Cinema News
ಕಡಲ ತೀರ ಭಾರ್ಗವ ತಂಡದಿಂದ ಮತ್ತೊಂದು ಹೊಸ ಸಿನಿಮಾ – ‘ಸುಮ್ನೆ ತಮಾಷೆಗೆ’
ಸ್ಯಾಂಡಲ್‌ವುಡ್‌ನಲ್ಲಿ ಹೊಸ ಪ್ರತಿಭೆಗಳ ಆಗಮನ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವಿಭಿನ್ನ ಕಥೆ ಹಾಗೂ ಕುತೂಹಲಕಾರಿ ಶೀರ್ಷಿಕೆಗಳ ಮೂಲಕ ಹೊಸಬರು ಸಿನಿಪ್ರಿಯರ ಗಮನ ಸೆಳೆಯುತ್ತಿದ್ದಾರೆ. ಆ ಸಾಲಿಗೆ ಈಗ ಸೇರ್ಪಡೆಯಾಗಿರುವ ಸಿನಿಮಾ ‘ಸುಮ್ನೆ ತಮಾಷೆಗೆ’. ವಿಭಿನ್ನ ಶೈಲಿಯ ಕಥಾಹಂದರದೊಂದಿಗೆ ಮೂಡಿಬರುತ್ತಿರುವ ಈ ಚಿತ್ರ ಈಗಾಗಲೇ ಸಿನಿರಂಗದಲ್ಲಿ ಕುತೂಹಲ ಮೂಡಿಸಿದೆ.
ಇತ್ತೀಚೆಗೆ ಬೆಂಗಳೂರಿನ ಜೆಪಿ ನಗರದ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ಸರಳವಾಗಿ ಹಾಗೂ ಭಕ್ತಿಭಾವದಿಂದ ನೆರವೇರಿತು. ಚಿತ್ರದ ತಂಡ ಪೂಜೆಯಲ್ಲಿ ಭಾಗಿಯಾಗಿ ಸಿನಿಮಾದ ಯಶಸ್ಸಿಗಾಗಿ ದೇವರ ಆಶೀರ್ವಾದ ಪಡೆದರು. ಈ ಮೂಲಕ ‘ಸುಮ್ನೆ ತಮಾಷೆಗೆ’ ಚಿತ್ರದ ಅಧಿಕೃತ ಚಾಲನೆ ದೊರಕಿದೆ.
ಈ ಹಿಂದೆ ಕಡಲ ತೀರದ ಭಾರ್ಗವ ನಿರ್ದೇಶಿಸಿದ್ದ ‘ಪನ್ನಗ ಮತ್ತು ಅವರ ಸ್ನೇಹಿತರು’ ಹಾಗೂ ಯಾವ ಮೋಹನ ಮುರಳಿ ಕರೆಯಿತು ಸಿನಿಮಾದ ನಿರ್ದೇಶಕ ವಿಶ್ವಾಸ್ ಕೃಷ್ಣ ಅವರು ಈ ಚಿತ್ರಕ್ಕೆ ನಿರ್ಮಾಣ ಸಹಕಾರ ನೀಡುತ್ತಿದ್ದಾರೆ. ಘಟಕಲ ಸುರೇಶ್ ಬಾಬು ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿ ಆಕ್ಷನ್ ಕಟ್ ಹೇಳುತ್ತಿದ್ದು, ಹೊಸತನದ ಕಥೆಯನ್ನು ಪ್ರೇಕ್ಷಕರ ಮುಂದೆ ತರುವ ತಯಾರಿಯಲ್ಲಿದ್ದಾರೆ.
ಚಿತ್ರದಲ್ಲಿ ಪಟೇಲ್ ವರುಣ್ ರಾಜು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅವರ ಜೊತೆಗೆ ಯುವ ಪ್ರತಿಭೆಗಳಾದ ಹರೀಶ್, ದರ್ಶನ್ ಮತ್ತು ಮಾಧವ ನಟಿಸುತ್ತಿದ್ದಾರೆ. ಸಿನಿಮಾಗೆ ಸಾಮ್ರಾಟ್ ಸಂಗೀತ ಸಂಯೋಜನೆ ನೀಡುತ್ತಿದ್ದು, ಪುನೀತ್ ಓಂಕಾರ್ ಸ್ಟಂಟ್ ಕೊರಿಯೋಗ್ರಫಿ ಜವಾಬ್ದಾರಿ ಹೊತ್ತಿದ್ದಾರೆ. ಹೊಸಬರ ಕನಸಿನ ಕೂಸಾಗಿರುವ ‘ಸುಮ್ನೆ ತಮಾಷೆಗೆ’ ಸಿನಿಮಾ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದೆ.