Cinema News
‘ಅನಿರೀಕ್ಷಿತ ಅತಿಥಿಗಳು’ ಚಿತ್ರಕ್ಕೆ ಹಾಡುಗಳ ಸಾಥ್; ಸೆ.18ಕ್ಕೆ ಕ್ರೈಮ್ ಥ್ರಿಲ್ಲರ್ ತೆರೆಗೆ
‘ಅನಿರೀಕ್ಷಿತ ಅತಿಥಿಗಳು’ ಎಂಬ ಹೆಸರೇ ಕುತೂಹಲ ಮೂಡಿಸುತ್ತಿರುವ ನಡುವೆ ಚಿತ್ರದ ಹಾಡುಗಳು ಮತ್ತಷ್ಟು ನಿರೀಕ್ಷೆ ಹೆಚ್ಚಿಸಿವೆ. ಕ್ರೈಮ್ ಜಾನರ್‌ಗೂ ಚಿತ್ರದ ಶೀರ್ಷಿಕೆಗೂ ನೇರ ಸಂಬಂಧವಿಲ್ಲ ಎನ್ನಿಸುವ ಸಂದರ್ಭದಲ್ಲಿ, ವಿಭಿನ್ನ ರೀತಿಯಲ್ಲಿ ಮೂಡಿಬಂದಿರುವ ಹಾಡುಗಳು ಸಿನಿಮಾದ ಕಥೆಯ ಬಗ್ಗೆ ಆಸಕ್ತಿ ಮೂಡಿಸಿವೆ. ಹಾಡುಗಳ ಬಿಡುಗಡೆ ಹಿನ್ನೆಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರ ಸೆಪ್ಟೆಂಬರ್ 18ರಂದು ತೆರೆಗೆ ಬರಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿತು. ನವ ನಿರ್ದೇಶಕ ಮನೋಜ್ ಅಣ್ಣಯ್ಯ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾವನ್ನು ಬಿ. ವಿನೋದ್ ಕುಮಾರ್ ನಿರ್ಮಿಸಿದ್ದು, ಆರು ಪ್ರಮುಖ ಪಾತ್ರಗಳನ್ನು ಕೇಂದ್ರವಾಗಿಟ್ಟುಕೊಂಡ ಕಥೆ ಇದಾಗಿದೆ.
ಚಿತ್ರದಲ್ಲಿ ಒಟ್ಟು ನಾಲ್ಕು ಪ್ರಮುಖ ಹಾಡುಗಳಿದ್ದು, ಸ್ವಾಮಿನಾಥನ್ ಆರ್.ಕೆ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಒಂದು ಲಿರಿಕಲ್ ಹಾಡು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು, ಅದರ ವಿಡಿಯೋವನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಲಾಯಿತು. ಮತ್ತೊಂದು ಸಂಪೂರ್ಣ ಆಂಗ್ಲ ಭಾಷೆಯ ಪಾಪ್ ಗೀತೆಗೆ ಗಾಯಕಿ ಸಿರಿಕಟ್ಟೆ ಧ್ವನಿ ನೀಡಿದ್ದಾರೆ. ಕಥೆಯ ನಿರ್ದಿಷ್ಟ ಸನ್ನಿವೇಶಕ್ಕೆ ಹೊಂದಿಕೆಯಾಗುವಂತೆ ಈ ಹಾಡನ್ನು ರೂಪಿಸಲಾಗಿದೆ ಎಂದು ನಿರ್ದೇಶಕ ಮನೋಜ್ ಅಣ್ಣಯ್ಯ ವಿವರಿಸಿದರು. ಸಿರಿಕಟ್ಟೆ ಚಿತ್ರದಲ್ಲಿ ಎರಡು ಹಾಡುಗಳನ್ನು ಹಾಡಿದ್ದು, ಈ ಹಿಂದೆ ‘ಹೆಜ್ಜಾರು’ ಹಾಗೂ ‘ಮಾಂಗ್ ದ ಯಂಗ್’ ಚಿತ್ರಗಳಲ್ಲೂ ಹಾಡಿರುವುದಾಗಿ ತಿಳಿಸಿದರು. ಮತ್ತೊಂದು ಹಾಡಿನ ಪಲ್ಲವಿಯನ್ನು ಹರ್ಷಿತಾ ದೇವನಾಥ್ ಹಾಗೂ ರಜತ್ ಹೆಗ್ಡೆ ವೇದಿಕೆಯಲ್ಲಿ ಹಾಡಿ ಕೇಳಿಸಿದರು.
