Cinema News
ಏಳು ಹುಡುಗರ ತರ್ಲೆ, ಸ್ನೇಹ ಮತ್ತು ಜರ್ನಿ: ‘ಬೆಟಾಲಿಯನ್’ ಚಿತ್ರಕ್ಕೆ ಮುಹೂರ್ತ
ಸ್ನೇಹ, ಕಿತ್ತಾಟ, ಭಾವನೆ, ತರ್ಲೆ ಹಾಗೂ ಯುವಕರ ಜೀವನದ ಹಲವು ಮಜಲುಗಳನ್ನು ಒಳಗೊಂಡ ಕಥಾಹಂದರದ ‘ಬೆಟಾಲಿಯನ್’ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಕುಮಾರ ಪಾರ್ಕ್‌ನ ಶ್ರೀಮಹಾಲಕ್ಷ್ಮಿ ದೇವಸ್ಥಾನದಲ್ಲಿ ನೆರವೇರಿತು. ಆಕಾಶ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಪ್ರಕಾಶ್ ಎಸ್. ಬೂದೂರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕೆ.ಎಸ್. ಕೃಷ್ಣಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮುಹೂರ್ತದ ಮೊದಲ ದೃಶ್ಯಕ್ಕೆ ನಿರ್ಮಾಪಕ ಪ್ರಕಾಶ್ ಬೂದೂರು ಆರಂಭ ಫಲಕ ತೋರಿಸಿದರೆ, ಪಿ.ಸಿ. ಶೇಖರ್ ಕ್ಯಾಮೆರಾ ಚಾಲನೆ ಮಾಡಿದರು.
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಕೆ.ಎಸ್. ಕೃಷ್ಣಕುಮಾರ್, ಕಳೆದ 15 ವರ್ಷಗಳಿಂದ ಸಹಾಯಕ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಹಿಂದೆ ಲಂಬೋದರ ಚಿತ್ರವನ್ನು ನಿರ್ದೇಶಿಸಿದ್ದಾಗಿ ತಿಳಿಸಿದರು. ‘ಬೆಟಾಲಿಯನ್’ ತಮ್ಮ ನಿರ್ದೇಶನದ ಎರಡನೇ ಸಿನಿಮಾ. ಏಳು ಹುಡುಗರ ಗ್ಯಾಂಗ್ ಸುತ್ತ ಕಥೆ ಸಾಗಲಿದ್ದು, ಸ್ನೇಹ, ಎಮೋಷನ್, ಕಿತ್ತಾಟ ಹಾಗೂ ಅವರ ಬದುಕಿನ ಜರ್ನಿಯನ್ನು ಮನರಂಜನಾತ್ಮಕವಾಗಿ ಕಟ್ಟಿಕೊಡಲಾಗುತ್ತಿದೆ ಎಂದರು. ಆಹನ್ ಹಾಗೂ ಮಹಾನಟಿ ಖ್ಯಾತಿಯ ವಂಶಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಪ್ರಮೋದ್ ಶೆಟ್ಟಿ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳು ಹಾಗೂ ಒಂದು ಆಕ್ಷನ್ ಸನ್ನಿವೇಶವಿದ್ದು, ಕಾಸರಗೋಡು, ಕಾರ್ಕಳ, ಗೋವಾ ಹಾಗೂ ಬೆಂಗಳೂರು ಸುತ್ತಮುತ್ತ ಸುಮಾರು 50 ದಿನಗಳ ಕಾಲ ಚಿತ್ರೀಕರಣ ನಡೆಸುವ ಯೋಜನೆ ಇದೆ.
