Cinema News
ನ್ಯಾಯಾಂಗ ಹೋರಾಟದಲ್ಲಿ ಗೆದ್ದ ‘ಬಾಸ್’ ಚಿತ್ರತಂಡ; ಬಿಡುಗಡೆಗೆ ಸಜ್ಜು
ಸಿರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ, ವಿ. ಲವ್ ನಿರ್ದೇಶನದ ಹಾಗೂ ತನುಷ್ ಶಿವಣ್ಣ ನಾಯಕನಾಗಿ ಅಭಿನಯಿಸಿರುವ ‘ಬಾಸ್’ ಚಿತ್ರದ ಮೇಲಿದ್ದ ತಾತ್ಕಾಲಿಕ ತಡೆಯಾಜ್ಞೆಯನ್ನು ನಗರದ ಸಿವಿಲ್ ನ್ಯಾಯಾಲಯ ಇತ್ತೀಚೆಗೆ ತೆರವುಗೊಳಿಸಿದೆ. ಈ ಮೂಲಕ ಚಿತ್ರದ ಬಿಡುಗಡೆಯ ಮುಂದೆ ಇದ್ದ ಪ್ರಮುಖ ಕಾನೂನು ಅಡೆತಡೆ ನಿವಾರಣೆಯಾಗಿದ್ದು, ಚಿತ್ರತಂಡಕ್ಕೆ ಮಹತ್ವದ ಗೆಲುವು ದೊರೆತಿದೆ.
ಈ ಹಿಂದೆ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ‘ಬಾಸ್’ ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಕೋರಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿಯನ್ನು ಪರಿಗಣಿಸಿದ್ದ ನ್ಯಾಯಾಲಯ ಆರಂಭಿಕ ಹಂತದಲ್ಲಿ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ಬಳಿಕ ನಡೆದ ಸುದೀರ್ಘ ವಿಚಾರಣೆಯಲ್ಲಿ ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ಪ್ರಕರಣದ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಚಿತ್ರದ ಮೇಲಿದ್ದ ತಾತ್ಕಾಲಿಕ ನಿರ್ಬಂಧವನ್ನು ರದ್ದುಪಡಿಸಿದೆ.
ಚಿತ್ರದ ಪರವಾಗಿ ಹಿರಿಯ ವಕೀಲರು ಹಾಗೂ ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ ಪರಿಣಾಮಕಾರಿ ವಾದ ಮಂಡಿಸಿದ್ದರು. ಅವರ ವಾದಗಳನ್ನು ಪರಿಗಣಿಸಿದ ನ್ಯಾಯಾಲಯ ‘ಬಾಸ್’ ಚಿತ್ರದ ಬಿಡುಗಡೆಗೆ ಅನುಮತಿ ನೀಡಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ-ನಾಯಕ ತನುಷ್ ಶಿವಣ್ಣ ಹಾಗೂ ನಿರ್ದೇಶಕ ವಿ. ಲವ್, ನ್ಯಾಯಾಲಯದ ತೀರ್ಪಿನಿಂದ ಚಿತ್ರದ ಬಿಡುಗಡೆಗೆ ಇದ್ದ ಎಲ್ಲ ಅಡಚಣೆಗಳು ದೂರವಾಗಿದ್ದು, ಈಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಸಕಲ ಸಿದ್ಧತೆಗಳನ್ನು ಆರಂಭಿಸಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.