News

ದರ್ಜಿಯ ಅಂಗಡಿಯಲ್ಲಿ ಅರಳಿದ ಪ್ರೇಮಕಥೆ; ‘ಕನಸಲು..’ ಆಲ್ಬಮ್ ಹಾಡು ಬಿಡುಗಡೆ

Published

on

ನವಿರಾದ ಪ್ರೇಮದ ಭಾವನೆಗಳನ್ನು ಹೊತ್ತ ‘ಕನಸಲು..’ ಎಂಬ ಆಲ್ಬಮ್ ಗೀತೆಯು ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಯುವ ಪ್ರತಿಭೆ ಶ್ರೀರಾಮ್ ಗಂಧರ್ವ ಅವರ ಸಾರಥ್ಯದಲ್ಲಿ ಮೂಡಿಬಂದಿರುವ ಈ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಚಿತ್ರರಂಗದ ಹಲವು ಯುವ ಪ್ರತಿಭೆಗಳು ಒಂದೇ ವೇದಿಕೆಯಲ್ಲಿ ಸೇರಿದ್ದರು. ಹಾಡನ್ನು ವೇದಿಕೆಯಲ್ಲಿ ಸಾಂಕೇತಿಕವಾಗಿ ಬಿಡುಗಡೆ ಮಾಡಿ, ಬಳಿಕ ಪರದೆಯ ಮೇಲೆ ಪ್ರದರ್ಶಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ‘ಕಂಗ್ರಾಜುಲೇಶನ್ಸ್ ಬ್ರದರ್ಸ್’ ಚಿತ್ರದ ನಾಯಕ ರಕ್ಷಿತ್ ನಾಗ್, ಶ್ರೀರಾಮ್ ಗಂಧರ್ವ ಅವರಿಗೆ ಶುಭ ಹಾರೈಸಿ, ನಿರಂತರವಾಗಿ ಹೊಸ ಹಾಡುಗಳನ್ನು ನೀಡುವ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯಬೇಕು ಎಂದು ಸಲಹೆ ನೀಡಿದರು.

 

ಖ್ಯಾತ ಜಾನಪದ ಗಾಯಕ ಜೋಗಿಲಾ ಸಿದ್ಧರಾಜು ಮಾತನಾಡಿ, ಹಲವು ವರ್ಷಗಳಿಂದ ಜನಪದ ಗಾಯನ ಕ್ಷೇತ್ರದಲ್ಲಿರುವ ತಮ್ಮ ಅನುಭವವನ್ನು ಹಂಚಿಕೊಂಡರು. ಕಳೆದ ಒಂದು ದಶಕದಲ್ಲಿ ಹಲವು ಸಿನಿಮಾಗಳಿಗೆ ಹಾಡಿರುವುದಾಗಿ ತಿಳಿಸಿದ ಅವರು, ರಾಗ ಸಂಯೋಜನೆಯೊಂದಿಗೆ ಗಾಯನವನ್ನೂ ನಿರ್ವಹಿಸಿರುವ ಶ್ರೀರಾಮ್ ಗಂಧರ್ವ ಅವರ ಬಹುಮುಖ ಪ್ರತಿಭೆಯನ್ನು ಮೆಚ್ಚಿಕೊಂಡರು. ಕನ್ನಡ ಚಿತ್ರರಂಗದಲ್ಲಿ ಹೊರಗಿನ ಗಾಯಕ–ಗಾಯಕಿಯರಿಗೆ ಹೆಚ್ಚಿನ ಅವಕಾಶ ಸಿಗುತ್ತಿರುವ ಸಂದರ್ಭದಲ್ಲಿ, ಸ್ಥಳೀಯ ಪ್ರತಿಭೆಗಳು ಬೆಳಕಿಗೆ ಬರಲು ‘ಕನಸಲು..’ನಂತಹ ಆಲ್ಬಮ್‌ಗಳು ಸಹಕಾರಿಯಾಗುತ್ತವೆ ಎಂದರು. ಹಾಡಿನ ಕಥೆಯು ಟೈಲರಿಂಗ್ ಶಾಪ್ ಸುತ್ತಮುತ್ತ ನಡೆಯಲಿದ್ದು, ಅಲ್ಲಿ ಕೆಲಸ ಮಾಡುವ ಯುವಕನೊಬ್ಬ ಅಲ್ಲಿಗೆ ಬರುವ ಮೀರಾ ಎಂಬ ಯುವತಿಯತ್ತ ಆಕರ್ಷಿತನಾಗುವ ಕಥೆಯನ್ನು ಸರಳವಾಗಿ ಕಟ್ಟಿಕೊಡಲಾಗಿದೆ. ಪ್ರೇಮಕ್ಕೆ ಮೀರಾಳ ಪ್ರತಿಕ್ರಿಯೆ ಏನು ಎಂಬ ಕುತೂಹಲವನ್ನು ಹಾಡಿನ ಅಂತ್ಯದಲ್ಲಿ ತೆರೆದಿಡಲಾಗಿದೆ.