ನಿರ್ಮಾಪಕ ಪ್ರಕಾಶ್ ಎಸ್. ಬೂದೂರು ಮಾತನಾಡಿ, ಕಳೆದ 20 ವರ್ಷಗಳಿಂದ ಅಲಯನ್ಸ್ ಯುನಿವರ್ಸಿಟಿ ಎಜುಕೇಶನ್ ಇನ್‌ಸ್ಟಿಟ್ಯೂಟ್ ನಡೆಸುತ್ತಿರುವುದಾಗಿ ಹೇಳಿದರು. ಈ ಹಿಂದೆ ಶಿವರಾಜಕುಮಾರ್ ಹಾಗೂ ವಿಜಯ ರಾಘವೇಂದ್ರ ಅಭಿನಯದ ಮಹಾನ್ ಚಿತ್ರವನ್ನು ನಿರ್ಮಿಸಿದ್ದು, ಅದು ಬಿಡುಗಡೆಗೆ ಸಿದ್ಧವಾಗಿದೆ. ‘ಬೆಟಾಲಿಯನ್’ ತಮ್ಮ ನಿರ್ಮಾಣದ ಎರಡನೇ ಚಿತ್ರ. ನಿರ್ದೇಶಕರು ಕಥೆ ಹೇಳಿದಾಗ ವಿಭಿನ್ನವಾಗಿ ಹಾಗೂ ಆಸಕ್ತಿದಾಯಕವಾಗಿ ಅನಿಸಿದ್ದರಿಂದ ಚಿತ್ರವನ್ನು ಕೈಗೆತ್ತಿಕೊಂಡಿರುವುದಾಗಿ ತಿಳಿಸಿದರು. ಸ್ನೇಹದಲ್ಲಿ ಕಾಣಿಸಿಕೊಳ್ಳುವ ಖುಷಿ, ಅಸೂಯೆ, ದ್ವೇಷ ಸೇರಿದಂತೆ ಹಲವು ಭಾವನೆಗಳನ್ನು ಒಳಗೊಂಡಿರುವ ಈ ಸಿನಿಮಾ ಕಾಮಿಡಿ ಥ್ರಿಲ್ಲರ್ ಆಗಿರಲಿದೆ. ಇಂದಿನ ಜನರೇಷನ್‌ಗೆ ಇಷ್ಟವಾಗುವಂತಹ ಮನರಂಜನಾ ಅಂಶಗಳೊಂದಿಗೆ ಚಿತ್ರವನ್ನು ರೂಪಿಸಲಾಗುತ್ತಿದೆ ಎಂದರು.
ನಟ ಪ್ರಮೋದ್ ಶೆಟ್ಟಿ ನಿರ್ದೇಶಕರು ತಮ್ಮ ಪಾತ್ರ ಹಾಗೂ ಕಥೆಯನ್ನು ವಿವರಿಸಿದ ಬಳಿಕ ಪಾತ್ರ ಇಷ್ಟವಾಗಿ ಚಿತ್ರ ಒಪ್ಪಿಕೊಂಡಿರುವುದಾಗಿ ಹೇಳಿದರು. ಸ್ಥಳೀಯ ಥಿಯೇಟರ್ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ರೂಪಿಸಲಾಗುತ್ತಿದೆ ಎಂದರು. ನಾಯಕ ಆಹನ್, ತಾನು ಐದಾರು ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದು, ದೇವಸಸ್ಯ ಸೇರಿದಂತೆ ಈಗಾಗಲೇ ಆರು ಸಿನಿಮಾಗಳಲ್ಲಿ ಅಭಿನಯಿಸಿರುವುದಾಗಿ ತಿಳಿಸಿದರು. ಚಿತ್ರದಲ್ಲಿ ‘ಸಂತು’ ಎಂಬ ಪಾತ್ರ ನಿರ್ವಹಿಸುತ್ತಿದ್ದು, 18ರಿಂದ 20 ವರ್ಷದೊಳಗಿನ ಹುಡುಗರ ಬದುಕು, ಅವರ ನಡುವಿನ ಇಗೋ ಕ್ಲಾಶ್ ಹಾಗೂ ಸ್ನೇಹದ ಸುತ್ತ ಕಥೆ ಸಾಗಲಿದೆ ಎಂದರು. ನಾಯಕಿ ವಂಶಿ, ಎಲ್ಲರಿಗೂ ಕನೆಕ್ಟ್ ಆಗುವಂತಹ ಕಥೆ ಇದಾಗಿದ್ದು, ಹುಡುಗರ ಈ ಗ್ಯಾಂಗ್‌ಗೆ ತಮ್ಮ ಪಾತ್ರ ಹೇಗೆ ಎಂಟ್ರಿ ಪಡೆಯುತ್ತದೆ ಎಂಬುದೇ ಕುತೂಹಲಕಾರಿ ಅಂಶ ಎಂದು ಹೇಳಿದರು. ಚಿತ್ರಕ್ಕೆ ಚೇತನ್ ಅಮ್ಮಯ್ಯ ಸಂಗೀತ ಸಂಯೋಜನೆ ಹಾಗೂ ಅಜಯ್ ಛಾಯಾಗ್ರಹಣವಿದೆ.