News
ದೇಹದಾರ್ಢ್ಯ ಲೋಕದ ಸಾಧಕ ಜಿಮ್ ರವಿ; ಜೀವನಚರಿತ್ರೆ ಪುಸ್ತಕ ಬಿಡುಗಡೆಗೆ ಸಜ್ಜು
ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಹದಾರ್ಢ್ಯ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿರುವ ಎ.ವಿ. ರವಿ, ಜನಪ್ರಿಯವಾಗಿ ಜಿಮ್ ರವಿ ಎಂದೇ ಗುರುತಿಸಿಕೊಂಡಿದ್ದಾರೆ. 100ಕ್ಕೂ ಹೆಚ್ಚು ಚಿನ್ನದ ಪದಕಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿರುವ ಅವರು, ಮಿಸ್ಟರ್ ಇಂಡಿಯಾ, ಭಾರತ ಶ್ರೀ, ಭಾರತ ಶ್ರೇಷ್ಠ, ಕರ್ನಾಟಕ ಶ್ರೀ, ಕರ್ನಾಟಕ ಶ್ರೇಷ್ಠ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಏಕಲವ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಜಿಮ್ ರವಿ, ದಕ್ಷಿಣ ಭಾರತದ ಖ್ಯಾತ ನಟರಾಗಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ಅವರ ಸಾಧನೆ ಮತ್ತು ಬದುಕಿನ ಪಯಣ ‘ರವಿ ನೀನು ಆಗಸದಲ್ಲಿ’ ಎಂಬ ಜೀವನಚರಿತ್ರೆ ಪುಸ್ತಕದ ಮೂಲಕ ಓದುಗರ ಮುಂದೆ ಬರಲಿದೆ.
ಖ್ಯಾತ ಲೇಖಕ ಡಾ. ಮಂಜುನಾಥ ಮಾಗೋದಿ ರಚಿಸಿರುವ ಈ ಕೃತಿಯ ಲೋಕಾರ್ಪಣಾ ಸಮಾರಂಭವು ಸೆಪ್ಟೆಂಬರ್ 8, ಮಂಗಳವಾರ ಸಂಜೆ 4 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಕಾಗಿನೆಲೆ ಮಹಾಸಂಸ್ಥಾನದ ಶ್ರೀಶ್ರೀ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಈ ಕಾರ್ಯಕ್ರಮ ಆಯೋಜನೆಯಾಗುತ್ತಿದ್ದು, ಜಿಮ್ ರವಿ ಅವರ ಸಾಧನಾ ಪಯಣವನ್ನು ದಾಖಲಿಸುವ ಮಹತ್ವದ ಕ್ಷಣಕ್ಕೆ ಸಾಕ್ಷಿಯಾಗಲಿದೆ.
ಈ ಸಮಾರಂಭದಲ್ಲಿ ಕರ್ನಾಟಕದ ಪ್ರಮುಖ ರಾಜಕೀಯ, ಸಾಹಿತ್ಯ ಹಾಗೂ ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್, ಕೃಷಿ ಸಚಿವ ನರೇಂದ್ರ ಸ್ವಾಮಿ, ಕೃತಿಕಾರ ಡಾ. ಮಂಜುನಾಥ ಮಾಗೋದಿ ಹಾಗೂ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.