 

 

 

 

 

ಈ ಆಲ್ಬಮ್ ಮೂಲಕ ಯುವ ನಟ ದರ್ಶನ್ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ್ದಾರೆ. ಹಾಡಿನಲ್ಲಿ ಪ್ರಿಯಕರನ ಪಾತ್ರ ನಿರ್ವಹಿಸಿರುವ ಅವರು, ಇದು ತಮ್ಮ ನಟನಾ ಪಯಣದ ಹೊಸ ಅನುಭವ ಎಂದು ಹೇಳಿದರು. ಮೀರಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗಗನಾ ಅವರಿಗೆ ಈಗಾಗಲೇ ಸಿನಿಮಾ ಹಾಗೂ ವೆಬ್ ಸಿರೀಸ್‌ಗಳಲ್ಲಿ ಅಭಿನಯಿಸಿದ ಅನುಭವವಿದ್ದು, ‘ಕನಸಲು..’ ತಮ್ಮ ಮೊದಲ ಆಲ್ಬಮ್ ಸಾಂಗ್ ಎಂದು ತಿಳಿಸಿದರು. ನಿರ್ದೇಶಕರು ಚಿತ್ರೀಕರಣಕ್ಕೂ ಮುನ್ನ ವಿವರಿಸಿದ ರೀತಿಯಲ್ಲೇ ಹಾಡನ್ನು ತೆರೆಗೆ ತಂದಿದ್ದು, ಸಾಮಾನ್ಯ ಹಳ್ಳಿಯ ಪರಿಸರದಲ್ಲಿ ನಡೆಯುವ ಸಹಜ ಮತ್ತು ಮುದ್ದಾದ ಪ್ರೇಮಕಥೆಯನ್ನು ಚಿತ್ರಿಸಲಾಗಿದೆ ಎಂದು ಗಗನಾ ಹೇಳಿದರು. ಶ್ರೀರಾಮ್ ಗಂಧರ್ವ ಅವರ ತಂದೆ ಹಾಗೂ ನಿರ್ದೇಶಕ ಗಂಧರ್ವ ಕೂಡ ಪುತ್ರನ ಪ್ರಯತ್ನವನ್ನು ಶ್ಲಾಘಿಸಿ, ಸಿನಿಮಾದಲ್ಲಿ ಸೀಮಿತ ಅವಧಿಯಲ್ಲಿ ಹೇಳಲಾಗದ ಹಲವು ವಿಚಾರಗಳನ್ನು ಆಲ್ಬಮ್ ಮೂಲಕ ಪರಿಣಾಮಕಾರಿಯಾಗಿ ಕಟ್ಟಿಕೊಡಬಹುದು ಎಂದರು. ಕಲಾವಿದರು ಹಾಗೂ ತಂತ್ರಜ್ಞರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

 

 

 

 

 

