Cinema News

ಆಕ್ಷನ್ ಥ್ರಿಲ್ಲರ್ “ಫೀನಿಕ್ಸ್” ಟೀಸರ್ ಬಿಡುಗಡೆ

Published

on

‘ಫೀನಿಕ್ಸ್’ ಗ್ರೀಕ್ ಮೂಲದ ಒಂದು ಕಾಲ್ಪನಿಕ ಪಕ್ಷಿ. ಅದು ಭಸ್ಮವಾದರೂ ಮತ್ತೆ ಎದ್ದು ಬರುತ್ತೆ ಎಂದು ಹೇಳುತ್ತಾರೆ. ಅಂಥದೇ ಕಂಟೆಂಟ್ ಇಟ್ಟುಕೊಂಡು ತಯಾರಾದ ಚಿತ್ರ ಫೀನಿಕ್ಸ್. ಮೋಸ ಹೋಗುವವರಿದ್ದ ಹಾಗೆ ಮೋಸ ಮಾಡುವವರೂ ಇರುತ್ತಾರೆ, ಅದರಲ್ಲೂ‌ ಮೋಸಗಾರರೇ ಜಾಸ್ತಿ ಎಂಬ ವಿಷಯದ ಮೇಲೆ ಫೀನಿಕ್ಸ್ ಚಿತ್ರ ತಯಾರಾಗಿದೆ.
ಹೊಸೂರು ವೆಂಕಟ್ ಅವರ ಕಥೆ, ಚಿತ್ರಕಥೆ, ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದ ಆಡಿಯೋ, ಟೀಸರ್ ಬಿಡುಗಡೆ ಸಮಾರಂಭ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ಗೋಕುಲ್ ಕೃಷ್ಣ ಫಿಲಂಸ್ ಲಾಂಛನದಲ್ಲಿ ಹೊಸೂರಿನ ಶ್ರೀನಿವಾಸ್‌ ಸಿ. ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಎ.ಟಿ. ರವೀಶ್ ಅವರ ಸಂಗೀತ ಸಂಯೋಜನೆ, ಗೋಪಿ, ಸಬ್ರಮತಿ, ಗೌತಂ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

 

 

ಕಾರ್ಯಕ್ರಮಕ್ಕೂ ಮುನ್ನ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಹೊಸೂರು ವೆಂಕಟ್ ಈ ಹಿಂದೆ ನಾನು ಗಡಿ ಎಂಬ ಚಿತ್ರ‌ ನಿರ್ದೇಶಿಸಿದ್ದೆ. ನಿರ್ಮಾಪಕ ಶ್ರೀನಿವಾಸ್ ಅವರ ನನ್ನ ಸ್ನೇಹಿತರು. ಇದು ನೈಜ ಘಟನೆ ಆಧರಿಸಿದ ಚಿತ್ರ. ಗುರುತು, ಪರಿಚಯ ಇಲ್ಲದವರ ಬಳಿ ಹೋಗಿ ಮೋಸಕ್ಕೊಳಗಾಗಬೇಡಿ ಎಂಬ ಮೆಸೇಜನ್ನಿಟ್ಟುಕೊಂಡು ಮಾಡಿದ ಚಿತ್ರವಿದು. ಅದರಲ್ಲೂ ಈಗಿನ ಯುವಜನರಿಗೆ ಉತ್ತಮ ಸಂದೇಶವೂ ಸಹ ಈ ಚಿತ್ರದಲ್ಲಿದೆ. ಉಡುಪಿ, ಮಂಗಳೂರು, ಗೋವಾ ಹಾಗೂ ಬೆಂಗಳೂರು ಸುತ್ತಮುತ್ತ 45 ದಿನಗಳವರೆಗೆ ಚಿತ್ರೀಕರಣ ಮಾಡಿದ್ದೇವೆ ಎಂದು ಹೇಳಿದರು.

 

 

ಈಗಾಗಲೇ ಹಿರಿಯ ನಿರ್ದೇಶಕ ಓಂ ಪ್ರಕಾಶರಾವ್ ಅವರೂ ಇದೇ ಹೆಸರಿನಲ್ಲಿ ಚಿತ್ರ ಮಾಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸುತ್ತ ಅವರಿಗೆ‌ ನಾವು ಆರಂಭದಲ್ಲೇ ಮಾಹಿತಿ ನೀಡಿದ್ದೇವೆ. ಆದರೆ ಯಾವುದೇ ಉತ್ತರ ಬಂದಿಲ್ಲ. ಚರ್ಚೆಗೆ ಬಂದರೆ ಮುಂದೇನು ಮಾಡಬೇಕೆಂದು ನಿರ್ಧರಿಸುತ್ತೇವೆ ಎಂದರು. ನಂತರ ನಿರ್ಮಾಪಕ ಹೊಸೂರು ಮೂಲದ ಶ್ರೀನಿವಾಸ್ ಮಾತನಾಡಿ ಮೂಲತಃ ನಾನೊಬ್ಬ ಡೆವಲಪರ್, ನಿರ್ದೇಶಕರು ನನಗೆ 15 ವರ್ಷಗಳಿಂದ ಪರಿಚಯ. ಈ ಕಥೆ ಹೇಳಿದಾಗ ಚೆನ್ನಾಗಿದೆ ಅನಿಸಿ ನಿರ್ಮಾಣಕ್ಕೆ ಮುಂದಾದೆ. ಚಿತ್ರದಲ್ಲಿ ನಾನೂ ಸಹ ಒಂದು ಪಾತ್ರ ಮಾಡಿದ್ದೇನೆ. ಅತಿಯಾದ ಆಸೆಗೆ ಬಿದ್ದಾಗ ನಾವು ಹೇಗೆ ಮೋಸ ಹೋಗ್ತೀವಿ ಅಂತ ಚಿತ್ರದಲ್ಲಿ ತೋರಿಸಿದ್ದೇವೆ. ಫಾರೆಸ್ಟ್ ಹಿನ್ನೆಲೆಯ ಆಕ್ಷನ್, ಥ್ರಿಲ್ಲರ್ ಕಥಾನಕ ಚಿತ್ರದಲ್ಲಿದೆ ಎಂದರು.

