Cinema News

ಅಜಯ್ ರಾವ್–ಬೃಂದಾ ಆಚಾರ್ಯ ಜೋಡಿಯ ‘ಅಮೋರಾ’ ಹಾಡು ಬಿಡುಗಡೆ

Published

on

ನಿರ್ದೇಶಕ ಶಿವತೇಜಸ್ ಅವರ ಹೊಸ ಸಿನಿಮಾ ‘ಪಾರ್ಟ್ನರ್’ ತನ್ನ ಮೊದಲ ವಿಶೇಷ ಹಾಡು ‘ಅಮೋರಾ’ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಮಳೆ, ಧೈರ್ಯಂ ಹಾಗೂ ದಿಲ್ ಪಸಂದ್ ಬಳಿಕ ಅವರು ನಿರ್ದೇಶಿಸಿರುವ ಈ ಚಿತ್ರದಲ್ಲಿ ಅಜಯ್ ರಾವ್ ಮತ್ತು ಬೃಂದಾ ಆಚಾರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜಂಜಿ ಲವ್, ಬ್ರೇಕ್‌ಅಪ್ ಹಾಗೂ ಲಿವ್-ಇನ್ ಸಂಬಂಧಗಳಂತಹ ಸಮಕಾಲೀನ ವಿಚಾರಗಳನ್ನು ಒಳಗೊಂಡಿರುವ ಈ ಸಿನಿಮಾ, ಜೀವನದ ನೈಜ ಮೌಲ್ಯಗಳನ್ನು ಹೇಳುವ ಪ್ರಯತ್ನ ಮಾಡುತ್ತಿದೆ. ನಾಗಾರ್ಜುನ ಶರ್ಮಾ ಸಾಹಿತ್ಯ ಬರೆದಿರುವ ‘ಅಮೋರಾ’ ಹಾಡಿಗೆ ಕುನಾಲ್ ಗಾಂಜಾವಾಲಾ ಧ್ವನಿಯಾಗಿದ್ದು, ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ. ಹಾಡಿನ ಬಿಡುಗಡೆ ಸಮಾರಂಭದಲ್ಲಿ ನಿರ್ಮಾಪಕ ಹರೀಶ್ ದೇವಿತಂದ್ರೆ ಅವರ ಗುರುಗಳಾದ ನಾಗಭೂಷಣ್ ದಂಪತಿ ಹಾಡನ್ನು ಅನಾವರಣಗೊಳಿಸಿದರು.

 

ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಅಜಯ್ ರಾವ್, ಈ ಸಿನಿಮಾ ತಮ್ಮ ಹೃದಯಕ್ಕೆ ತುಂಬ ಹತ್ತಿರವಾಗಿದ್ದು, ಆರಂಭದಿಂದಲೇ ವಿಶೇಷ ಅನುಭವ ನೀಡಿದ ಚಿತ್ರಗಳಲ್ಲಿ ಇದೂ ಒಂದು ಎಂದು ಹೇಳಿದರು. ಕಥೆಯಲ್ಲಿರುವ ಮಾನವೀಯ ಮೌಲ್ಯಗಳು ಮತ್ತು ಭಾವನಾತ್ಮಕ ಅಂಶಗಳು ಪ್ರೇಕ್ಷಕರ ಮನಸ್ಸನ್ನು ತಟ್ಟಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ತಮ್ಮ ಸಿನಿ ಪಯಣದಲ್ಲಿ ಈ ಸಿನಿಮಾ ವಿಶೇಷ ಸ್ಥಾನ ಪಡೆಯಲಿದೆ ಎಂದರು.

 

 

 

 

 

 

ನಿರ್ದೇಶಕ ಶಿವತೇಜಸ್ ಮಾತನಾಡಿ, ನಿರ್ಮಾಪಕ ಹರೀಶ್ ದೇವಿತಂದ್ರೆ ಅವರೊಂದಿಗೆ ದಿಲ್ ಪಸಂದ್ ಚಿತ್ರದ ವೇಳೆ ಆರಂಭವಾದ ಸ್ನೇಹವೇ ಈ ಸಿನಿಮಾಗೆ ಕಾರಣವಾಯಿತು ಎಂದರು. ಪ್ರತಿಯೊಬ್ಬರ ಜೀವನದಲ್ಲೂ ಒಬ್ಬ “ಪಾರ್ಟ್ನರ್” ಇರುತ್ತಾರೆ ಎಂಬ ವಿಚಾರವನ್ನು ಆಧಾರವಾಗಿಸಿಕೊಂಡು ಕಥೆ ರೂಪಿಸಲಾಗಿದ್ದು, ಇಂದಿನ ಯುವಜನರ ಸಂಬಂಧಗಳ ಸುತ್ತ ಸಿನಿಮಾ ಸಾಗುತ್ತದೆ ಎಂದು ತಿಳಿಸಿದರು. ನಿರ್ಮಾಪಕ ಹರೀಶ್ ದೇವಿತಂದ್ರೆ, ಕುಟುಂಬ ಸಮೇತ ಕುಳಿತು ನೋಡುವಂತಹ ಮನರಂಜನಾ ಚಿತ್ರವನ್ನು ನಿರ್ಮಿಸಿರುವ ಹೆಮ್ಮೆ ವ್ಯಕ್ತಪಡಿಸಿದರು. ನಾಯಕಿ ಬೃಂದಾ ಆಚಾರ್ಯ, ತಮ್ಮ ಸಿನಿ ಪಯಣದ ಅತ್ಯುತ್ತಮ ಹಾಡುಗಳಲ್ಲಿ ‘ಅಮೋರಾ’ ಕೂಡ ಒಂದಾಗಿದೆ ಎಂದು ಸಂತಸ ಹಂಚಿಕೊಂಡರು.

 

 

 

 

 

 

 

ಹೆಚ್.ಪಿ.ಆರ್. ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಸುಜ್ಞಾನ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಮಾಡಿದ್ದು, ಚಿತ್ರದ ನಾಲ್ಕು ಹಾಡುಗಳಿಗೆ ಕವಿರಾಜ್, ಪ್ರಮೋದ್ ಮರವಂತೆ ಹಾಗೂ ನಾಗಾರ್ಜುನ ಶರ್ಮಾ ಸಾಹಿತ್ಯ ರಚಿಸಿದ್ದಾರೆ. ಸಂಗೀತ ನಿರ್ದೇಶಕ ನಕುಲ್ ಅಭಯಂಕರ್, ಸಾಹಿತಿ ನಾಗಾರ್ಜುನ ಶರ್ಮಾ, ಕೊರಿಯೋಗ್ರಾಫರ್ ಮುರಳಿ ಹಾಗೂ ನಟ ಅರವಿಂದ್ ರಾವ್ ಕಾರ್ಯಕ್ರಮದಲ್ಲಿ ಚಿತ್ರದ ಕುರಿತ ತಮ್ಮ ಅನುಭವಗಳನ್ನು ಹಂಚಿಕೊಂಡರು.

Spread the love

Copyright © 2019 PopcornKannada.com