‘ಅನಿರೀಕ್ಷಿತ ಅತಿಥಿಗಳು’ ಒಂದು ದಿನದ ಅವಧಿಯಲ್ಲಿ ಗೆಸ್ಟ್‌ಹೌಸ್‌ನಲ್ಲಿ ನಡೆಯುವ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ನಿರ್ಮಾಪಕ ಬಿ. ವಿನೋದ್ ಕುಮಾರ್ ತಮ್ಮ ಸಿನಿಪಯಣದ ಆರಂಭದ ದಿನಗಳನ್ನು ನೆನಪಿಸಿಕೊಂಡು, ಸಹಾಯಕ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನಿರ್ದೇಶಕ ಮನೋಜ್ ಅಣ್ಣಯ್ಯ ಅವರ ಪರಿಚಯವಾಯಿತು ಎಂದು ಹೇಳಿದರು. ನಟ ವಿವೇಕ್ ಸಿಂಹ ನಿರ್ದೇಶಕರೊಂದಿಗೆ ಸುಮಾರು 15 ವರ್ಷಗಳ ಸ್ನೇಹವಿದ್ದು, ತಾವೆಲ್ಲರೂ ರಂಗಭೂಮಿಯಿಂದ ಬಂದವರು ಎಂದು ತಿಳಿಸಿದರು. ‘ಮೈತ್ರಿ’ ಖ್ಯಾತಿಯ ಜಗ್ಗಿ ಮಾತನಾಡಿ, ತಾವು ‘ರಾಜರು’ ಚಿತ್ರದಲ್ಲಿ ನಟಿಸುತ್ತಿದ್ದ ಸಮಯದಲ್ಲಿ ಅಸೋಸಿಯೇಟ್ ಕ್ಯಾಮರಾಮ್ಯಾನ್ ಆಗಿದ್ದವರೇ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ನಿರ್ದೇಶಕರು ಪ್ರತಿಯೊಂದು ಪಾತ್ರವನ್ನೂ ಅಚ್ಚುಕಟ್ಟಾಗಿ ರೂಪಿಸಿದ್ದಾರೆ ಎಂದರು. ನಾಯಕಿ ಸಂಪ್ರತಿ ಆಳ್ವ, ತಮ್ಮ ಪಾತ್ರಕ್ಕೆ ಧ್ವನಿ ನೀಡಿರುವ ಸಿರಿಕಟ್ಟೆ ಅವರನ್ನು ವಿಶೇಷವಾಗಿ ಶ್ಲಾಘಿಸಿದರು.
ನಿರ್ದೇಶಕ ಮನೋಜ್ ಅಣ್ಣಯ್ಯ ಮಾತನಾಡಿ, ತಾವು ಫನೀನಾಸಂ ವಿದ್ಯಾರ್ಥಿಯಾಗಿದ್ದು, ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿರುವುದಾಗಿ ಹೇಳಿದರು. ಅವಕಾಶಕ್ಕಾಗಿ ಸ್ವತಃ ಎರಡು ಕಿರುಚಿತ್ರಗಳನ್ನು ನಿರ್ಮಿಸಿದ್ದು, ಅವುಗಳ ಮೂಲಕ ಪರಿಚಯವಾದ ಛಾಯಾಗ್ರಾಹಕ ಹಾಗೂ ಸಂಗೀತ ನಿರ್ದೇಶಕರು ಈ ಸಿನಿಮಾದಲ್ಲೂ ತಮ್ಮೊಂದಿಗೆ ಕೈಜೋಡಿಸಿದ್ದಾರೆ ಎಂದರು. 1964ರ ಹಿನ್ನೆಲೆಯಲ್ಲಿದ್ದ ತಮ್ಮ ಕಿರುಚಿತ್ರವನ್ನು ವೀಕ್ಷಿಸಿದ ವಿನೋದ್ ಕುಮಾರ್ ಸಿನಿಮಾ ನಿರ್ಮಿಸಲು ಮುಂದೆ ಬಂದರು ಎಂದು ತಿಳಿಸಿದರು. ಆರಂಭದಲ್ಲಿ ಟ್ರೇಲರ್ ಬಿಡುಗಡೆ ಮೂಲಕ ಸುದ್ದಿಗೋಷ್ಠಿ ನಡೆಸುವ ಯೋಜನೆಯಿದ್ದರೂ, ಹಾಡುಗಳೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದೇವೆ ಎಂದರು. ಗೆಸ್ಟ್‌ಹೌಸ್‌ಗೆ ಅನಿರೀಕ್ಷಿತವಾಗಿ ಆಗಮಿಸುವ ಆರು ಮಂದಿ ಅತಿಥಿಗಳ ಸುತ್ತ ನಡೆಯುವ ಕಥೆಯಲ್ಲಿ ಕ್ರೈಮ್ ಜೊತೆಗೆ ಸಾಮಾಜಿಕ ವಿಚಾರವೂ ಇರಲಿದೆ ಎಂದು ಹೇಳಿದರು. ಚಿತ್ರತಂಡವು 25 ದಿನಗಳ ಕಾಲ ಬೇಲೂರಿನಲ್ಲಿ ಚಿತ್ರೀಕರಣ ನಡೆಸಿದ್ದು, ಸಾಹಸ ನಿರ್ದೇಶಕ ಶ್ರೀರಾಮ್ ಸಿನಿಮಾದಲ್ಲಿ ನಾಲ್ಕು ಫೈಟ್‌ಗಳಿವೆ ಎಂದು ಮಾಹಿತಿ ನೀಡಿದರು. ನಟರಾದ ಶ್ರೀದತ್ತ, ದೈವೀಕ್ ನಾಗ್, ನವ ನಟಿ ಹರಿತಾ ಷಾ ಸೇರಿದಂತೆ ಗೋಕುಲ್ ಚಕ್ರವರ್ತಿ ಹಾಗೂ ಇತರ ಪೋಷಕ ಕಲಾವಿದರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.