‘ಕನಸಲು..’ ಗೀತೆಗೆ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿ, ಹಾಡಿ, ನಿರ್ದೇಶನದ ಜವಾಬ್ದಾರಿಯನ್ನೂ ಶ್ರೀರಾಮ್ ಗಂಧರ್ವ ಅವರೇ ನಿರ್ವಹಿಸಿದ್ದಾರೆ. ಪ್ರೇಮಕಥೆಯನ್ನೇ ಆಧಾರವಾಗಿಟ್ಟುಕೊಂಡು ಹಾಡು ರೂಪಿಸುವ ನಿರ್ಧಾರ ಮೊದಲಿನಿಂದಲೂ ಇತ್ತು. ಪ್ರತಿಯೊಬ್ಬರ ಬದುಕಿನಲ್ಲೂ ಪ್ರೀತಿಯ ಅನುಭವ ಇರುವುದರಿಂದ ಈ ಕಥೆ ಎಲ್ಲರಿಗೂ ಹತ್ತಿರವಾಗುತ್ತದೆ ಎಂದು ಅವರು ಹೇಳಿದರು. ಸಂಗೀತಕ್ಕೆ ಭಾಷೆಯ ಗಡಿ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಶ್ರೀರಾಮ್, ತಮ್ಮ ತಂದೆ ನಿರ್ದೇಶಕರಾಗಿದ್ದರೂ ಈ ಪ್ರಾಜೆಕ್ಟ್‌ನಲ್ಲಿ ಅವರ ನೆರವು ಪಡೆದುಕೊಂಡಿಲ್ಲ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಜುನೈದ್ ಅಹಮದ್ ಕಬೀರ್ ಸಾಹಿತ್ಯ ರಚಿಸಿರುವ ಹಿಂದಿ ಹಾಡನ್ನೂ ಪ್ರದರ್ಶಿಸಲಾಯಿತು. ಆನಂದ್ ಆಡಿಯೋ ಸಂಸ್ಥೆ ಹಾಡನ್ನು ಮೆಚ್ಚಿಕೊಂಡು ಪ್ರಮುಖ ವಾಹಿನಿಯಲ್ಲಿ ಪ್ರಸಾರ ಮಾಡಿರುವುದಾಗಿ ಶ್ರೀರಾಮ್ ಸಂತಸ ವ್ಯಕ್ತಪಡಿಸಿದರು. ನಿರ್ದೇಶಕರಾಗಿ ತಮ್ಮ ಮೂರು ಸಿನಿಮಾಗಳು ಸಿದ್ಧತೆಯಲ್ಲಿದ್ದು, ಒಂದು ಚಿತ್ರದಲ್ಲಿ ಕಿಶೋರ್, ಮತ್ತೊಂದರಲ್ಲಿ ರವಿಶಂಕರ್ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮತ್ತೊಂದು ಬಾಲಿವುಡ್ ಚಿತ್ರವೂ ಚಿತ್ರೀಕರಣದ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು. ಡಾಲಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ರಿಚರ್ಡ್ ನಿರ್ಮಿಸಿರುವ ‘ಕನಸಲು..’ ಹಾಡಿಗೆ ರವಿಕುಮಾರ್ ಬಿ.ಎಂ ಛಾಯಾಗ್ರಹಣ ಹಾಗೂ ಸಂಕಲನ ನಿರ್ವಹಿಸಿದ್ದಾರೆ. ಕೇವಲ ಎರಡು ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಂಡಿದ್ದು, ವಾತಾವರಣವೂ ಸಹಕಾರ ನೀಡಿತು ಎಂದು ಅವರು ಹೇಳಿದರು. ‘ಮತ್ತೆ ಬಂತು ಮಾನ್ಸೂನ್’ ಚಿತ್ರದ ನಿರ್ಮಾಪಕ ಹಾಗೂ ನಾಯಕ ಡಾ. ಮಂಜುನಾಥ್, ತೆಲುಗು ಚಿತ್ರದಲ್ಲಿ ಅಭಿನಯಿಸಿರುವ ಕನ್ನಡದ ಪ್ರತಿಭೆ ನಿಹಾಲ್, ಬರಹಗಾರ ಹರೀಶ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ತಂಡಕ್ಕೆ ಶುಭ ಹಾರೈಸಿದರು.

Spread the love

Copyright © 2019 PopcornKannada.com