 

 

ಚಿತ್ರದ ನಾಯಕ ಪ್ರತಾಪ್ ಸಿಂಹ ಮಾತನಾಡಿ ಇದು ನನ್ನ ಆರನೇ ಚಿತ್ರ. ಈ ಹಿಂದೆ ಸ್ಥಬ್ದ ಎಂಬ ಚಿತ್ರ ಮಾಡಿದ್ದೆ. ಸೇಲಂನಲ್ಲಿ ನಡೆದ ನೈಜ ಘಟನೆಯನ್ನು ಪ್ರೇರಣೆಯಾಗಿಟ್ಟುಕೊಂಡು ನಿರ್ದೇಶಕರು ಈ ಚಿತ್ರಕಥೆ ಹೆಣೆದಿದ್ದಾರೆ. ಅಡ್ವೆಂಚರಸ್ ಆಗಿ ಪ್ರಾರಂಭವಾಗೋ ಚಿತ್ರ ನಂತರ ಆಕ್ಷನ್ ಮೂಲಕ ರಂಜಿಸುತ್ತದೆ ಎಂದರು. ಚಿತ್ರದ ಸಹ ನಿರ್ಮಾಪಕ ಸುನಿಲ್ ಕುಮಾರ್ ಮಾತನಾಡಿ ನಿರ್ಮಾಣದ ಜತೆ ಖಳನಾಯಕನ‌ ಪಾತ್ರಕ್ಕೆ ನಾನು ಬಣ್ಣ ಹಚ್ಚಿದ್ದೇನೆ. ವಿಭಿನ್ನವಾದ ಸ್ಕ್ರೀನ್ ಪ್ಲೈ ಚಿತ್ರದಲ್ಲಿದೆ ಎಂದರು.

 

 

ಈಗಾಗಲೇ ಐದಾರು ಚಿತ್ರಗಳಲ್ಲಿ ನಟಿಸಿರುವ ನಟಿ ಯಶಸ್ವಿನಿಗೌಡ ಅವರು ಈ ಚಿತ್ರದಲ್ಲಿ ಡೇರಿಂಗ್ ಥರದ ವಿಲನ್ ಶೇಡ್ ಇರುವ, ಚಾಲೆಂಜಿಂಗ್ ಪಾತ್ರವನ್ನು ನಿರ್ವಹಿಸಿದ್ದಾರೆ.
ನಟಿ ರಕ್ಷಿತ ಈ ಚಿತ್ರದಲ್ಲಿ ಲೀಡ್ ರೋಲ್ ಮಾಡಿರೋದಾಗಿ ಹೇಳಿದರೆ, ಮತ್ತೊಬ್ಬ ನಟಿ ಖುಷಿ ಮಾತ‌ನಾಡಿ ತಾನು ರಗಡ್ ಪೊಲೀಸ್ ಪಾತ್ರ ನಿರ್ವಹಿಸಿರುವುದಾಗಿ ಹೇಳಿಕೊಂಡರು. ನಟಿ ನಂದಿನಿ ಅಲ್ಲದೆ ನಟ ಜಗದೀಶ್ ಕೊಪ್ಪ ಇವರೆಲ್ಲ ತಮ್ಮ ಪಾತ್ರಗಳ ಕುರಿತಂತೆ ಹೇಳಿದರು.
ಸಂಗೀತ ನಿರ್ದೇಶಕ ಎಟಿ. ರವೀಶ್ ಮಾತನಾಡಿ ಇದು ನನ್ನ 50ನೇ ಸಿನಿಮಾ. ಚಿತ್ರದಲ್ಲಿ 5 ಹಾಡುಗಳಿವೆ.ಇವತ್ತು ಒಂದು ಸಾಂಗ್, ಟೀಸರ್ ರಿಲೀಸಾಗುತ್ತಿದೆ ಎಂದರು.

Spread the love
Click to comment

Copyright © 2019 PopcornKannada.com