Cinema News
ಈ ವಾರ ತೆರೆಗೆ ‘ಬಾಯ್ಸ್ ನೆವರ್ ಕಾಂಪ್ರಮೈಸ್’; ಹಾರರ್-ಕಾಮಿಡಿಗೆ ಕೌಂಟ್‌ಡೌನ್
ಈ ಹಿಂದೆ ‘ಜಸ್ಟ್ ಮದ್ವೇಲಿ’ ಹಾಗೂ ‘ರಾಜಣ್ಣನ ಮಗ’ ಚಿತ್ರಗಳನ್ನು ನಿರ್ಮಿಸಿದ್ದ ಹರೀಶ್ ಜಲಗೆರೆ, ಇದೀಗ ಮೊದಲ ಬಾರಿಗೆ ನಿರ್ದೇಶಕರಾಗಿ ‘ಬಾಯ್ಸ್ ನೆವರ್ ಕಾಂಪ್ರಮೈಸ್’ ಚಿತ್ರದ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ. ಕಿಚ್ಚ ಸುದೀಪ್ ಅರ್ಪಿಸುತ್ತಿರುವ ಈ ಸಿನಿಮಾ ಜುಲೈ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮಾರಿ ಗೋಲ್ಡ್ ಸ್ಟುಡಿಯೋಸ್ ಮತ್ತು ಯುನಿವರ್ಸಲ್ ಹ್ಯಾಟ್ರಿಕ್ ಕಂಬೈನ್ಸ್ ಬ್ಯಾನರ್‌ಗಳಲ್ಲಿ ಡಾ. ಉಜ್ವಲ ಎನ್. ಜಗದಾಳೆ ಚಿತ್ರವನ್ನು ನಿರ್ಮಿಸಿದ್ದಾರೆ.
ಹರೀಶ್ ಜಲಗೆರೆ ಅವರ ಹಿಂದಿನ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಕೋಲಾರ ಸೀನು ಈ ಬಾರಿ ಸಹ ನಿರ್ದೇಶಕರಾಗಿ ಕೈಜೋಡಿಸಿದ್ದಾರೆ. ಹಾರರ್ ಹಾಗೂ ಕಾಮಿಡಿ ಅಂಶಗಳನ್ನು ಸಮತೋಲನವಾಗಿ ಒಳಗೊಂಡಿರುವ ಈ ಚಿತ್ರದ ಟೀಸರ್ ಮತ್ತು ಟ್ರೈಲರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದು, ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ.
ಚಿತ್ರದ ಕಥೆ ಜಾಲಿ ಟ್ರಿಪ್‌ಗೆ ತೆರಳುವ ಹತ್ತು ಯುವಕರ ಸುತ್ತ ಸಾಗುತ್ತದೆ. ಮೋಜು-ಮಸ್ತಿಯಲ್ಲಿ ತೊಡಗುವ ಈ ಸ್ನೇಹಿತರ ಬದುಕು ಅನಿರೀಕ್ಷಿತವಾಗಿ ದೆವ್ವದೊಂದಿಗೆ ಮುಖಾಮುಖಿಯಾಗುವ ಸಂದರ್ಭದಿಂದ ತಿರುವು ಪಡೆಯುತ್ತದೆ. ಭಯ ಮತ್ತು ಹಾಸ್ಯದ ಜೊತೆಗೆ, ಯುವಕರ ಜೀವನದಲ್ಲಿ ಕಾಂಪ್ರಮೈಸ್ ಎನ್ನುವ ವಿಚಾರದ ಬಗ್ಗೆ ಅರ್ಥಪೂರ್ಣ ಸಂದೇಶವನ್ನೂ ಸಿನಿಮಾ ಹೇಳಲಿದೆ. ಕೆಲವರು ತಮ್ಮ ತತ್ವಗಳಿಗೆ ಬದ್ಧರಾಗಿದ್ದರೆ ಅದರ ಪರಿಣಾಮ ಏನಾಗುತ್ತದೆ ಎಂಬುದನ್ನು ಮನರಂಜನಾತ್ಮಕವಾಗಿ ತೆರೆದಿಡಲಾಗಿದೆ.
ಚಿತ್ರದಲ್ಲಿ ಸಾಮ್ರಾಟ್, ಸುಪ್ರಿತ್ ಕಾಟಿ, ಸೀತಾರಾಮ, ಮಂಡ್ಯ ಸಿದ್ದು, ರಾಜೀವ್ ರೆಡ್ಡಿ, ಉಮೇಶ್ ಕಿನ್ನಾಳ, ಗಜೇಂದ್ರ, ಹೇಮಂತ್ ಗೌಡ ಹಾಗೂ ರಾಜರಾಜ ಚೋಳ ಸೇರಿದಂತೆ ಹಲವು ಯುವ ಕಲಾವಿದರು ಅಭಿನಯಿಸಿದ್ದಾರೆ. ರಾಜೀವ್ ರೆಡ್ಡಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಾಡೆಲ್ ಹಾಗೂ ನಟಿ ನಕ್ಷತ್ರ ವಿಶೇಷ ಪಾತ್ರದಲ್ಲಿ ಮಿಂಚಲಿದ್ದಾರೆ. ಲೋಕಿ ತವಸ್ಯ ಸಂಗೀತ, ಎಂ.ಎಸ್. ತ್ಯಾಗರಾಜ್ ಹಿನ್ನೆಲೆ ಸಂಗೀತ, ಪ್ರಮೋದ್ ಭಾರತೀಯ ಛಾಯಾಗ್ರಹಣ ಹಾಗೂ ಕಾರ್ತೀಕ್ ಈಶ್ವರಚಾರಿ ಸಂಕಲನ ಚಿತ್ರದ ಪ್ರಮುಖ ತಾಂತ್ರಿಕ ಬಲವಾಗಿದೆ.