Cinema News
‘ರಾಮರಸ’ ಚಿತ್ರಕ್ಕೆ ಅದಾ ಶರ್ಮಾ ಎಂಟ್ರಿ; ವಿಭಿನ್ನ ಪಾತ್ರದಲ್ಲಿ ಬಾಲಿವುಡ್ ನಟಿಯ ಕಮಾಲ್!
ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿರುವ ಬಹುನಿರೀಕ್ಷಿತ ‘ರಾಮರಸ’ ಚಿತ್ರ ಇದೀಗ ಚಿತ್ರೀಕರಣದ ಸಂಪೂರ್ಣ ಹಂತವನ್ನು ಯಶಸ್ವಿಯಾಗಿ ಮುಗಿಸಿ, ಪೋಸ್ಟ್-ಪ್ರೊಡಕ್ಷನ್ ಕೆಲಸಗಳತ್ತ ಮುನ್ನಡೆದಿದೆ. ವಿಭಿನ್ನ ಕಥಾಹಂದರ, ಅದ್ಧೂರಿ ತಾರಾಗಣ ಹಾಗೂ ಉನ್ನತ ತಾಂತ್ರಿಕ ಗುಣಮಟ್ಟದೊಂದಿಗೆ ಸಿದ್ಧವಾಗುತ್ತಿರುವ ಈ ಸಿನಿಮಾ ಪ್ರೇಕ್ಷಕರಿಗೆ ನಿರೀಕ್ಷೆಗೂ ಮೀರಿದ ಅನುಭವ ನೀಡುವ ಭರವಸೆ ಮೂಡಿಸಿದೆ. ಇದೇ ಸಂದರ್ಭದಲ್ಲಿ ಚಿತ್ರತಂಡ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದು, ಬಾಲಿವುಡ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟಿ ಅದಾ ಶರ್ಮಾ ‘ರಾಮರಸ’ ತಂಡವನ್ನು ಸೇರಿಕೊಂಡಿದ್ದಾರೆ.
ಚಿತ್ರದಲ್ಲಿ ಅದಾ ಶರ್ಮಾ ಅತ್ಯಂತ ವಿಭಿನ್ನ ಹಾಗೂ ಪ್ರಭಾವಶಾಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಪಾತ್ರ ಸಿನಿಮಾದ ಕಥೆಗೆ ಹೊಸ ಆಯಾಮ ನೀಡಲಿದೆ ಎನ್ನಲಾಗಿದೆ. ಪರಾಶಕ್ತಿಯ ವಿವಿಧ ರೂಪಗಳು ಹಾಗೂ ದಶ ಮಹಾವಿದ್ಯೆಯ ಪರಿಕಲ್ಪನೆಯೊಂದಿಗೆ ಸಾಗುವ ಚಿತ್ರದ ಕಥೆಯಲ್ಲಿ ಅದಾ ಶರ್ಮಾ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಸದ್ಯ ಕುತೂಹಲಕ್ಕೆ ಕಾರಣವಾಗಿದೆ. “ತಾಯಿ ಯಾವ ರೂಪದಲ್ಲಿ ಪ್ರತ್ಯಕ್ಷಳಾಗಲಿದ್ದಾಳೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು” ಎಂಬ ರೀತಿಯಲ್ಲಿ ಚಿತ್ರತಂಡ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ರಹಸ್ಯವಾಗಿಯೇ ಉಳಿಸಿಕೊಂಡಿದೆ.
‘ರಾಮರಸ’ ಈಗಾಗಲೇ ದೊಡ್ಡ ತಾರಾಬಳಗವನ್ನು ಹೊಂದಿದ್ದು, ಬಿಗ್ ಬಾಸ್ ಕನ್ನಡ ವಿಜೇತ ಕಾರ್ತಿಕ್ ಮಹೇಶ್, ಡೈನಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್, ಕಾಮಿಡಿ ಕಿಂಗ್ ಶರಣ್ ಹಾಗೂ ಹೆಬ್ಬಾ ಪಟೇಲ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಕೃಷ್ಣ ಕುಮಾರ್ (KK) ಛಾಯಾಗ್ರಹಣ, ಬಿ.ಜೆ. ಭರತ್ ಸಂಗೀತ, ಅರ್ಜುನ್ ಕಿಟ್ಟು ಸಂಕಲನ, ಡಾ. ನಾಗೇಂದ್ರ ಪ್ರಸಾದ್, ನಾಗಾರ್ಜುನ್ ಶರ್ಮಾ ಹಾಗೂ ಪುನೀತ್ ರಂಗಸ್ವಾಮಿ ಸಾಹಿತ್ಯ, ಗುರು ದೇಶಪಾಂಡೆ ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುರು ದೇಶಪಾಂಡೆ ಮತ್ತು ವಿಕ್ರಂ ಆರ್ಯ ಅವರು ಜಿ ಸಿನಿಮಾಸ್ ಪ್ರೊಡಕ್ಷನ್ ಹಾಗೂ ಸೆವೆನ್ ಸ್ಟಾರ್ ಮೂವೀಸ್ ಸಹಯೋಗದಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಚಿತ್ರೀಕರಣ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸದ್ಯ ಎಡಿಟಿಂಗ್, VFX ಹಾಗೂ ಸೌಂಡ್ ಡಿಸೈನಿಂಗ್ ಸೇರಿದಂತೆ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಇದೇ ವೇಳೆ ಚಿತ್ರದಲ್ಲಿನ ಇನ್ನೂ ಹಲವು ಪ್ರಮುಖ ಪಾತ್ರಗಳು ಹಾಗೂ ಪ್ರೇಕ್ಷಕರು ಊಹಿಸದ ಕೆಲವು ಸ್ಟಾರ್ ನಟರ ವಿವರಗಳನ್ನು ಹಂತ ಹಂತವಾಗಿ ಬಹಿರಂಗಪಡಿಸುವುದಾಗಿ ಚಿತ್ರತಂಡ ತಿಳಿಸಿದೆ. ಶೀಘ್ರದಲ್ಲೇ ‘ರಾಮರಸ’ ಚಿತ್ರದ ಅಧಿಕೃತ ಟೀಸರ್ ಬಿಡುಗಡೆ ದಿನಾಂಕ ಹಾಗೂ ಮುಂದಿನ ಪಾತ್ರಗಳ ಫಸ್ಟ್ ಲುಕ್ ಪೋಸ್ಟರ್‌ಗಳು ಹೊರಬರುವ ನಿರೀಕ್ಷೆಯಿದೆ.