪ್ರಸಾದ್ ಅಬ್ಬಯ್ಯ, ರಾಜುಗೌಡ ಹಾಗೂ ಅರವಿಂದ್ ಬೆಲ್ಲದ್ ಚಿತ್ರತಂಡಕ್ಕೆ ಶುಭ ಹಾರೈಸಿದರು.
ನಟ ಗಣೇಶ್ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಹುಬ್ಬಳ್ಳಿ ಅಭಿಮಾನಿಗಳಿಗೆ ನಮಸ್ಕರಿಸಿ, ತಮ್ಮ ಚಿತ್ರದ ಮೇಲೆ ಪ್ರೀತಿ ತೋರಿಸಿ ಯಶಸ್ಸು ತಂದುಕೊಡುವಂತೆ ಮನವಿ ಮಾಡಿದರು. ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಸೇರಿದ್ದ ಅಭಿಮಾನಿಗಳ ಸಂಭ್ರಮ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತಂದಿತು. ಹಿರಿಯ ನಟ ರಂಗಾಯಣ ರಘು ಮಾತನಾಡಿ, ಮತ್ತೊಂದು ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣಲಿ ಎಂಬ ಉದ್ದೇಶದಿಂದ ತಮ್ಮ ಚಿತ್ರದ ಬಿಡುಗಡೆಯನ್ನು ಮುಂದೂಡಿರುವ ನಿರ್ಮಾಪಕ ಸಮೃದ್ಧಿ ವಿ. ಮಂಜುನಾಥ್ ಅವರ ನಿರ್ಧಾರವನ್ನು ಪ್ರಶಂಸಿಸಿದರು. ಚಿತ್ರರಂಗದಲ್ಲಿ ಪರಸ್ಪರ ಸಹಕಾರ ಮತ್ತು ಒಗ್ಗಟ್ಟು ಮುಖ್ಯ ಎಂಬುದನ್ನು ಈ ನಡೆ ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಮತ್ತೊಬ್ಬ ಅತಿಥಿ, ನಟ ಡಾರ್ಲಿಂಗ್ ಕೃಷ್ಣ ಮಾತನಾಡಿ, ಗಣೇಶ್ ಅವರು ತಮ್ಮ ಸಿನಿಮಾಗಳು ಬಿಡುಗಡೆಯಾದಾಗ ವೀಕ್ಷಿಸಿ ಪ್ರೋತ್ಸಾಹಿಸುವುದನ್ನು ಸ್ಮರಿಸಿದರು. ಕೌಟುಂಬಿಕ ಕಥಾಹಂದರದ ಚಿತ್ರಗಳು ತಮ್ಮ ನೆಚ್ಚಿನ ಪ್ರಕಾರವಾಗಿದ್ದು, ‘ಬೃಂದಾವಿಹಾರಿ’ ಕೂಡ ಉತ್ತಮ ಯಶಸ್ಸು ಕಾಣಲಿ ಎಂದು ಹಾರೈಸಿದರು. ಶ್ರೀನಿವಾಸರಾಜು ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವು ಕುಟುಂಬದ ಎಲ್ಲ ವಯೋಮಾನದ ಪ್ರೇಕ್ಷಕರನ್ನು ಮನರಂಜಿಸುವ ನಿರೀಕ್ಷೆ ಮೂಡಿಸಿದೆ. ಹುಬ್ಬಳ್ಳಿಯ ಪ್ರೀ-ರಿಲೀಸ್ ಕಾರ್ಯಕ್ರಮದ ಮೂಲಕ ಉತ್ತರ ಕರ್ನಾಟಕದ ಪ್ರೇಕ್ಷಕರನ್ನು ತಲುಪಿರುವ ಚಿತ್ರತಂಡ, ನವೆಂಬರ್ 20ರಂದು ರಾಜ್ಯಾದ್ಯಂತ ಚಿತ್ರವನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.