Cinema News
ಗಾಳಿಪಟದ ಮೂರನೇ ನಾಯಕಿ ಆದಿತಿ
ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಸಿನಿಮಾದ ಚಿತ್ರೀಕರಣ ಇನ್ನೇನು ಆರಂಭವಾಗಲಿದ್ದು, ಆ ಸಿನಿಮಾಗೆ ಈಗಾಗಲೇ ಇಬ್ಬರು ನಾಯಕಿಯರು ಆಯ್ಕೆಯಾಗಿದ್ದರು. ಈಗ ಮೂರನೇ ನಾಯಕಿಯಾಗಿ ಆದಿತಿ ಪ್ರಭುದೇವ ಸೆಲೆಕ್ಟ್ ಆಗಿದ್ದಾರೆ.
ಸದ್ಯ ಸಿಂಗ ಸಿನಿಮಾದ ಶ್ಯಾನೆ ಟಾಪಾಗವ್ಳೆ ಹಾಡಿನ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಫೇವರಿಟ್ ಆಗಿರುವ ಆದಿತಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಯೋಗರಾಜ್ ಭಟ್ ಅವರ ಗರಡಿ ಸೇರಿದ್ದಾರೆ. ಗಾಳಿಪಟ-2 ಸಿನಿಮಾದಲ್ಲಿ ಶರಣ್, ಲೂಸಿಯಾ ಪವನ್‌ಕುಮಾರ್, ಆಪರೇಶನ್ ಅಲಮೇಲಮ್ಮ ಖ್ಯಾತಿಯ ರಿಷಿ ನಾಯಕರಾಗಿದ್ದಾರೆ. ಈಗಾಗಲೇ ಸೋನಲ್ ಮಂಥೆರೋ, ಶರ್ಮಿಳಾ ಮಾಂಡ್ರೆ ನಾಯಕಿಯರೆಂದು ಈ ಹಿಂದೆಯೇ ತೀರ್ಮಾನವಾಗಿತ್ತು.
ಈ ಸಿನಿಮಾ ಮೂಲಕ ಮೊದಲ ಬಾರಿಗೆ ಅರ್ಜುನ್ ಜನ್ಯ ಮತ್ತು ಯೋಗರಾಜ್ ಭಟ್ ಒಂದಾಗಿದ್ದಾರೆ. ಈ ಹಿಂದೆ ಅರ್ಜುನ್ ಜನ್ಯ ಯೋಗರಾಜ್ ಭಟ್ ಬರೆದ ಹಾಡುಗಳಿಗೆ ಸಂಗೀತ ನೀಡಿದ್ದರು. ಆದರೆ ಗಾಳಿಪಟ-2 ಮೂಲಕ ಯೋಗರಾಜ್ ಭಟ್ ನಿರ್ದೇಶನದ ಸಿನಿಮಾಗೆ ಅರ್ಜುನ್ ಜನ್ಯ ಮೊದಲ ಬಾರಿಗೆ ಸಂಗೀತ ನೀಡುತ್ತಿದ್ದಾರೆ. ಈಗಾಗಲೇ ಹಾಡುಗಳ ಮುದ್ರಣ ಕೆಲಸ ಮುಗಿದಿದ್ದು, ಸದ್ಯದಲ್ಲೇ ಭಟ್ಟರು ಶೂಟಿಂಗ್‌ಗೆ ಹೋಗಲಿದ್ದಾರೆ.
ಒಟ್ಟಿನಲ್ಲಿ ದೊಡ್ಡ ತಾರಾಗಣದ ಜತೆ ಯೋಗರಾಜ್ ಭಟ್ಟರು ಗಾಳಿಪಟವನ್ನು ಸದ್ಯದಲ್ಲೇ ಹಾರಿಸಲಿದ್ದಾರೆ.