Cinema News
ಗಣೇಶ್ ‘ಬೃಂದಾವಿಹಾರಿ’ಯಿಂದ ಮತ್ತೊಂದು ಮೆಲೋಡಿ; ಶ್ರೇಯಾ ಘೋಶಾಲ್ ಹಾಡಿಗೆ ಭರ್ಜರಿ ರೆಸ್ಪಾನ್ಸ್
ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ‘ಬೃಂದಾವಿಹಾರಿ’ ಚಿತ್ರದ ಮತ್ತೊಂದು ಮೆಲೋಡಿ ಹಾಡು ಬಿಡುಗಡೆಯಾಗಿದೆ. ‘ನಾದನಿನಾದ’ ಹೆಸರಿನ ಈ ಗೀತೆಯನ್ನು ಖ್ಯಾತ ಗಾಯಕಿ ಶ್ರೇಯಾ ಘೋಶಾಲ್ ತಮ್ಮ ಸುಮಧುರ ಕಂಠದಲ್ಲಿ ಹಾಡಿದ್ದು, ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾದ ಕ್ಷಣದಿಂದಲೇ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಈ ಹಾಡಿಗೆ ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಚಿತ್ರದ ಇತರೆ ಹಾಡುಗಳು ಜನಪ್ರಿಯವಾಗಿದ್ದು, ಇದೀಗ ‘ನಾದನಿನಾದ’ ಕೂಡ ಸಂಗೀತಪ್ರಿಯರ ಗಮನ ಸೆಳೆಯುತ್ತಿದೆ.
ಅಮೋಘ ಅಭಿನಯದ ಮೂಲಕ ಅಪಾರ ಅಭಿಮಾನಿ ಬಳಗ ಹೊಂದಿರುವ ಗಣೇಶ್ ನಾಯಕನಾಗಿ ನಟಿಸಿರುವ ‘ಬೃಂದಾವಿಹಾರಿ’ ಚಿತ್ರವನ್ನು ಸಮೃದ್ಧಿ ವಿ. ಮಂಜುನಾಥ್ ಅದ್ಧೂರಿಯಾಗಿ ನಿರ್ಮಿಸಿದ್ದು, ಶ್ರೀನಿವಾಸರಾಜು ನಿರ್ದೇಶನ ಮಾಡಿದ್ದಾರೆ. ಗಣೇಶ್ ಮತ್ತು ಶ್ರೀನಿವಾಸರಾಜು ಕಾಂಬಿನೇಶನ್ನಲ್ಲಿ ಈ ಹಿಂದೆ ಮೂಡಿಬಂದಿದ್ದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಪಡೆದು ಯಶಸ್ವಿಯಾಗಿತ್ತು. ಇದೀಗ ಇದೇ ಜೋಡಿ ಮತ್ತೊಮ್ಮೆ ಒಂದಾಗಿರುವುದರಿಂದ ‘ಬೃಂದಾವಿಹಾರಿ’ ಸಿನಿಮಾ ಕುರಿತು ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ.
ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುವ ಮೂಲಕ ಗುರುತಿಸಿಕೊಂಡಿರುವ ನಿರ್ಮಾಪಕ ಸಮೃದ್ಧಿ ಮಂಜುನಾಥ್, ಯಾವುದೇ ಕೊರತೆ ಇಲ್ಲದಂತೆ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನೀಡಿದ್ದು, ವೆಂಕಟ್ ಪ್ರಸಾದ್ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಗಣೇಶ್ ಅವರಿಗೆ ನಾಯಕಿಯರಾಗಿ ದೇವಿಕಾ ಭಟ್ ಹಾಗೂ ಮಾಳವಿಕ ಶರ್ಮ ಅಭಿನಯಿಸಿದ್ದು, ವಿಭಿನ್ನ ತಾರಾಬಳಗದೊಂದಿಗೆ ಸಿನಿಮಾ ಮೂಡಿಬಂದಿದೆ.
‘ನಾದನಿನಾದ’ ಹಾಡಿನ ಮೂಲಕ ‘ಬೃಂದಾವಿಹಾರಿ’ ಮತ್ತಷ್ಟು ಸದ್ದು ಮಾಡುತ್ತಿದ್ದು, ಗಣೇಶ್ ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ಕುತೂಹಲ ಹೆಚ್ಚಾಗಿದೆ. ಸಂಗೀತ, ಪ್ರೀತಿ ಹಾಗೂ ಮನರಂಜನೆಯ ಅಂಶಗಳನ್ನು ಒಳಗೊಂಡಿರುವ ಈ ಚಿತ್ರವನ್ನು ತೆರೆಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ. ಸಮೃದ್ಧಿ ವಿ. ಮಂಜುನಾಥ್ ನಿರ್ಮಾಣದ, ಶ್ರೀನಿವಾಸರಾಜು ನಿರ್ದೇಶನದ ‘ಬೃಂದಾವಿಹಾರಿ’ ಅಕ್ಟೋಬರ್ 16ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.