Cinema News

ಹಾರರ್ ಕಾಮಿಡಿ ಕಥೆಯ ‘ಶಂಕರಾಭರಣ’; ಶೈನ್ ಶೆಟ್ಟಿ ಸಿನಿಮಾಗೆ ನವೆಂಬರ್ 20ಕ್ಕೆ ಎಂಟ್ರಿ

Published

on

ವಿಭಿನ್ನ ಕಥಾಹಂದರ ಹಾಗೂ ಹೊಸ ರೀತಿಯ ನಿರೂಪಣೆಯ ಮೂಲಕ ಗಮನ ಸೆಳೆಯುತ್ತಿರುವ ‘ಶಂಕರಾಭರಣ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಚಿತ್ರದ ಹೆಸರಿನಲ್ಲೇ ಇರುವ ‘ಶಂಕರಾಭರಣ’ ಬಸ್‌ನ ಪೋಸ್ಟರ್ ಮೂಲಕ ಈ ಸಿನಿಮಾ ಈಗಾಗಲೇ ಕುತೂಹಲ ಮೂಡಿಸಿತ್ತು. ಇದೀಗ ಬಿಡುಗಡೆಯಾಗಿರುವ ಟೀಸರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸ್ಯಾಂಡಲ್‌ವುಡ್ ನಟ ಶೈನ್ ಶೆಟ್ಟಿ ನಾಯಕನಾಗಿ ನಟಿಸಿರುವ ಈ ಸಿನಿಮಾ ಹಾರರ್ ಕಾಮಿಡಿ ಜಾನರ್‌ನಲ್ಲಿ ಮೂಡಿಬಂದಿದ್ದು, ನವೆಂಬರ್ 20ರಂದು ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದೆ.

 

‘ಶಂಕರಾಭರಣ’ ಸಿನಿಮಾದಲ್ಲಿ ಶೈನ್ ಶೆಟ್ಟಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು, ಬಸ್ ಚಾಲಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಶಂಕರಾಭರಣ ಬಸ್‌ನ್ನು ಓಡಿಸುತ್ತಾ ಸಾಮಾನ್ಯ ಜೀವನ ನಡೆಸುವ ವ್ಯಕ್ತಿಯ ಸುತ್ತ ಕಥೆ ಸಾಗಲಿದೆ. ಸಿನಿಮಾದ ವಿಶೇಷತೆಯೆಂದರೆ ಇಲ್ಲಿ ನಾಯಕ ಮತ್ತು ನಾಯಕಿಯಷ್ಟೇ ಬಸ್ ಕೂಡ ಕಥೆಯ ಪ್ರಮುಖ ಪಾತ್ರವಾಗಿರಲಿದೆ. ಈ ಚಿತ್ರದ ಸಾರಥ್ಯವನ್ನು ಸುಮಂತ್ ಭಟ್ ವಹಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಅವರು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾವೊಂದಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ‘ಏಕಂ’ ವೆಬ್ ಸಿರೀಸ್ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ‘ಮಿಥ್ಯ’ ಫೀಚರ್ ಸಿನಿಮಾವನ್ನು ನಿರ್ದೇಶಿಸಿರುವ ಸುಮಂತ್ ಭಟ್, ‘ಶಂಕರಾಭರಣ’ ಮೂಲಕ ಹೊಸ ರೀತಿಯ ಮನರಂಜನೆ ನೀಡಲು ಸಿದ್ಧರಾಗಿದ್ದಾರೆ.

 

 

 

 

ನಟನೆಯ ಜೊತೆಗೆ ‘ಶಂಕರಾಭರಣ’ ಚಿತ್ರದ ಕಥೆಯನ್ನೂ ಶೈನ್ ಶೆಟ್ಟಿ ಅವರೇ ಬರೆದಿದ್ದಾರೆ. ತಮ್ಮ ಜೀವನದಲ್ಲಿ ಕಂಡ ಅನುಭವಗಳು ಹಾಗೂ ಸುತ್ತಮುತ್ತಲಿನ ಬದುಕಿನಲ್ಲಿ ಗಮನಿಸಿದ ಕೆಲವು ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಕಥೆಯನ್ನು ರೂಪಿಸಿರುವುದಾಗಿ ಚಿತ್ರತಂಡ ತಿಳಿಸಿದೆ. ಶೈನ್ ಅವರ ಕಥೆಗೆ ನಿರ್ದೇಶಕ ಸುಮಂತ್ ಭಟ್ ತಮ್ಮದೇ ಆದ ದೃಶ್ಯಾತ್ಮಕ ಸ್ಪರ್ಶ ನೀಡಿದ್ದಾರೆ. ಹೀಗಾಗಿ ಹಾರರ್, ಕಾಮಿಡಿ ಹಾಗೂ ಕಮರ್ಷಿಯಲ್ ಅಂಶಗಳೊಂದಿಗೆ ಸಿನಿಮಾ ಮೂಡಿಬಂದಿದೆ. ಮತ್ತೊಂದೆಡೆ, ಈ ಚಿತ್ರದ ಮೂಲಕ ಶೈನ್ ಶೆಟ್ಟಿ ನಿರ್ಮಾಪಕರಾಗಿಯೂ ಹೊಸ ಹೆಜ್ಜೆ ಇಟ್ಟಿದ್ದಾರೆ.

 

 

 

 

 

ರಂಗಸ್ಥಳ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ದಿವಾಕರ್ ಶೆಟ್ಟಿ ಹಾಗೂ ಶೈನ್ ಶೆಟ್ಟಿ ಜಂಟಿಯಾಗಿ ‘ಶಂಕರಾಭರಣ’ ಚಿತ್ರವನ್ನು ನಿರ್ಮಿಸಿದ್ದಾರೆ. ಕರಾವಳಿ ಮೂಲದ ನಿರ್ಮಾಣ ಸಂಸ್ಥೆಗಳ ಸಾಲಿಗೆ ರಂಗಸ್ಥಳ ಸ್ಟುಡಿಯೋ ಕೂಡ ಸೇರ್ಪಡೆಯಾಗುತ್ತಿರುವುದು ವಿಶೇಷ. ಮುಂದೆ ಗುಣಮಟ್ಟದ ಸಿನಿಮಾಗಳನ್ನು ನಿರ್ಮಿಸುವ ಉದ್ದೇಶದಿಂದ ಆರಂಭವಾಗಿರುವ ಈ ಸಂಸ್ಥೆಯ ಮೊದಲ ಪ್ರಯತ್ನ ‘ಶಂಕರಾಭರಣ’. ಚಿತ್ರದಲ್ಲಿ ತನ್ವಿ ರಾವ್ ನಾಯಕಿಯಾಗಿ ನಟಿಸಿದ್ದು, ಮಲಯಾಳಂನಲ್ಲಿ 17ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಶೈನ್ ಶೆಟ್ಟಿಗೆ ಜೋಡಿಯಾಗಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರ ಪತ್ನಿ ಕೃತಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ.

Spread the love

Copyright © 2019 PopcornKannada.com